ಬೆಂಗಳೂರು : ದೀಪಾವಳಿ ಮರುದಿನವೂ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ, ಬಡಾವಣೆಗಳಲ್ಲಿ ಕಸ ವಿಲೇವಾರಿಯಾಗಿರಲಿಲ್ಲ. ಹಲವೆಡೆ ಕಸದ ರಾಶಿ ಸೃಷ್ಟಿಯಾಗಿ ದುರ್ನಾತ ಬೀರುತ್ತಿದ್ದು, ಜನತೆ ಕಿರಿಕಿರಿ ಅನುಭವಿಸತೊಡಗಿದ್ದಾರೆ. ಕಸ ವಿಲೇವಾರಿ ಸಂಬಂಧ ಬಿಬಿಎಂಪಿ ಹೊರಡಿಸಿದ್ದ ಮಾರ್ಗಸೂಚಿಯೂ ಕೇವಲ ನಾಮ್‌ಕೇವಾಸ್ತೆ ಎಂಬಂತಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಬ್ಬದಲ್ಲಿ ಬಳಸಲಾದ ಮಾವಿನೆಲೆ, ಬಾಳೆಕಂದು, ಬೂದುಗುಂಬಳ, ಸುಟ್ಟ ಪಟಾಕಿ ರಾಶಿ, ಪೊಟ್ಟಣಗಳು ನಗರದೆಲ್ಲೆಡೆ ಹರಡಿವೆ. ಮುಖ್ಯವಾಗಿ ಕೆ.ಆರ್.ಮಾರುಕಟ್ಟೆ ಸಮೀಪ ವಿಪರೀತ ಎನ್ನುವಷ್ಟು ಕಸದ ರಾಶಿಯಿದೆ. ಸದ್ಯ ಮಳೆಯಾಗದ ಕಾರಣ ರಾಡಿ, ಕೊಳೆಯುವ ಸ್ಥಿತಿ ಉಂಟಾಗಿಲ್ಲ. ಆದರೂ ಹಣ್ಣು ಮತ್ತಿತರ ತ್ಯಾಜ್ಯಗಳು ನಗರದ ಅಂದಗೆಡಿಸಿವೆ.
ದಸರಾ ಸಂದರ್ಭದಲ್ಲಿ ವಾರಗಟ್ಟಲೆ ಕಸ ವಿಲೇವಾರಿ ಸಾಧ್ಯವಾಗಿರಲಿಲ್ಲ. ಇದಕ್ಕೆ ಮಳೆಯೂ ಕಾರಣವಾಗಿತ್ತು. ಸಮರ್ಪಕ ಕಸ ವಿಲೇವಾರಿಯಾಗದೆ ಕೆಲವು ಭಾಗದಲ್ಲಿ ದುರ್ನಾತ ಬೀರುವಂತಾಗಿತ್ತು. ಕಳೆದ ಬಾರಿ ಸಮಸ್ಯೆ ಎದುರಾಗಿದ್ದರಿಂದ ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ಮಾರುಕಟ್ಟೆಗಳ ಬಳಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿತ್ತಾದರೂ ಕೆಲವು ಮಾರುಕಟ್ಟೆಗಳ ಬಳಿ ಸಮರ್ಪಕವಾಗಿ ವಿಲೇವಾರಿಯಾಗಿರಲಿಲ್ಲ. ಭಾನುವಾರ ಕೆ.ಆರ್. ಮಾರುಕಟ್ಟೆ ಬಳಿಯೇ ಸುಮಾರು ನಾಲ್ಕೈದು ಲೋಡುಗಳಷ್ಟು ಕಸ ರಾಶಿ ಕಾಣಿಸುತ್ತಿದೆ.
ಹಬ್ಬಕ್ಕೆ ವ್ಯಾಪಾರಕ್ಕೆಂದು ತಂದ ಬಾಳೆಕಂದು, ಹೂವು, ಬೂದಗುಂಬಳ ಖರೀದಿಯಾಗದ ಕಾರಣ ವ್ಯಾಪಾರಿಗಳು ಅವುಗಳನ್ನು ಬಹುತೇಕ ಬಡಾವಣೆಗಳಲ್ಲಿ ರಸ್ತೆ ಬದಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ರಸ್ತೆ ಇಕ್ಕೆಲಗಳಲ್ಲಿ ಈಗಲೂ ಕಸವಿದೆ. ಹಳೆ ಮದ್ರಾಸ್ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆಗಳಲ್ಲಿನ ಸರ್ವೀಸ್ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಅದನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಕುಸಿದ ಗಾಳಿ ಗುಣಮಟ್ಟ
ಕಳೆದ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಪಟಾಕಿ ಸಿಡಿಸಲಾಗಿದ್ದು, ಎಲ್ಲ ಭಾಗದಲ್ಲೂ ಗಾಳಿಯ ಗುಣಮಟ್ಟ ಕುಸಿದು ಮಾಲಿನ್ಯ ಹೆಚ್ಚಳವಾಗಿದೆ. ಕಸ ಸಿಡಿಸಿದ ನಂತರ ರಸ್ತೆಗಳಲ್ಲಿ ಬಿದ್ದ ಕಾಗದದ ಚೂರು, ಕಡ್ಡಿಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿದೆ. ಪಟಾಕಿ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲೇ ವಿಲೇವಾರಿ ಮಾಡಬೇಕು. ಆದರೆ, ತ್ಯಾಜ್ಯ ಸಂಗ್ರಹಕಾರರು ಸಾಮಾನ್ಯ ಕಸದಲ್ಲಿ ಬೆರೆಸಿಕೊಂಡು ಹೋಗುತ್ತಿದ್ದಾರೆ ಎಂದು ಪ್ರಜ್ಞಾವಂತರು ಆಕ್ಷೇಪಿಸಿದ್ದಾರೆ.