)
ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ಇದೀಗ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ರೈತರ ಬಡಿದಾಟಕ್ಕೆ ಬೈರಮಂಗಲ ಗ್ರಾಮದಲ್ಲಿ ವೇದಿಕೆ ಅಣಿಯಾಗಿದೆ.
ಒಂದು ರೈತರ ಗುಂಪು ಟೌನ್ ಶಿಪ್ ಯೋಜನೆ ವಿರುದ್ಧವಾಗಿ 475 ದಿನಗಳಿಂದ ನಿರಂತರವಾಗಿ ಚಳವಳಿ ನಡೆಸುತ್ತಿದೆ. ಈ ಹೋರಾಟಕ್ಕೆ ಜೆಡಿಎಸ್ ಸಂಪೂರ್ಣ ಬೆಂಬಲವಾಗಿ ನಿಂತು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇನ್ನು ಬಾಹ್ಯ ಬೆಂಬಲ ನೀಡಿರುವ ಬಿಜೆಪಿಯಿಂದ ಹೇಳಿಕೊಳ್ಳುವಂತಹ ಪ್ರತಿರೋಧ ಕಂಡು ಬರುತ್ತಿಲ್ಲ.
2ನೇ ಬಾರಿ ಎಚ್ ಡಿಕೆ ಆಗಮನ:ಭೂ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಎ.ಮಂಜುನಾಥ್ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು.
ಟೌನ್ ಶಿಪ್ ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಜೂನ್ 26ರಂದು ವಿಧಾನಸೌಧದದಲ್ಲಿ ಚರ್ಚೆಗೆ ಆಹ್ವಾನಿಸಿದ್ದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಧಾನಸೌಧದಲ್ಲಿ ಬೇಡ, ಬೈರಮಂಗಲ ವೃತ್ತದಲ್ಲಿ ರೈತರ ಮಧ್ಯದಲ್ಲಿಯೇ ಚರ್ಚೆ ನಡೆಯಲೆಂದು ಪಂಥಾಹ್ವಾನ ನೀಡಿದ್ದಾರೆ.
ಆದರೆ, ಟೌನ್ ಶಿಪ್ ಯೋಜನೆಗೆ ಭೂಮಿ ಕೊಡಲು ಸಿದ್ಧರಾಗಿರುವ ಅಂದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿರುವ ಮತ್ತೊಂದು ಗುಂಪಿನ ರೈತರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಒಂದಷ್ಟು ಪ್ರಶ್ನೆಗಳನ್ನು ಕೇಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
(ಡಿಕೆಶಿ ಮತ್ತು ಎಚ್ಡಿಕೆ ಮಗ್‌ಶಾಟ್ )
ಬೈರಮಂಗಲದಲ್ಲಿ ನಿಷೇಧಾಜ್ಞೆ ಹೇರುವ ಸಾಧ್ಯತೆ?
- ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಹೊಣೆ ಯಾರು ?
ಬಿಡದಿ ಟೌನ್‌ಶಿಪ್ ಯೋಜನೆ ಪರ ಮತ್ತು ವಿರೋಧದ ಚಳವಳಿ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಇದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೈರಮಂಗಲ ವೃತ್ತ ಹಾಗೂ ವೃತ್ತದ ಕೂಗಳತೆ ದೂರದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗುತ್ತಿದ್ದಾರೆ. ರೈತರ ಎರಡು ಗುಂಪುಗಳು ಪರಸ್ಪರ ಕೈ ಕೈ ಮಿಲಾಯಿಸುವ ಸನ್ನಿವೇಶವೂ ಸೃಷ್ಟಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆಗಾರರಾಗುತ್ತಾರೆ.
ಈ ಚಳವಳಿಗಳ ಕಾರಣ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಮಾಹಿತಿ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡರವರು ಬೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ್ದರು. ಯೋಜನೆ ಪರವಾಗಿರುವ ರೈತರೊಂದಿಗೆ ಚರ್ಚೆ ನಡೆಸಿ ನಾಳೆಯ ಹೋರಾಟ ಕೈಬಿಡುವಂತೆ ಮನವೊಲಿಸುವ ಪ್ರಯತ್ನ ಮಾಡಿದರು ಪ್ರಯೋಜನ ಆಗಲಿಲ್ಲ. ರೈತರು ಕಪ್ಪು ಬಾವುಟ ಪ್ರದರ್ಶನ ಮಾಡಲು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಪೊಲೀಸ್ ಇಲಾಖೆ ವರದಿ ಅಧರಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಜಿಲ್ಲಾಡಳಿತ ಬೈರಮಂಗಲ ಗ್ರಾಮದಲ್ಲಿ ನಿಷೇಧಾಜ್ಞೆ ಹೇರುವ ಸಾಧ್ಯತೆಗಳಿವೆ.