2 ನದಿ ಜೋಡಣೆಯಲ್ಲಿ ಕನಿಷ್ಠ 40-45ಟಿಎಂಸಿ ನೀರು ನಿಗದಿಗೆ ಡಿಕೆ ಮನವಿ

KannadaprabhaNewsNetwork |  
Published : Dec 25, 2025, 02:00 AM IST
ಡಿ.ಕೆ. ಶಿವಕುಮಾರ್ | Kannada Prabha

ಸಾರಾಂಶ

ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಗೋದಾವರಿ ಹಾಗೂ ಕಾವೇರಿ, ಬೇಡ್ತಿ ಹಾಗೂ ವರದಾ ನದಿ ಜೋಡಣೆ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆ ಯೋಜನೆಯ ಮೊದಲ ಹಂತದಲ್ಲಿ 148 ಟಿಎಂಸಿ ನೀರನ್ನು ತಿರುಗಿಸಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಿರುವುದು 15.90 ಟಿಎಂಸಿ ನೀರು ಮಾತ್ರ. ನೀರನ್ನು ಯಾವ ಕಡೆ ನೀಡಬೇಕು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಬೇಡಿಕೆಯನ್ನು ರಾಜ್ಯದ ಪರವಾಗಿ ಸಭೆಯ ಮುಂದಿಟ್ಟಿದ್ದೇವೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆಯನ್ನು ನಮ್ಮ ರಾಜ್ಯದೊಳಗೇ ಮಾಡಲಿದ್ದು, 18.50 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಇದೆ. ಈ ಎರಡೂ ಯೋಜನೆಗಳಿಂದ ಕರ್ನಾಟಕಕ್ಕೆ ಒಟ್ಟು 34.40 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಆದರೆ, ನಮಗೆ ಕನಿಷ್ಠ 40-45 ಟಿಎಂಸಿ ನೀರು ನಿಗದಿ ಮಾಡಲು ಮನವಿ ಮಾಡಿದ್ದೇವೆ. ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಜನರಿಗಾಗಿ ಯೋಜನೆ:

ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಜನರಿಗೆ ಉಪಯೋಗವಾಗಲು ಕೇಂದ್ರ ಸರ್ಕಾರ 10 ಸಾವಿರ ಕೋಟಿ ಹಾಕಿ ನಮಗೆ 1 ಸಾವಿರ ಕೋಟಿ ಕೇಳುತ್ತಿರುವಾಗ ನಾವು ಈ ಯೋಜನೆ ಬೇಡ ಎನ್ನಲು ಆಗುತ್ತದೆಯೇ?. ಸಮುದ್ರಕ್ಕೆ ಹೋಗುವ ನೀರನ್ನು ಜನರ ಅನುಕೂಲಕ್ಕೆ ಬಳಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಎರಡು ತಿಂಗಳಳ್ಲಿ ಮೇಕೆದಾಟು ದಾಖಲೆ ಸಲ್ಲಿಕೆ:

ಮೇಕೆದಾಟು ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಸುಪ್ರೀಂಕೋರ್ಟ್ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎರಡು ತಿಂಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇನ್ನು, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಈ ಯೋಜನೆ ವಿಚಾರದಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕುವಂತೆ ಕೇಳಿದ್ದೇವೆ ಎಂದು ಹೇಳಿದರು.

ಕೇಂದ್ರ ಸಚಿವರು ನನಗೆ ಮತ್ತೊಂದು ದಿನ ಭೇಟಿಗೆ ಸಮಯಾವಕಾಶ ನೀಡುವುದಾಗಿ ತಿಳಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಿಂದ ಹಿಡಿದು ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ವಿಚಾರವಾಗಿ ಚರ್ಚೆ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದರು.

