ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಸರ್ಕಾರದ ವಿವಿಧ ಪ್ರಮಾಣ ಪತ್ರಗಳ ಸೇವೆಗಳನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ನಾಡಕಚೇರಿಗಳಲ್ಲಿ ಸಕಾಲದ ಹೊರತೂ ತ್ವರಿತವಾಗಿ ನೀಡುವಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಅದೇ ರೀತಿ ದ.ಕ. ಜಿಲ್ಲೆಯ ಸುರತ್ಕಲ್ ನಾಡಕಚೇರಿ ರಾಜ್ಯದ ನಾಡಕಚೇರಿಗಳ ಪೈಕಿ ತೃತೀಯ ಸ್ಥಾನ ಪಡೆದಿದೆ. ಸಾರ್ವಜನಿಕರಿಗೆ ಅವಶ್ಯಕ ಇರುವ 42 ವಿಧದ ಪ್ರಮಾಣ ಪತ್ರಗಳನ್ನು ಆಯಾ ನಾಡಕಚೇರಿಗಳಲ್ಲಿ ನೀಡಲಾಗುತ್ತಿದೆ. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡುವ ಅಧಿಕಾರ ತಹಶೀಲ್ದಾರ್‌ಗೆ, ಉಳಿದಂತೆ 40 ಪ್ರಮಾಣ ಪತ್ರಗಳನ್ನು ಉಪ ತಹಶೀಲ್ದಾರ್ ನಾಡಕಚೇರಿಯಲ್ಲೇ ನೀಡುತ್ತಾರೆ.
ಸುರತ್ಕಲ್ ನಾಡಕಚೇರಿ ಸಾಧನೆ:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸುರತ್ಕಲ್ ನಾಡಕಚೇರಿ ಪ್ರಮಾಣ ಪತ್ರ ನೀಡಿಕೆಯಲ್ಲಿ ಜನವರಿಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದು ಕಂದಾಯ ಇಲಾಖೆಯಿಂದ ಅಭಿನಂದನಾ ಪತ್ರ ಪಡೆದಿದೆ. ಫೆಬ್ರವರಿಯಲ್ಲಿ ಗ್ರಾಮ ಸಹಾಯಕರ 14 ದಿನಗಳ ಮುಷ್ಕರ ಪರಿಣಾಮ ಸೇವೆಯಲ್ಲಿ ತುಸು ವ್ಯತ್ಯಯ ಉಂಟಾಗಿತ್ತು. ಹಾಗಾಗಿ ಫೆಬ್ರವರಿಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಹೀಗಿದೆ ಮಾನದಂಡ ನಿಗದಿ:1 ಸಾವಿರಕ್ಕಿಂತ ಜಾಸ್ತಿ ಅರ್ಜಿಯನ್ನು ನಿಗದಿತ ಅವಧಿಗಿಂತ ಮೊದಲೇ ಶೇ.100ರಷ್ಟು ವಿಲೇವಾರಿ ಮಾಡಿರಬೇಕು. ಅಂದರೆ ಸಕಾಲ ಯೋಜನೆಯಡಿ ಅರ್ಜಿ ವಿಲೇವಾರಿಗೆ 21 ದಿನಗಳ ಅವಧಿ ಇದ್ದರೂ ಒಂದೆರಡು ಕನಿಷ್ಠ ದಿನದಲ್ಲೇ ಅರ್ಜಿ ವಿಲೇವಾರಿ ಆಗಿರಬೇಕು. 21ನೇ ದಿನಕ್ಕೆ ಅರ್ಜಿ ವಿಲೇವಾರಿ ಶೂನ್ಯ ಆಗಿರಬೇಕು. ಈ ರೀತಿ ಅತ್ಯಂತ ತ್ವರಿತ ಅರ್ಜಿ ವಿಲೇವಾರಿ ವಿಧಾನಕ್ಕೆ 10 ಸಿಗ್ಮಾ(ವೇಗ) ಮೌಲ್ಯ ನೀಡುತ್ತಾರೆ. ಸುರತ್ಕಲ್ ನಾಡಕಚೇರಿ ನಿಗದಿತ 15.53 ವಿಲೇವಾರಿ ಸೂಚ್ಯಂಕ(ಡಿಸ್ಪೋಸಲ್ ಇಂಡೆಕ್ಸ್) ಕ್ಕಿಂತ 16.53 ಹೆಚ್ಚು ಸೂಚ್ಯಂಕ ಪಡೆದಿದೆ. ಅಂದರೆ 1,137 ಅರ್ಜಿ ವಿಲೇವಾರಿ ಮಾಡಿ ಜನವರಿಯಲ್ಲಿ ರಾಜ್ಯಕ್ಕೇ ಎರಡನೇ ಸ್ಥಾನ ದಾಖಲಿಸಿದೆ. ಫೆಬ್ರವರಿಯಲ್ಲಿ 1,666 ಅರ್ಜಿ ವಿಲೇವಾರಿ ಮಾಡಿ 13.56 ಸೂಚ್ಯಂಕ ದಾಖಲಿಸಿದೆ.
