ಹಾವೇರಿ: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಲ್ಲಾದ್ಯಂತ ಭರ್ಜರಿ ಸಿದ್ಧತೆ ನಡೆದಿದೆ. ನಗರದ ಮಾರುಕಟ್ಟೆಗಳು ಹಬ್ಬದ ಖರೀದಿಯ ಕಳೆ ಪಡೆದುಕೊಂಡಿವೆ. ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳನ್ನು ಬೆಳಕಿನಿಂದ ಅಲಂಕರಿಸಲು ಜನರು ಬಗೆಬಗೆಯ ಆಕಾಶಬುಟ್ಟಿ, ಹಣತೆ, ಅಲಂಕಾರಿಕ ವಸ್ತುಗಳು, ಹೂವು-ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆಗಳ ಮುಂದೆ ದೀಪ ಬೆಳಗಿಸಿ, ಬಣ್ಣಬಣ್ಣದ ಆಕಾಶಬುಟ್ಟಿಗಳನ್ನು ತೂಗುಹಾಕಿ ಸಂಭ್ರಮಿಸುವುದು ಹಬ್ಬದ ವಿಶೇಷ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿವಿಧ ಆಕಾರ, ವಿನ್ಯಾಸಗಳ ಆಕಾಶಬುಟ್ಟಿಗಳು ಲಗ್ಗೆ ಇಟ್ಟಿವೆ. ಗೋಳಾಕಾರ, ಚೌಕಾಕಾರ, ನಕ್ಷತ್ರ ಹಾಗೂ ಯು ಆಕಾರದ ಆಕಾಶಬುಟ್ಟಿಗಳು ಮಳಿಗೆಗಳಲ್ಲಿ ಸಾಲುಗಟ್ಟಿ ನಿಂತಿವೆ. ಸಾಂಪ್ರದಾಯಿಕ ವಿನ್ಯಾಸಗಳ ಜತೆಗೆ ಆಧುನಿಕ ಚಿತ್ತಾರಗಳಿರುವ ಆಕಾಶಬುಟ್ಟಿಗಳಿಗೂ ಬೇಡಿಕೆ ಹೆಚ್ಚಿದೆ.
ಒಂದು ಕಾಲದಲ್ಲಿ ಬಣ್ಣಬಣ್ಣದ ಕಾಗದಗಳಿಂದ ಮಾತ್ರ ತಯಾರಾಗುತ್ತಿದ್ದ ಆಕಾಶಬುಟ್ಟಿಗಳು ಈಗ ಸಾಕಷ್ಟು ರೂಪಾಂತರಗೊಂಡಿವೆ. ಕಾಗದದ ಜತೆಗೆ ರಟ್ಟು, ಫೈಬರ್, ಪ್ಲಾಸ್ಟಿಕ್ ಹಾಗೂ ಬಟ್ಟೆಗಳಿಂದಲೂ ಆಕರ್ಷಕ ಮಾದರಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿನ್ಯಾಸ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿಯಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದರೆ ದರದಲ್ಲಿಯೂ ಏರಿಕೆಯಾಗಿದೆ. ಆದರೂ ಹಬ್ಬದ ಸಿದ್ಧತೆಯ ಭಾಗವಾಗಿ ಜನರು ತಮ್ಮ ಆಯ್ಕೆಗೆ ತಕ್ಕಂತೆ ಆಕಾಶಬುಟ್ಟಿಗಳನ್ನು ಖರೀದಿಸುತ್ತಿದ್ದಾರೆ.ಬೆಲೆ ಏರಿಕೆ; ಖರೀದಿಗೆ ಹಿಂದೇಟು:ದೀಪಾವಳಿ ಹಿನ್ನೆಲೆಯಲ್ಲಿ ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ಸಿಹಿತಿನಿಸು, ಮೇಣದಬತ್ತಿ, ಹಣತೆ ಹಾಗೂ ಆಕಾಶಬುಟ್ಟಿಗಳ ಖರೀದಿ ಜೋರಾಗಿದೆ. ಆದರೆ, ದಿನಬಳಕೆ ವಸ್ತುಗಳ ಜತೆಗೆ ಹಬ್ಬದ ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ.
ಜಾನುವಾರು, ವಾಹನಗಳಿಗೂ ಅಲಂಕಾರ: ದೀಪಾವಳಿ ಸಂದರ್ಭದಲ್ಲಿ ಕೃಷಿಕರ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತು ಸೇರಿದಂತೆ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕರಿಸುವ ಸಂಪ್ರದಾಯವಿದೆ. ಹೀಗಾಗಿ ಜಾನುವಾರುಗಳ ಅಲಂಕಾರಿಕ ಸಾಮಗ್ರಿಗಳ ಖರೀದಿಯೂ ನಡೆಯುತ್ತಿದೆ. ಮುಗುದಾರ, ಝೂಲ, ಕೊಂಬೆಣಸು, ಹಗ್ಗ, ಹಣೆಕಟ್ಟು, ಗೆಜ್ಜೆಸರ ಹಾಗೂ ಕೊಂಬುಗಳಿಗೆ ಹಚ್ಚುವ ಬಣ್ಣಗಳಿಗೆ ಬೇಡಿಕೆ ಕಂಡುಬಂದಿದೆ. ಮನೆಯ ಸದಸ್ಯರಿಗೆ ಹೊಸ ಬಟ್ಟೆ ಖರೀದಿಸುವ ಜತೆಗೆ ಜಾನುವಾರುಗಳಿಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಮೂಲಕ ರೈತರು ಹಬ್ಬದ ಸಂಭ್ರಮಕ್ಕೆ ಸಿದ್ಧರಾಗುತ್ತಿದ್ದಾರೆ. ಇದರೊಂದಿಗೆ ವಾಹನಗಳ ಅಲಂಕಾರಿಕ ಸಾಮಗ್ರಿಗಳ ಮಾರಾಟವೂ ಚುರುಕುಗೊಂಡಿದೆ.