ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಕಣ್ಣಿಗೆ ಕುಕ್ಕುವ ಬಣ್ಣ ಬಣ್ಣದ ಹೂವುಗಳ ರಾಶಿ, ಅಲಂಕೃತ ದೀಪಗಳು, ಆಕಾಶ ಬುಟ್ಟಿ, ಬಹು ಬಗೆಯ ಕುಂಬಳಕಾಯಿ, ತರಹೇವಾರಿ ಹಣ್ಣು ಹಂಪಲುಗಳ ಘಮಲು, ದೀಪಗಳ ಹಬ್ಬ ದೀಪಾವಳಿಗೆ ಲಿಂಗಸುಗೂರು ಪಟ್ಟಣದ ಹೃದಯ ಭಾಗವಾದ ಗಡಿಯಾರ ಚೌಕ್ ವೃತ್ತದಲ್ಲಿ ವ್ಯಾಪಾರದ ಸಂಭ್ರಮ ನೋಡುಗರ ಗಮನ ಸೆಳೆಯುತ್ತದೆ.ಪುರಸಭೆ, ಪೊಲೀಸ್ ಠಾಣೆಯ ರಸ್ತೆಯ ಇಕ್ಕೆಲಗಳಲ್ಲಿ ಗಮ್ಮೆನ್ನುವ ಸೇವಂತಿ, ಚಂಡೆ, ಅಡಿಕೆ, ಮಲ್ಲಿಗೆ, ಕನಕಾಂಬರಿ, ಕೆಂಪು, ಹಳದಿ, ಶ್ವೇತ, ನೀಲಿ, ಬಿಳಿ ಬಣ್ಣದಲ್ಲಿ ಹೊಳೆಯುವ ಹೂವುಗಳ ರಾಶಿ ಜೊತೆಗೆ ಬಾಳೆ ಹಣ್ಣು, ಸೀತಾಫಲ, ಬಾರಿ ಹಣ್ಣು, ಬೆಳವಲ ಹಣ್ಣು, ಸೇಬು, ದ್ರಾಕ್ಷಿ, ಮೊಸಂಬಿ, ಸಪೋಟ, ಪೇರಲ, ಏಲಕ್ಕಿ ಬಾಳೆಹಣ್ಣು, ನಿಂಬೆಹಣ್ಣು, ಡಬಗಳಿಹಣ್ಣು (ಡ್ಯಾಗನ್ ಪ್ರೂಟ್) ತರಹೇವಾರಿ ಫಲಪುಷ್ಪಗಳು. ಮಳಿಗೆಗಳ ಮುಂಭಾಗದಲ್ಲಿ ಇಳಿಬಿಟ್ಟ ಆಕಾಶಬುಟ್ಟಿ, ವಿದ್ಯುತ್ ದೀಪಗಳು, ಅಲ್ಲಲ್ಲಿ ಕಾಣುವ ಆಕರ್ಷಕ ವಿನ್ಯಾಸದಲ್ಲಿ ತಯಾರಿಸಿ ಹಣತೆಗಳು ಎಣ್ಣೆ ಇಲ್ಲದೇ ಬೆಳಗುವ ಧಿಮಾಕಿನಲ್ಲಿ ಶೋಭಿಸುತ್ತಿವೆ. ಇನ್ನೂ ತೆಂಗಿನ ಗರಿ, ಹೊಂಬಾಳೆ, ಕಬ್ಬು, ಮಾವಿನ ಎಲೆೆ, ಬಾಳೆದಿಂಡು, ಕರಿ ಕುಂಬಳಕಾಯಿ, ಬೂದುಗುಂಬಳ, ಕುಂಬಳಿಕಾಯಿ ದೀಪಾವಳಿಗೆ ಫಲಪುಷ್ಪಗಳ ಹೊಸ ಮಾರುಕಟ್ಟೆಯೇ ನಿರ್ಮಾಣಗೊಂಡಿದ್ದು, ಹಬ್ಬದ ಸಡಗರಕ್ಕೆ ಮಾರುಕಟ್ಟೆಯಲ್ಲಿ ನೆರೆದ ಜನಜಂಗುಳಿಯೇ ಸಾಕ್ಷಿಯಾಗಿದೆ.