ವಿವಿಧ ಪ್ರಮಾಣ ಪತ್ರ ನೀಡಿಕೆಯಲ್ಲಿ ದ.ಕ.ಜಿಲ್ಲೆ ಡಿಸೆಂಬರ್ ಹಾಗೂ ಜನವರಿಯಲ್ಲಿ ರಾಜ್ಯಕ್ಕೆ ತೃತೀಯ, ಫೆಬ್ರವರಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ತುಮಕೂರು ಮೊದಲ ಸ್ಥಾನ ಪಡೆದಿತ್ತು. ನಾಡಕಚೇರಿಗಳ ಪೈಕಿ ಜನವರಿಯಲ್ಲಿ ಹೊಸಪೇಟೆಯ ಕಮಲಾಪುರ ಪ್ರಥಮ, ಫೆಬ್ರವರಿಯಲ್ಲಿ ವಿಜಯ ನಗರ ಜಿಲ್ಲೆಯ ಮರಿಯಮ್ಮನ ಹಳ್ಳಿ ಪ್ರಥಮ, ಕಮಲಾಪುರ ದ್ವಿತೀಯ ಸ್ಥಾನ ಪಡೆದಿದೆ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್.ನಾಗರಿಕರಿಗೆ ತ್ವರಿತ ಸೇವೆ ಹೇಗೆ?
ಸುರತ್ಕಲ್ ನಾಡಕಚೇರಿಯಲ್ಲಿ ಪ್ರಮಾಣಪತ್ರಗಳ ಅರ್ಜಿಯನ್ನು ವಿನಾ ಕಾರಣ ವಿಲೇ ಮಾಡದೆ ಬಾಕಿ ಇರಿಸುವುದಿಲ್ಲ. ಒಂದು ವೇಳೆ ಬಾಕಿ ಇರಿಸುವುದಾದರೆ ಅದಕ್ಕೆ ನಿರ್ದಿಷ್ಟ ಕಾರಣ ನೀಡಿ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರಸ್ತುತ ದಿನದಲ್ಲಿ 40 ರಿಂದ 50 ಅಂದರೆ ಮಾಸಿಕ 1,500 ರಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಅರ್ಜಿ ವಿಲೇವಾರಿಗೆ ಮೇಲಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿದ್ದು, ಇದರಿಂದ ಬಹುಬೇಗನೆ ಅರ್ಜಿ ವಿಲೇವಾರಿ ಸಾಧ್ಯವಾಗಿದೆ. ರಾಜ್ಯದಲ್ಲೇ ನಮ್ಮ ನಾಡಕಚೇರಿ ಮೊದಲ ಸ್ಥಾನ ಗಳಿಸಬೇಕು ಎಂಬ ಹಂಬಲ ಇದೆ ಎನ್ನುತ್ತಾರೆ ಉಪ ತಹಶೀಲ್ದಾರ್ ನವೀನ್ ಕುಮಾರ್.ದ.ಕ.ಜಿಲ್ಲೆಯ ಉಳಿದ ನಾಡಕಚೇರಿಗಳಲ್ಲೂ ಇಂತಹ ಪ್ರಯತ್ನ ನಡೆಸುವಂತೆ ಸೂಚನೆ ನೀಡಲಾಗಿದೆ. ಸದ್ಯಕ್ಕೆ ನಾವು ದ್ವಿತೀಯ, ತೃತೀಯ ಸ್ಥಾನ ಪಡೆಯುತ್ತಿದ್ದೇವೆ. ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆಯಬೇಕು ಎಂಬ ಪ್ರಯತ್ನದಲ್ಲಿದ್ದೇವೆ.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದ.ಕ.