24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jun 03, 2026, 01:15 AM IST
2ಕೆಆರ್  ಎಂಎನ್  1.ಜೆಪಿಜಿಡಿ.ಕೆ.ಶಿವಕುಮಾರ್   | Kannada Prabha

ಸಾರಾಂಶ

ರಾಮನಗರ: ಕಾಂಗ್ರೆಸ್ ಪಕ್ಷಕ್ಕೆ ಬಿಕ್ಕಟ್ಟು ಎದುರಾದಾಗಲೆಲ್ಲ ಬಂಡೆಯಂತೆ ಅಡ್ಡ ನಿಂತು ತಮ್ಮ ರಾಜಕೀಯ ಚಾಕಚಕ್ಯತೆ ಮತ್ತು ದಾಡಸೀತನದಿಂದ ಪರಿಸ್ಥಿತಿ ನಿಭಾಯಿಸಿದ ಡಿ.ಕೆ.ಶಿವಕುಮಾರ್ ಅವರು 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ

ರಾಮನಗರ: ಕಾಂಗ್ರೆಸ್ ಪಕ್ಷಕ್ಕೆ ಬಿಕ್ಕಟ್ಟು ಎದುರಾದಾಗಲೆಲ್ಲ ಬಂಡೆಯಂತೆ ಅಡ್ಡ ನಿಂತು ತಮ್ಮ ರಾಜಕೀಯ ಚಾಕಚಕ್ಯತೆ ಮತ್ತು ದಾಡಸೀತನದಿಂದ ಪರಿಸ್ಥಿತಿ ನಿಭಾಯಿಸಿದ ಡಿ.ಕೆ.ಶಿವಕುಮಾರ್ ಅವರು 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಇಲ್ಲಿವರೆಗೆ ವ್ಯಕ್ತಿಗತವಾಗಿ 13ನೇ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಡಿ.ಕೆ.ಶಿವಕುಮಾರ್ ಅವರು ಇದೀಗ 24ನೇ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸುತ್ತಿದ್ದಾರೆ. ಇಲ್ಲಿವರೆಗೆ ಡಿಕೆಶಿಯವರು ಬಂಧಿಖಾನೆ, ಬೆಂಗಳೂರು ನಗರಾಭಿವೃದ್ಧಿ, ಸಹಕಾರ, ಜಲಸಂಪನ್ಮೂಲ, ಇಂಧನ ಸೇರಿದಂತೆ ಹಲವು ಇಲಾಖೆಗಳ ಸಚಿವರಾಗಿ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಈವರೆಗೆ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಿಂದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯಿಂದ 5ನೇ ಮುಖ್ಯಮಂತ್ರಿ ಆಗುತ್ತಿದ್ದಾರೆ.

ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ್:

ಟ್ರಬಲ್ ಶೂಟರ್ ಎಂದೇ ಖ್ಯಾತಿಯಾದ ಡಿ.ಕೆ.ಶಿವಕುಮಾರ್ ಸಂದಿಗ್ಧ ಪರಿಸ್ಥಿತಿಗಳಲ್ಲಿ ಕಾಂಗ್ರೆಸ್ ಪಾಲಿಗೆ ಬಂಡೆಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸಿದವರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ನೆರವಿಗೆ ನಿಂತವರು. ಅಲ್ಲದೆ, ರಾಜ್ಯದಲ್ಲಿ ಪಕ್ಷ ಸಂಘಟನೆ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಂಗ್ರೆಸ್‌ಗೆ ಶಕ್ತಿ ತುಂಬಿದರು. ಕಾಂಗ್ರೆಸ್ 136 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಕಾರಣಕರ್ತರಾದರು.

ದಶಕದ ಹಿಂದೆ ಮಹಾರಾಷ್ಟ್ರದಲ್ಲಿ ವಿಲಾಸ್‌ರಾವ್ ದೇಶ್‌ಮುಖ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಲ್ಪಮತದ ಅಪಾಯಕ್ಕೆ ಸಿಲುಕಿಕೊಂಡಿತ್ತು. ಆಗ ಬಿಜೆಪಿ ಮತ್ತು ವಿರೋಧ ಪಕ್ಷಗಳು ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಕುದುರೆ ವ್ಯಾಪಾರಕ್ಕೆ ಇಳಿದಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ಡಿ.ಕೆ.ಶಿವಕುಮಾರ್ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಮುಂಬೈಯಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಸುಮಾರು 10-12 ದಿನಗಳ ಕಾಲ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ರಕ್ಷಣೆ ನೀಡಿದರು. ಮುಂಬೈಯಲ್ಲಿ ಪರಿಸ್ಥಿತಿ ತಿಳಿಯಾಗಿ ಸರ್ಕಾರಕ್ಕೆ ಅಪಾಯವಿಲ್ಲವೆಂಬ ಸಂಗತಿ ಮನವರಿಕೆಯಾದ ನಂತರವಷ್ಟೇ ಮಹಾರಾಷ್ಟ್ರ ಶಾಸಕರನ್ನು ಕ್ಷೇಮವಾಗಿ ಕಳುಹಿಸಲಾಯಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಪಾಯ ಎದುರಾಗದಂತೆ ಹೆಬ್ಬಂಡೆಯಂತೆ ನಿಂತು ಶ್ರಮಿಸಿದ ಶ್ರೇಯಸ್ಸು ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ.