ನಾಲ್ಕೈದು ವರ್ಷಗಳಿಂದ ದೀಪಾವಳಿಯ ಮಾರುಕಟ್ಟೆಯಲ್ಲಿ ಹೂವು ಮಾರಾಟ ಮಾಡುತ್ತೇವೆ, ಹಬ್ಬವುದ ವಹಿವಾಟು ಇನ್ನೂ ನಾಲ್ಕೈದು ದಿನಗಳು ಇರುತ್ತದೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಮಾರಾಟ ಮಾಡಿದ್ದೇನೆ. ಪ್ರತಿ ಸಲಕ್ಕಿಂತ ಈ ವರ್ಷ ಹೆಚ್ಚಿನ ವ್ಯಾಪಾರ ಆಗಿದೆ. ದೀಪಾವಳಿಯಲ್ಲಿ ವಿಶೇಷ ಫಲಪುಷ್ಪ ಗಳ ಮಾರಾಟಕ್ಕೆ ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಆಗಮಿಸುತ್ತಾರೆ, ಈ ಪ್ರಸಕ್ತ ಉತ್ತಮ ವ್ಯಾಪಾರ ಇದೆ ಎಂದು ಸುರೇಶ ಲಿಂಗಸುಗೂರು ಎಂಬ ವ್ಯಾಪಾರಿ ತಿಳಿಸಿದರು.ದೀಪಾವಳಿ ಹಬ್ಬದ ಆಚರಣೆ ಜನರು ಫಲಪುಷ್ಪಗಳನ್ನು ಮುಗಿಬಿದ್ದು, ಖರೀದಿ ಮಾಡುತ್ತಿದ್ದಾರೆ. ಪೊಲೀಸ್ ಠಾಣೆ ಹಾಗೂ ಪುರಸಭೆ ಮುಂಭಾಗದ ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ವ್ಯಾಪಾರಿಗಳ ಫಲಪುಷ್ಪಗಳ ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಆದಿಯಾಗಿ ನಾಗರೀಕರು ಮುಗಿಬಿದ್ದು ಸರಕು, ಸರಂಜಾಮುಗಳ ಖರೀದಿಗೆ ಕಿಕ್ಕಿರಿದು ನೆರೆದಿದ್ದಾರೆ. ಎರಡು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಸಂದು ಇಲ್ಲದಷ್ಟು ಜನಜಂಗುಳಿ ಇದೆ. ಇನ್ನೂ ಗಡಿಯಾರ ವೃತ್ತದ ವಿಶಾಲ ಪ್ರದೇಶದಲ್ಲಿಯೂ ವ್ಯಾಪಾರ ಭರಾಟೆ ಇದೆ.
ಲಕ್ಷ್ಮೀ ಪೂಜೆ ವಿಶೇಷ
ದೀಪಾವಳಿ ನಿಮಿತ್ತ ವರ್ತಕರು, ಅಂಗಡಿ-ಮುಂಗಟ್ಟುಗಳಲ್ಲಿ ಲಕ್ಷ್ಮೀಪೂಜೆ ವಿಶೇಷ ಆಚರಣೆ ಮಾಡುತ್ತಾರೆ. ಚಿನ್ನ, ಬೆಳ್ಳಿಯ ಆಭರಣದಲ್ಲಿ ಶೋಭಿತ ಲಕ್ಷ್ಮೀದೇವಿ ಯನ್ನು ವರ್ತಕರು ವಿಜೃಂಭಣೆಯಿಂದ ಪೂಜೆ ಮಾಡಿ ಬಳಿಕ ಬಾಣ ಬಿರುಸುಗಳು ಆಕಾಶದೆತ್ತರಕ್ಕೆ ಹಾರಿಸುತ್ತಾರೆ. ಹಬ್ಬದ ನಿಮಿತ್ತ ಮಾಲೀಕರು, ಕೂಲಿಕಾರರು, ಚಾಲಕರು ಸೇರಿದಂತೆ ಕೆಲಸಗಾರರಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇದರಿಂದ ದೀಪಾವಳಿ ಸಡಗರ, ಸಂಭ್ರಮದಿಂದ ಆಚರಣೆಗೊಳ್ಳುತ್ತದೆ.