ಸಿಎಲ್ಪಿ ನಾಯಕನಾಗಿ ಡಿಕೆ ಒನ್‌ಲೈನ್‌ ನಿರ್ಣಯ

KannadaprabhaNewsNetwork |  
Published : May 31, 2026, 02:00 AM IST
CLP

ಸಾರಾಂಶ

ಕಾಂಗ್ರೆಸ್‌ ಹೈಕಮಾಂಡ್‌ ನಿರ್ದೇಶನದಂತೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಶನಿವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

 ಬೆಂಗಳೂರು :  ಕಾಂಗ್ರೆಸ್‌ ಹೈಕಮಾಂಡ್‌ ನಿರ್ದೇಶನದಂತೆ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಶನಿವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಈ ಸ್ಥಾನಕ್ಕೆ ನೂತನ ನಾಯಕನ ಆಯ್ಕೆಗಾಗಿ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ಮಂಡಿಸಿದ ಈ ನಿರ್ಣಯಕ್ಕೆ ಸಭೆ ಒಕ್ಕೊರಲಿನ ಒಪ್ಪಿಗೆ ನೀಡಿತು.

ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಿರ್ಣಯದ ಜತೆಗೆ ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರನ್ನು ಶ್ಲಾಘಿಸುವ ಹಾಗೂ ಅವರ ಭವಿಷ್ಯದಲ್ಲೂ ಮಾರ್ಗದರ್ಶನವನ್ನು ಬೇಡುವ ನಿರ್ಣಯ ಸಹ ಅಂಗೀಕರಿಸಲಾಯಿತು.

ಸುರ್ಜೇವಾಲ ಪ್ರಕ್ರಿಯೆಗೆ ಚಾಲನೆ:

ಶಾಸಕಾಂಗ ಪಕ್ಷದ ಸಭೆ ಆರಂಭ ಆಗುತ್ತಿದ್ದಂತೆಯೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸ್ವಾಗತದ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದರು. ನಂತರ ಸಿದ್ದರಾಮಯ್ಯ ಅವರು ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನು ಸಭೆಯಲ್ಲಿ ಪ್ರಕಟಿಸಿದರು.

ಜತೆಗೆ, ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ವಿವೇಚನೆಗೆ ಬಿಡಲಾಗಿದೆ ಎಂಬ ಒಂದು ಸಾಲಿನ ನಿರ್ಣಯ ಮಂಡಿಸಿದರು. ಇದನ್ನು ಪರಮೇಶ್ವರ್ ಅವರು ಅನುಮೋದಿಸಿದರು. ಎಲ್ಲ ಶಾಸಕರು ಕೈ ಎತ್ತುವ ಮೂಲಕ ಇದನ್ನು ಬೆಂಬಲಿಸಿದರು. ಬಳಿಕ 10 ನಿಮಿಷಗಳ ವಿರಾಮ ನೀಡಲಾಗಿದೆ ಎಂದು ಸುರ್ಜೇವಾಲ ಸಭೆಯಲ್ಲಿ ಪ್ರಕಟಿಸಿದರು.

ಬ್ರೇಕ್‌ ನಂತರ 2ನೇ ನಿರ್ಣಯ:

ವಿರಾಮದ ಅವಧಿಯಲ್ಲಿ ಸಿದ್ದರಾಮಯ್ಯ, ವೇಣುಗೋಪಾಲ್‌ ಮತ್ತು ಸುರ್ಜೇವಾಲ ಅವರು ಸಿಎಂ ಕೊಠಡಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ದೂರವಾಣಿ ಮೂಲಕ ಸಭೆಯ ನಿರ್ಣಯದ ಮಾಹಿತಿ ನೀಡಿದರು. ಸಭೆಯ ನಿರ್ಣಯ ಪರಿಗಣಿಸಿ ನೂತನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಸೂಚಿಸಿ ಸಭೆಯಲ್ಲಿ 2ನೇ ನಿರ್ಣಯ ಮಂಡಿಸಲು ಹೈಕಮಾಂಡ್‌ ನಾಯಕರು ಚರ್ಚಿಸಿ ನಿರ್ಧರಿಸಿದರು. ನಂತರ ಮತ್ತೆ ಅಲ್ಲಿಂದ ಸಮ್ಮೇಳನ ಸಭಾಂಗಣಕ್ಕೆ ಮೂವರೂ ನಾಯಕರು ವಾಪಸಾದರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮಿಂದ ತೆರವಾಗುತ್ತಿರುವ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಹೈಕಮಾಂಡ್‌ ನಿರ್ಧಾರದಂತೆ ಡಿ.ಕೆ.ಶಿವಕುಮಾರ್‌ ಹೆಸರು ಸೂಚಿಸಿ ಪ್ರಸ್ತಾವನೆ ಮಂಡಿಸಿದರು. ಇದಕ್ಕೆ ಪರಮೇಶ್ವರ್‌ ಅವರೇ ಅನುಮೋದಿಸಿದರು. ಬಳಿಕ ಎಲ್ಲ ಶಾಸಕರೂ ಕೈ ಎತ್ತುವ ಮೂಲಕ ಬೆಂಬಲಿಸಿದರು. ಇದರೊಂದಿಗೆ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣ: ಸುತ್ತೂರು ಶ್ರೀ ಬಣ್ಣನೆ
ನೀಟ್‌ ಪ್ರಕರಣ: ಹೊಸ ಫ್ಲೆಕ್ಸ್ ಮೂಲಕ ಬಿಜೆಪಿಗೆ ಕೈ ನಾಯಕರ ಕೌಂಟರ್‌