ಅಲ್ಲದೆ, ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಹಮದ್ ಪಟೇಲ್ ಅಭ್ಯರ್ಥಿಯಾಗಿದ್ದರು. ಬಿಜೆಪಿ ನಾಯಕರು ಅಹಮದ್ ಪಟೇಲ್ ಅವರನ್ನು ಮಣಿಸಲು ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಕಸರತ್ತಿಗೆ ಕೈ ಹಾಕಿದರು. ಇದರ ಮುನ್ಸೂಚನೆ ಅರಿತು ಕಾಂಗ್ರೆಸ್ ವರಿಷ್ಠರು ಗುಜರಾತ್ ನ ಪಕ್ಷದ ಶಾಸಕರ ರಕ್ಷಣೆ ಜವಾಬ್ದಾರಿಯನ್ನು ಡಿ.ಕೆ.ಶಿವಕುಮಾರ್ ಹೆಗಲಿಗೆ ವಹಿಸಿದರು.

ವರಿಷ್ಠರ ಆದೇಶವನ್ನು ಪಾಲಿಸಿದ ಡಿ.ಕೆ.ಶಿವಕುಮಾರ್ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಹದ್ದಿನ ಕೋಟೆಯಲ್ಲಿಟ್ಟು ರಕ್ಷಣೆ ನೀಡಿದ್ದರು. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಹಮದ್ ಪಟೇಲ್ ಗೆಲುವು ಸಾಧಿಸುವುದರಲ್ಲಿ ಡಿ.ಕೆ.ಶಿವಕುಮಾರ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಇದರಿಂದಲೇ ಕಾಂಗ್ರೆಸ್ ವರಿಷ್ಠರ ಮನದಲ್ಲಿ ಡಿ.ಕೆ.ಶಿವಕುಮಾರ್ ಐಕಾನ್ ಲೀಡರ್ ಆಗಿ ಗುರುತಿಸಿಕೊಂಡರು.

ಬಾಕ್ಸ್‌.............

ವಿದ್ಯಾರ್ಥಿ ನಾಯಕತ್ವದಿಂದ ಮುಖ್ಯಮಂತ್ರಿ ಹುದ್ದೆವರೆಗೆ ಡಿಕೆಶಿ...

ಕನ್ನಡಪ್ರಭ ವಾರ್ತೆ ರಾಮನಗರ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎನ್ ಎಸ್ ಯುಐ ಸದಸ್ಯರಾಗಿ ಆರಂಭವಾದ ಕಾಂಗ್ರೆಸ್ ಪಕ್ಷದ ಬಗೆಗಿನ ನಿಷ್ಠೆಯಿಂದಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ತರುವಾಯ ಉಪಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಯಾಯಿತು. ಇದೀಗ ಮುಖ್ಯಮಂತ್ರಿ ಗಾದಿ ಒಲಿದಿದೆ.

ಡಿ.ಕೆ.ಶಿವಕುಮಾರ್ ಕನಕಪುರ ತಾಲೂಕು, ದೊಡ್ಡಾಲಹಳ್ಳಿ ಗ್ರಾಮದ ಡಿ.ಕೆ. ಕೆಂಪೇಗೌಡ -ಗೌರಮ್ಮ ದಂಪತಿಯ ಪ್ರಥಮ ಪುತ್ರ. ತಂದೆಯಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಹಂತ-ಹಂತವಾಗಿ ಮೇಲೆ ಬಂದವರು.

18ನೇ ವಯಸ್ಸಿನಲ್ಲಿಯೇ ಎನ್‌ಎಸ್‌ಯುಐ ಸೇರ್ಪಡೆಗೊಂಡು ಅನತಿಕಾಲದಲ್ಲಿಯೇ ಅಂದರೆ, 1981-83ರ ಅವಧಿಯಲ್ಲಿ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿದ ಡಿ.ಕೆ.ಶಿವಕುಮಾರ್ ಆರ್.ಸಿ.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ರಾಜ್ಯಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರಗಳನ್ನು ವ್ಯವಸ್ಥೆಗೊಳಿಸುವ ಮೂಲಕ ಸ್ಥಳೀಯರ ಮನ ಸೂರೆಗೊಂಡರು.

ಬಾಕ್ಸ್‌.............

