ಗಂಗಾವತಿಯಲ್ಲಿ ಇಸ್ಪೀಟ್‌ ಆಟಕ್ಕೆ ಸ್ಥಳ ಹುಡುಕಾಟ!

KannadaprabhaNewsNetwork |  
Published : Nov 07, 2026, 03:00 AM IST
ಇಸ್ಪೀಟ್ (ಎಐ ಚಿತ್ರ) | Kannada Prabha

ಸಾರಾಂಶ

ದೀಪಾವಳಿ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನಲ್ಲಿ ಇಸ್ಪೀಟ್‌ ಆಡುವವರು ಚಿಂತೆಗೀಡಾಗಿದ್ದಾರೆ. ನಗರ ಪ್ರದೇಶದಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟು ಮಾಡಿರುವುದರಿಂದ ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶ ಹುಡುಕುತ್ತಿದ್ದಾರೆ.

ರಾಮಮೂರ್ತಿ ನವಲಿ

ಗಂಗಾವತಿ: ದೀಪಾವಳಿ ಎಂದರೆ ದೀಪಗಳ ಹಬ್ಬ ಎಂದೇ ಖ್ಯಾತಿ. ಆದರೆ ವಾಣಿಜ್ಯ ನಗರ ಗಂಗಾವತಿಯಲ್ಲಿ ದೀಪಾವಳಿ ಹಬ್ಬ ಬಂದರೆ ಇಸ್ಪೀಟ್‌ ಆಡುವುದಕ್ಕೆ ಜೂಜುಕೋರರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಾರೆ! ಈ ಹಿಂದೆ ನಗರದ ಅಚ್ಚಕಟ್ಟು ಪ್ರದೇಶದಲ್ಲಿ 12 ತಿಂಗಳ ಕಾಲ ಇಸ್ಪೀಟ್‌, ಇತರ ಜೂಜಾಟಗಳು ನಡೆಯುತ್ತಿದ್ದವು. ಹಲವು ಬಾರಿ ನಡೆದ ಪೊಲೀಸ್ ದಾಳಿ ಅದಕ್ಕೆ ಸಾಕ್ಷಿ. ಕೇವಲ ಇಸ್ಪೀಟ್‌ ಅಷ್ಟೇ ಅಲ್ಲ, ಕಾನೂನುಬಾಹಿರ ಚಟುವಟಿಕೆ ತಾಣವಾಗಿ ಪರಿವರ್ತನೆಯಾಗಿದೆ.

ಪೊಲೀಸ್ ಅನುಮತಿಗೆ ಶಿಫಾರಸು: ಕೊಪ್ಪಳ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಅವರು ಈಗಾಗಲೇ ಗಂಗಾವತಿ ಹಾಗೂ ಇತರ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ಇಸ್ಪೀಟ್‌ ಮತ್ತು ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಿದ್ದಾರೆ. ನಗರದ ಸಿಬಿಎಸ್ ಗಂಜ್, ಹೊಸಳ್ಳಿ ರಸ್ತೆ, ವಿದ್ಯಾನಗರ, ಹೇರೂರು ರಸ್ತೆ, ಸಿದ್ದಿಕೇರಿ, ಶ್ರೀರಾಮನಗರ, ಗುಂಡೂರು ಕ್ಯಾಂಪ್ ರಸ್ತೆ ಮಾರ್ಗ ಸೇರಿದಂತೆ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಸ್ಪೀಟ್‌ ದಂಧೆ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ದಂಧೆಗೆ ಕಡಿವಾಣ ಬಿದ್ದಿದೆ.

ದೀಪಾವಳಿ ಹಿನ್ನೆಲೆಯಲ್ಲಿ ಒಂದು ವಾರ ಇಸ್ಪೀಟ್‌ಗೆ ಅನುಮತಿ ಪಡೆಯಲು ಕೆಲವರು ರಾಜಕಾರಣಿಗಳ ಬೆನ್ನು ಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಶಿಫಾರಸು ಮಾಡುವಂತೆ ಕೋರುತ್ತಿದ್ದಾರೆ.

ಗುಡ್ಡಗಾಡಿನತ್ತ ಆಟಗಾರರು: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್‌ ಆಟಕ್ಕೆ ಇಲಾಖೆ ಕಡಿವಾಣ ಹಾಕಿದರೆ, ಆಟ ಆಡಿಸುವವರು ಈಗಾಗಲೇ ಗುಡ್ಡಗಾಡು ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೂಜಾಟಕ್ಕಾಗಿ ನಗರಕ್ಕೆ ಹೊಂದಿಕೊಂಡಿರುವ ದೇವಘಾಟ್, ಸಿದ್ದಿಕೇರಿ, ವಾಣಿಭದ್ರೇಶ್ವರ ಬೆಟ್ಟವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ನಗರದಲ್ಲಿ ಮನೆ ಬಾಡಿಗೆ ಪಡೆಯುವ ಯತ್ನ ನಡೆಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಬೈಕ್ ಕಳ್ಳರ ಸಂಖ್ಯೆಯೂ ಹೆಚ್ಚಾಗಿದೆ. ದೀಪಾವಳಿ ಹಬ್ಬಕ್ಕೆ ಪೊಲೀಸ್ ಇಲಾಖೆ ಕಾನೂನುಬಾಹಿರ ಚಟುವಟಿಕೆಗೆ ಅನುಮತಿ ನೀಡದೆ, ದೀಪಗಳ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವುದಕ್ಕೆ ಸಹಕರಿಸಿದರೆ ಹಬ್ಬಕ್ಕೆ ಮೆರುಗು ಬರುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ದೀಪಾವಳಿ ನೆಪದಲ್ಲಿ ಇಸ್ಪೀಟ್, ಜೂಜಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ರಸ್ತೆ ಬದಿ, ಹೋಟೆಲ್‌ಗಳು ಸೇರಿದಂತೆ ನಗರದ ಯಾವುದೇ ಪ್ರದೇಶದಲ್ಲಿ ಇಸ್ಪೀಟು ಹಾಗೂ ಹಣವನ್ನು ಪಣಕ್ಕಿಟ್ಟು ಜೂಜಾಟ ನಡೆಸುವುದು ಕಂಡುಬಂದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಂಗಾವತಿ ನಗರ ಠಾಣೆ ಪಿಐ ಪ್ರಕಾಶ ಯಾತನೂರು ಹೇಳಿದರು.ಗಂಗಾವತಿ ನಗರದಲ್ಲಿ ಇತ್ತೀಚೆಗೆ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿದೆ. ಗಾಂಜಾ, ಮದ್ಯಪಾನ, ಇಸ್ಪೀಟ್, ಮಟಕಾ ದಂಧೆಗಳು ಕದ್ದು ಮುಚ್ಚಿ ನಡೆಯುತ್ತಿದೆ. ನಗರದಲ್ಲಿ ಕಳ್ಳತನ, ಬೈಕ್‌ಗಳ ಕಳ್ಳತನ ನಡೆಯುತ್ತಿರುವುದು ಹೊಸದೇನಲ್ಲ. ಕಾರಣ ದೀಪಾವಳಿ ಹಬ್ಬಕ್ಕೆ ಪೊಲೀಸ್ ಇಲಾಖೆ ಯಾವುದೇ ಇಸ್ಪೀಟ್‌, ಜೂಜಾಟಗಳಿಗೆ ಅನುಮತಿ ನೀಡಬಾರದು ಎಂದು ಗಂಗಾವತಿಯ ರಂಗಸ್ವಾಮಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