+++++

ಕೇಂದ್ರ ಸಚಿವರಿಗೆ ಮೆಟ್ರೋ, ಆರ್‌ಆರ್‌ಟಿಎಸ್ ಯೋಜನೆಗಳಿಗೆ ಮನವಿ:ಮೆಟ್ರೋ 3ಎ ಯೋಜನೆ, ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ಒಟ್ಟು 28,405 ಕೋಟಿ ರೂ. ಅಂದಾಜು ಮಾಡಲಾಗಿದೆ. ಈ ಯೋಜನೆ ಸಂಬಂಧ ಕೇಂದ್ರ ಸಚಿವಾಲಯದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ನೀಡಿದರೆ ಕೆಲಸ ಆರಂಭಿಸುವುದಾಗಿ ಸಚಿವರಿಗೆ ತಿಳಿಸಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಪ್ರಾದೇಶಿಕ ಕ್ಷಿಪ್ರ ಸಂಚಾರ ವ್ಯವಸ್ಥೆಗೆ ಮನವಿ ಮಾಡಲಾಗಿದೆ. ಬಿಡದಿ-ಮೈಸೂರು, ಹಾರೋಹಳ್ಳಿ-ಕನಕಪುರ, ನೆಲಮಂಗಲ-ತುಮಕೂರು, ವಿಮಾನ ನಿಲ್ದಾಣ-ಚಿಕ್ಕಬಳ್ಳಾಪುರ, ಹೊಸಕೋಟೆ-ಕೋಲಾರ ಮಧ್ಯೆ ಈ ಸಂಚಾರ ವ್ಯವಸ್ಥೆ ನಿರ್ಮಿಸಲು ಡಿಪಿಆರ್ ತಯಾರಿಸಲು ಮನವಿ ಮಾಡಿದ್ದೇವೆ. ಬೆಂಗಳೂರಿ ದಟ್ಟಣೆ ಹಾಗೂ ಒತ್ತಡ ಕಡಿಮೆ ಮಾಡಲು ಈ ಭಾಗದಲ್ಲಿ ಸ್ಯಾಟಲೈಟ್ ಟೌನ್ ನಿರ್ಮಿಸಬೇಕು ಎಂದು ಈ ಯೋಜನೆಗೆ ಮನವಿ ಮಾಡಿದ್ದು, ಇದನ್ನು ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಟನಲ್ ರಸ್ತೆ ರಾಜ್ಯ ಸರ್ಕಾರದ ಯೋಜನೆ:ಟನಲ್ ರಸ್ತೆ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಕೇಳಿದಾಗ, ಟನಲ್ ಯೋಜನೆಗೂ, ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಗೆ ಎರಡು-ಮೂರು ಸಂಸ್ಥೆಗಳು ಬಿಡ್ ಮಾಡಿವೆ. ಟನಲ್ ರಸ್ತೆ ಯೋಜನೆಯನ್ನು ಬಿಲ್ಡ್ -ಆಪರೇಟ್- ಟ್ರಾನ್ಸ್‌ಪೋರ್ಟ್ ಮಾದರಿಯಲ್ಲಿ ಮಾಡಬೇಕಾಗಿದೆ. ಇದು ರಿಸ್ಕ್ ಇರುವ ಯೋಜನೆ ಎಂದು ಗೊತ್ತಿದೆ. ಅವರೇ ಬಂಡವಾಳ ಹಾಕಿ ಈ ಯೋಜನೆ ಮಾಡಬೇಕಿದೆ ಎಂದರು.ನಾನು ತರಬೇತಿ ತೆಗೆದುಕೊಂಡು ಬರ್ತಿನಿ: ರಾಜಣ್ಣಗೆ ಡಿಕೆ ಟಾಂಗ್‌:

‘ನನಗೆ ಇನ್ನೂ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಟಾಂಗ್‌ ನೀಡಿದ್ದಾರೆ.ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ ಎಂಬ ವಿಷಯವಾಗಿ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ನನಗೆ ತರಬೇತಿ ಕಡಿಮೆ ಇದೆ. ತರಬೇತಿ ತೆಗೆದುಕೊಂಡು ಬರ್ತಿನಿ ಎಂದು ಟಾಂಗ್‌ ನೀಡಿದರು.ಅಧಿಕಾರ ಹಸ್ತಾಂತರದ ಬಗ್ಗೆ ನಿಮ್ಮ ಬಳಿ ಚರ್ಚೆ ಆಗಿತ್ತಾ ಎಂಬ ಪ್ರಶ್ನೆಗೆ, ಹೈಕಮಾಂಡ್ ಜೊತೆ ಆಗಿರುವ ಎಲ್ಲಾ ವಿಚಾರವನ್ನು ನಾನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಾವೆಲ್ಲಾ ಒಟ್ಟಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಒಟ್ಟಾಗಿ ಇರುತ್ತೇವೆ. ಉಹಾಪೋಹಗಳು ಮಾಧ್ಯಮದಲ್ಲೂ ಇವೆ, ನಮ್ಮಲ್ಲೂ ಇವೆ. ನಾನು ಯಾರ ಭೇಟಿಗೂ ಅವಕಾಶ ಕೇಳಿಲ್ಲ. ಯಾವುದೇ ಹುದ್ದೆಗಿಂತ ಹೆಚ್ಚಾಗಿ ನಾನು ಪಕ್ಷದ ಕಾರ್ಯಕರ್ತನಾಗಿ ಇರಲು ಇಷ್ಟಪಡುತ್ತೇನೆ. ರಾಹುಲ್‌ ಗಾಂಧಿಯನ್ನು ಪ್ರಧಾನಿಯಾಗಿ ನೋಡುವುದೇ ನನ್ನ ಆಸೆ ಎಂದರು. ಮೈಸೂರಿನ ಅಹಿಂದ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಸಮಾವೇಶ ಮಾಡುವವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಡಾನೆ ದಾಳಿಗೆ ಸೋಲಾರ್‌ ತಂತಿ ಬೇಲಿ ಹಾನಿ
ದೀಪ ಬೆಳಗಿ ಮನೆ-ಮನದ ಕತ್ತಲನ್ನು ಹೋಗಲಾಡಿಸಿ: ಕಮಲಾಕ್ಷಿ