ಅಂದೇ ಆಶೀರ್ವಾದ ಮಾಡಿದ್ದ ದೊಡ್ಡಗೌಡರು:

1985ರ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ಜನತಾದಳ ನಾಯಕ ಎಚ್.ಡಿ.ದೇವೇಗೌಡ ಅವರ ವಿರುದ್ಧ ಸ್ಪರ್ಧಿಸಿ ಪ್ರಬಲ ಪೈಪೊಟಿವೊಡ್ಡಿದ ಡಿ.ಕೆ.ಶಿವಕುಮಾರ್ ಕಡಿಮೆ ಅಂತರದಲ್ಲಿ ಸೋತರು.

ಈ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಿದ್ದ ದೇವೇಗೌಡರಿಗೆ ಯುವ ಮುಂದಾಳು ಡಿ.ಕೆ.ಶಿವಕುಮಾರ್ ಅವರ ಶಕ್ತಿಯ ಅರಿವಾಗುತ್ತದೆ. ಫಲಿತಾಂಶದ ದಿನ ಸ್ವತಃ ದೇವೇಗೌಡರೇ ಮುಂದಾಗಿ ಡಿಕೆಶಿಯವರ ಕೈ ಕುಲುಕಿ, ಬೆನ್ನು ತಟ್ಟಿ ‘ಈ ದಿನ ನನ್ನ ವಿರುದ್ಧ ನೀನು ಸೋತಿರಬಹುದು. ಆದರೆ, ಮುಂದಿನ ದಿನಗಳಲ್ಲಿ ನಿನಗೆ ರಾಜಕಾರಣದಲ್ಲಿ ಉತ್ತಮ ಭವಿಷ್ಯವಿದೆ’ ಎಂದು ಆಶೀರ್ವಾದ ಮಾಡಿದ್ದರು. ಅದನ್ನು ಈಗಲೂ ಡಿ.ಕೆ.ಶಿವಕುಮಾರ್ ನೆನಪಿಸಿಕೊಳ್ಳುತ್ತಾರೆ.

ವಿಧಾನಸಭಾ ಚುನಾವಣೆಯಾದ ಕೆಲವೇ ದಿನಗಳಲ್ಲಿ 1987ರಲ್ಲಿ ಅವರು ಸಾತನೂರು ಕ್ಷೇತ್ರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಸದಸ್ಯರಾಗಿ ಆಯ್ಕೆಯಾದರು. 1989ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಭೂತ ಪೂರ್ವ ವಿಜಯ ಸಾಧಿಸುವ ಮೂಲಕ ಈ ಕ್ಷೇತ್ರದಲ್ಲಿ ಬೇರೂರಿದ ಜನತಾದಳದ ಪ್ರಾಬಲ್ಯವನ್ನು ಮೊಟಕುಗೊಳಿಸಿದ ಡಿ.ಕೆ.ಶಿವಕುಮಾರ್ ಅತ್ಯಧಿಕ ಮತಗಳಿಂದ ಜಯ ಸಾಧಿಸಿದರು.

ಬಾಕ್ಸ್‌..........

ಬಂಡೆದ್ದು ಗೆಲುವು ಸಾಧಿಸಿದ್ದ ಬಂಡೆ:

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿ ತ್ಯಜಿಸಬೇಕಾಗಿ ಬಂದಾಗ ಅವರ ಉತ್ತರಾಧಿಕಾರಿಯನ್ನಾಗಿ ಸೋರೆಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗುವಂತೆ ಮಾಡುವಲ್ಲಿ ಡಿ.ಕೆ.ಶಿವಕುಮಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕೆ ಬಹುಮಾನದ ಧ್ಯೋತಕವಾಗಿ ಬಂಗಾರಪ್ಪ ಸಂಪುಟದಲ್ಲಿ ಯುವಕ ಶಿವಕುಮಾರ್‌ಗೆ ಬಂಧಿಖಾನೆ ಖಾತೆ ದೊರೆಯಿತು.

ಆದರೆ, ಸ್ವಪಕ್ಷೀಯ ರಾಜಕೀಯ ವಿರೋಧಿಗಳ ಪಿತೂರಿಯಿಂದಾಗಿ 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತು. ಪಕ್ಷದ ನಡೆಯಿಂದ ಧೃತಿಗೆಡದ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಮಾತ್ರವಲ್ಲ, ತಮ್ಮ ಮಾತೃ ಪಕ್ಷಕ್ಕೆ ಮತ್ತಷ್ಟು ನಿಷ್ಠರಾದರು.

