ಕನ್ನಡಪ್ರಭ ವಾರ್ತೆ, ಹನೂರು
ಹರಕೆ ಹೊತ್ತ ಮಾದಪ್ಪನ ಭಕ್ತರಿಂದ ಮಲೆ ಮಾದೇಶ್ವರನ ಬೆಟ್ಟದಲ್ಲಿ ನಡೆಯುವ ರುದ್ರಾಕ್ಷಿ ಮಂಟಪೋತ್ಸವ, ಬಸವನ ಉತ್ಸವ ಹುಲಿ ವಾಹನ ಉತ್ಸವ ಹಾಗೂ ಬೆಳ್ಳಿಯ ತೇರು ಉತ್ಸವ ಮತ್ತು ಚಿನ್ನದ ತೇರಿನ ಉತ್ಸವ ಸಂಭ್ರಮದಿಂದ ನಡೆಯಿತು.
ವಿಶೇಷ ದಾಸೋಹ: ಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಮತ್ತು ತಮಿಳುನಾಡಿನಿಂದ ಸಹ ಬರುವ ಭಕ್ತರ ಅನುಕೂಲಕ್ಕಾಗಿ ನಿರಂತರ ದಾಸೋಹವನ್ನು ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಲ್ಪಿಸಿದೆ. ಭಕ್ತ ಸಮೂಹ ಮಾದಪ್ಪನ ಬೆಟ್ಟದಲ್ಲಿರುವ ವಸತಿ ನಿಲಯಗಳಲ್ಲಿ ಸಹ ತುಂಬಿ ತುಳುಕುತ್ತಿದೆ. ದೇವಾಲಯದ ಮುಂಭಾಗ ಇರುವ ಡಾರ್ಮೆಂಟರಿಲ್ಲಿಯೂ ಸಹ ವಾಸ್ತವ್ಯ ಮಾಡುವ ಮೂಲಕ ಭಕ್ತರ ದಂಡೆ ಹರಿದು ಬರುತ್ತಿದೆ.ಬಂದೂಬಸ್ತ್‌ಗೆ ಹೆಚ್ಚಿನ ಪೊಲೀಸರನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ನಿಯೋಜನೆ ಮಾಡಲಾಗಿದೆ. ದೇವಾಲಯ ಮುಂಭಾಗ ಹಾಗೂ ಬಸ್ ನಿಲ್ದಾಣ ಮತ್ತು ದಾಸೋಹ ವ್ಯವಸ್ಥೆ ನಡೆಯುವ ಸ್ಥಳ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆ ಕಲ್ಪಿಸಿದೆ.ಮಂಗಳವಾರ ಅಮಾವಾಸ್ಯೆ ಪೂಜೆ ಹಾಲರುವೆ ಉತ್ಸವ, ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳಿಂದ ಹಾಲು ಹಳ್ಳದಿಂದ ಜಲತಂದು ಮಾದೇಶ್ವರನಿಗೆ ಅಭಿಷೇಕ ಮಾಡುವ ಪೂಜಾ ಕಾರ್ಯಕ್ರಮಕ್ಕೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆಯು ಸಹ ನಡೆದಿದೆ.