ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಸಂಜೆ ಅಂಗಡಿ- ಮುಂಗಟ್ಟುಗಳಲ್ಲಿ ಲಕ್ಷ್ಮಿಪೂಜೆಯ ಕೈಂಕರ್ಯಗಳು ಸಾಂಗವಾಗಿ ನಡೆದವು. ಗೆಳೆಯರು, ಸಂಬಂಧಿಕರು ಹಾಗೂ ಆಪ್ತರನ್ನು ಪೂಜೆಗೆ ಆಹ್ವಾನಿಸುವ ದೃಶ್ಯಗಳು ಸಂಜೆ ಬಂದವು.
ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳು ವಿದ್ಯುತ್ ದೀಪಗಳನ್ನು ಅಲಂಕೃತಗೊಂಡಿದ್ದವು. ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಗ್ರಹಂ ರಸ್ತೆ, ಕಾಳಮ್ಮ ಬೀದಿ, ತೇರು ಬೀದಿ ಸೇರಿದಂತೆ ನಗರದ ವಿವಿಧೆಡೆ ಹಬ್ಬ ಸಂಭ್ರಮ ಕಳೆ ಕಟ್ಟಿತ್ತು. ಲಕ್ಷ್ಮಿಪೂಜೆಯ ಬಳಿಕ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಇನ್ನು ಮನೆಗಳಲ್ಲಿ ಸಾಲುಸಾಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬಕ್ಕೆ ಮೆರುಗು ನೀಡಲಾಯಿತು. ಮಕ್ಕಳು, ಮಹಿಳೆಯರು ಹಬ್ಬದ ಸಡಗರದಲ್ಲಿ ಮಿಂದೆದ್ದರು.ಬೆಲೆ ಏರಿಕೆ ನಡುವೆ ಖರೀದಿ ಜೋರು:
ಗ್ರಾಹಕರನ್ನು ಆಕರ್ಷಿಸಲು ತರಹೇವಾರಿ ಆಕಾಶಬುಟ್ಟಿಗಳು, ಗಮನ ಸೆಳೆಯುವ ವಿದ್ಯುತ್ ದೀಪಗಳು, ಪ್ಲಾಸ್ಟಿಕ್ ಹೂವುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ರಾಜಸ್ತಾನ, ಗುಜರಾತ್ ಮತ್ತಿತರ ಕಡೆಗಳಿಂದ ಆಗಮಿಸಿರುವ ಮಣ್ಣಿನ ಹಣತೆ ವ್ಯಾಪಾರಿಗಳು ಬಗೆ ಬಗೆಯ ಮಣ್ಣಿನ ಹಣತೆಗಳನ್ನು ಮಾರಾಟಕ್ಕಿಟ್ಟಿದ್ದರು. ವಿಭಿನ್ನ ವಿನ್ಯಾಸದ ಅಲಂಕಾರಿಕ ದೀಪಗಳ ಖರೀದಿಯಲ್ಲಿ ಜನರು ಹೆಚ್ಚು ತೊಡಗಿಸಿಕೊಂಡಿದ್ದ ಕಂಡು ಬಂತು. ಬಗೆಬಗೆಯ ಆಕಾಶಬುಟ್ಟಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಕಂಡು ಬಂತು. ದುಬಾರಿಯಾದರೂ ಜನರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಸಾರ್ವಜನಿಕರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಕಂಡುಬಂತು. ನಗರದ ಬೆಂಗಳೂರು ರಸ್ತೆ ಗ್ರಾಹಕರಿಂದ ತುಂಬಿಕೊಂಡಿದ್ದರಿಂದ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅಡ್ಡಿಯಾಯಿತು.
ವಾಹನಗಳ ಸುಗಮಸಂಚಾರಕ್ಕೆ ಪೊಲೀಸರನ್ನು ನಿಯೋಜಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಸೋಮವಾರ ಅಮಾವಾಸ್ಯೆ ಹಾಗೂ ಮಂಗಳವಾರ ಪಾಢ್ಯ ದಿನದಂದು ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪಟಾಕಿ ಸದ್ದು ಕಡಿಮೆಯಾಗಿದೆ.