ಬೆಲೆ ಏರಿಕೆ ನಡುವೆಯೂ ದೀಪಾವಳಿ ಖರೀದಿ ಭರಾಟೆ

KannadaprabhaNewsNetwork |  
Published : Nov 08, 2026, 02:00 AM IST
ಹುಬ್ಬಳ್ಳಿ ದುರ್ಗದಬೈಲ್‌ನಲ್ಲಿ ಬಣ್ಣಬಣ್ಣದ ಹಣತೆ ಖರೀದಿಸಿದ ಜನತೆ. | Kannada Prabha

ಸಾರಾಂಶ

ಹೂವು, ಹಣ್ಣು, ಹಣತೆ, ಆಕಾಶಬುಟ್ಟಿ ಸೇರಿದಂತೆ ದೀಪಾವಳಿ ಅಲಂಕಾರಿಕ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ.

ಹುಬ್ಬಳ್ಳಿ:

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ದೀಪಾವಳಿ ಹಬ್ಬದ ಸಂಭ್ರಮ ಕಳೆಕಟ್ಟಿದ್ದು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಹೂವು, ಹಣ್ಣು, ಹಣತೆ, ಆಕಾಶಬುಟ್ಟಿ ಸೇರಿದಂತೆ ದೀಪಾವಳಿ ಅಲಂಕಾರಿಕ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಜೇಬಿನ ಲೆಕ್ಕಾಚಾರದ ನಡುವೆಯೇ ಹಬ್ಬದ ಸಂಭ್ರಮಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದು, ಶನಿವಾರ ನಗರದ ಪ್ರಮುಖ ಮಾರುಕಟ್ಟೆಗಳು ಜನಜಂಗುಳಿಯಿಂದ ತುಂಬಿತ್ತು.

ಜನತಾ ಬಜಾರ್‌, ದುರ್ಗದಬೈಲ್‌, ಕೊಪ್ಪಿಕರ ರಸ್ತೆ, ದಾಜಿಬಾನ್‌ಪೇಟೆ ಹಾಗೂ ಮರಾಠಗಲ್ಲಿಯಲ್ಲಿ ಬೆಳಗ್ಗೆಯಿಂದಲೇ ಜನರು ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳು ₹10ರಿಂದ ₹100, ಆಕಾಶಬುಟ್ಟಿ ₹100ರಿಂದ ₹15000, ಬಿದಿರು, ಬಟ್ಟೆ, ಸ್ಟಾರ್‌ ಹಾಗೂ ತುಳಸಿಕಟ್ಟಿಯ ಆಕಾಶಬುಟ್ಟಿಗಳ ಜತೆಗೆ ಲೈಟಿಂಗ್‌ ಹಣತೆ, ವಿದ್ಯುತ್‌ ದೀಪಗಳ ಸರಗಳಿಗೂ ಬೇಡಿಕೆ ಕಂಡುಬಂದಿದೆ. ಹೂವು-ಹಣ್ಣುಗಳ ದರವೂ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ. ಒಂದು ಮಾರು ಸೇವಂತಿಗೆ, ಕನಕಾಂಬರಿಗೆ ತಲಾ ₹100, ಮಲ್ಲಿಗೆ ₹50, ಚೆಂಡುಹೂವು ₹100, ಕಮಲದ ಹೂವು ₹50 ಹಾಗೂ ಗುಲಾಬಿ ₹20ಕ್ಕೆ ಮಾರಾಟವಾಗುತ್ತಿವೆ. ಸೇಬು ಕೆಜಿಗೆ ₹250, ಮೋಸಂಬಿ ₹160, ಸೀತಾಫಲ ₹150, ದಾಳಿಂಬೆ ₹ 250, ಪೇರಲ ₹ 200 ಹಾಗೂ ಏಲಕ್ಕಿ ಬಾಳೆ ₹ 120 ದರವಿದೆ. ದೊಡ್ಡ ಬಾಳೆಹಣ್ಣು ಡಜನ್‌ಗೆ ₹ 80, ಜೋಡಿ ಕಬ್ಬು ಮತ್ತು ಬಾಳೆದಿಂಡಿಗೆ ತಲಾ ₹60ಕ್ಕೆ ಮಾರಾಟವಾದವು.

ಪಟಾಕಿಗೂ ಭರ್ಜರಿ ಬೇಡಿಕೆ:

ನಕ್ಷತ್ರ ಕಡ್ಡಿ, ಶಬ್ದ ಹೊರಡಿಸುವ ಪಟಾಕಿ, ಬಳ್ಳೊಳ್ಳಿ ಸೇರಿದಂತೆ ವಿವಿಧ ಬಗೆಯ ಪಟಾಕಿಗಳ ಖರೀದಿಗೆ ಮಕ್ಕಳು, ಯುವಕರು ಮುಗಿಬಿದ್ದಿದ್ದರು.

ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾದಂತೆ ವಾಹನ ದಟ್ಟಣೆಯೂ ಉಲ್ಬಣಗೊಂಡಿತು. ಎಲ್ಲೆಂದರಲ್ಲಿ ವಾಹನ ನಿಲುಗಡೆ, ರಸ್ತೆ ಬದಿಯ ವ್ಯಾಪಾರದಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನ ಸಂಚಾರ ಸುಗಮಗೊಳಿಸಲು ಸಂಚಾರ ಪೊಲೀಸರು ಹರಸಾಹಸಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