ನಾಡಿಗೆ ಶ್ರೀಮಠಗಳ ಕೊಡುಗೆ ಅಪಾರವಾಗಿದೆ. ಸಿದ್ಧಗಂಗಾ ಮಠವು ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾಡಿಗೆ ಶ್ರೀಮಠಗಳ ಕೊಡುಗೆ ಅಪಾರವಾಗಿದೆ. ಸಿದ್ಧಗಂಗಾ ಮಠವು ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಆಶೀರ್ವಾದ ಪಬ್ಲಿಕ್ ಸ್ಕೂಲ್ ಹಾಗೂ ಪರಿವರ್ತನ ವಿದ್ಯಾಮಂದಿರದ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು. ನಿರಂತರವಾಗಿ ಅಧ್ಯಯನಶೀಲರಾಗಿ ತಮ್ಮ ಗುರಿ ತಲುಪಿ ಏನಾದರೂ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಆಶೀರ್ವಾದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ವ್ಹಿ.ಸಜ್ಜನ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಿತ್ಯವೂ ಅಕ್ಷರ ಕಲಿಯುತ್ತಾರೆ. ಶಿವಕುಮಾರ ಸ್ವಾಮೀಜಿಯವರು ಜ್ಞಾನ- ಅನ್ನ ದಾಸೋಹಿಯಾಗಿದ್ದರು. ಶ್ರೀಗಳ ಕೊಡುಗೆ ನಾಡಿಗೆ ಅಪಾರವಾಗಿದೆ. ಇವರ ಪುಣ್ಯಸ್ಮರಣೆಯನ್ನು ನಾಡಿನಲ್ಲಿ ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಭವಿಷ್ಯ ಉಜ್ವಲ ಗೊಳಿಸಬೇಕು. ಮಕ್ಕಳು ಮೊಬೈಲ್‌ದಿಂದ ದೂರ ಇರುವಂತೆ ಪಾಲಕರು, ಶಿಕ್ಷಕರು ನೋಡಿಕೊಳ್ಳಬೇಕಾದ ಅಗತ್ಯವಿದೆ. ಮಕ್ಕಳು ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ತಮ್ಮ ತಂದೆ-ತಾಯಿ, ಶಿಕ್ಷಕರ ಹೆಸರು ತರುವಂತೆ ಮಾಡಬೇಕೆಂದರು.ಸಾಹಿತಿ ಶರಣು ಬಸ್ತಾಳ ಮಾತನಾಡಿ, ಆಶೀರ್ವಾದ ಶಿಕ್ಷಣ ಸಂಸ್ಥೆಯ ಹುಟ್ಟು ಹಾಗೂ ಬೆಳವಣಿಗೆ ಹಾಗೂ ಆಶೀರ್ವಾದ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಕೊಡುತ್ತಿರುವ ಉಚಿತ ಶಿಕ್ಷಣದ ಬಗ್ಗೆ ಅತ್ಯಂತ ಸವಿಸ್ತಾರವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಕಾಂತ ಗುರೂಜಿ ಅವರು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಒಂದು ಆಧ್ಯಾತ್ಮ ಹಾಗೂ ಶಿವಕುಮಾರ ಶ್ರೀಗಳ ಕುರಿತು ತ್ರಿವಿಧ ದಾಸೋಹವನ್ನು ಕುರಿತು ಮಾತನಾಡಿದರು.ಮಲ್ಲಣ್ಣ ಲಚ್ಚ್ಯಾಣ, ಆನಂದ ಪತ್ತಾರ, ಸಿದ್ದನಗೌಡ ಪಾಟೀಲ, ಎನ್.ಎಸ್.ಹೂಗಾರ, ಶಿವಪ್ಪ ಸಜ್ಜನ, ಹಣಮಂತರಾಯ ಸೌದಿ, ರೇವಣಸಿದ್ದಯ್ಯ ಹಿರೇಮಠ, ಸಂಸ್ಥೆ ಆಡಳಿತಾಧಿಕಾರಿ ಬಿ.ಟಿ.ದೊಡ್ಡಮನಿ, ಮುಖ್ಯಗುರು ಎಚ್.ಪಿ.ಹೊಸೂರ, ಶಾಲೆಯ ಸಿಬ್ಬಂದಿ ಶಿವರಾಜ ಜಂಗಿ, ಸಿ.ಎನ್.ರಾಠೋಡ, ರವಿ ಬಡಿಗೇರ ಇತರರು ಇದ್ದರು. ಎಸ್.ಜೆ.ತಳವಾರ ಸ್ವಾಗತಿಸಿ, ಗುರುರಾಜ ಚಟ್ಟೇರ ನಿರೂಪಿಸಿದರು.