ಕೃಷ್ಣನ ಪಾಂಚಜನ್ಯಕ್ಕೆ ಡಿಕೆಶಿ ಸಾರಥಿ:

1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಎಂ.ಕೃಷ್ಣ ಅವರಿಗೆ ಡಿ.ಕೆ.ಶಿವಕುಮಾರ್ ಬೆನ್ನೆಲುಬಾಗಿ ನಿಂತರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಿ ಸರ್ಕಾರ ರಚಿಸುವಲ್ಲಿ ಕಾರಣೀಭೂತರಾದರು. ಎಸ್.ಎಂ.ಕೃಷ್ಣ ಚುನಾವಣಾ ಪೂರ್ವದಲ್ಲಿ ಪಾಂಚಜನ್ಯ ಮೊಳಗಿಸುವ ಮೂಲಕ ಚುನಾವಣಾ ಸಮರ ಆರಂಭಿಸಿದಾಗ, ಈ ಐತಿಹಾಸಿಕ ಯಾತ್ರೆಗೆ ಡಿಕೆಶಿ ಸಾರಥಿಯಾದರು. ಇದರಿಂದಲೇ ಕಾಂಗ್ರೆಸ್ ಪಕ್ಷ 139 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪೂರ್ಣ ಪ್ರಮಾಣದ ಸರ್ಕಾರ ರಚನೆಗೆ ಕಾರಣವಾಯಿತು.

ಬಾಕ್ಸ್‌................

ಎಚ್‌ಡಿಕೆಗೆ ಸೋಲಿನ ರುಚಿ ತೋರಿಸಿದ ಡಿಕೆ:

1999ರ ಚುನಾವಣೆಯಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ, ಅಗಷ್ಟೇ ರಾಜಕೀಯ ರಂಗಕ್ಕೆ ಧುಮುಕಿದ್ದ ಎಚ್.ಡಿ.ಕುಮಾರಸ್ವಾಮಿ ಜನತಾದಳದ ಅಭ್ಯರ್ಥಿಯಾಗಿದ್ದರು. ತಮ್ಮ ಚೊಚ್ಚಲ ವಿಧಾನಸಭೆಯ ಚುನಾವಣೆಯಲ್ಲಿಯೇ ಎಚ್‌ಡಿಕೆ ಸೋಲು ಅನುಭವಿಸಿದರೆ, ಸತತ ಮೂರನೇ ಬಾರಿಗೆ ಜಯಶಾಲಿಯಾದ ಶಿವಕುಮಾರ್‌ಗೆ ಮಾಜಿ ಪ್ರಧಾನಿಯೊಬ್ಬರ ಪುತ್ರನನ್ನು ಪರಾಭವಗೊಳಿಸಿದ ಶ್ರೇಯ ಸಂದಿತು.

ರಾಜಕೀಯ ವೈರಿಗಳಾದ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ 2002ರ ಕನಕಪುರ ಲೋಕಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾದರು. ಇಲ್ಲಿ ಗೆಲುವು ಸಾಧಿಸಿದ ದೇವೇಗೌಡ ಮತ್ತು ಶಿವಕುಮಾರ್ ನಡುವಿನ ರಾಜಕೀಯ ವೈರತ್ವ ಹಾಗೆಯೇ ಮುಂದುವರೆಯಿತು.

2004ರಲ್ಲಿ ಡಿ.ಕೆ.ಶಿವಕುಮಾರ್ ಸಾತನೂರು ವಿಧಾನಸಭಾ ಕ್ಷೇತ್ರದಿಂದ 4ನೇ ಬಾರಿಗೆ ಆಯ್ಕೆಯಾದರು. ಆದರೆ, ಈ ಚುನಾವಣೆಯಲ್ಲಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲು ಕಾಂಗ್ರೆಸ್‌ಗೆ ಅಗತ್ಯ ಬಹುಮತ ಸಿಗದ ಕಾರಣ, ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತು. ಹೀಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಉದಯಿಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಸ್ಥಾನ ಸಿಗಲಿಲ್ಲ. ಆದರೆ, ರಾಜ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಡಿ.ಕೆ.ಶಿವಕುಮಾರ್, ತಮಗೆ ಮಾಡಲಾದ ಅಪಮಾನವನ್ನು ಸಹಿಸಿಕೊಂಡರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ತಮ್ಮ ರಾಜಕೀಯ ವಿರೋಧಿ ದೇವೇಗೌಡರಿಗೆ ತಮ್ಮದೇ ರೀತಿಯಲ್ಲಿ ಪ್ರತ್ಯುತ್ತರ ನೀಡುವಲ್ಲಿ ತಂತ್ರಗಾರಿಕೆ ರೂಪಿಸಿದ ಡಿಕೆಶಿ , 2006ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸಾರ್ವಜನಿಕವಾಗಿ ಅಷ್ಟೇನು ಪರಿಚಿತರಲ್ಲದ ಪತ್ರಕರ್ತೆ ತೇಜಸ್ವಿನಿಗೌಡ ಅವರನ್ನು ನಿಲ್ಲಿಸಿ ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡರು.

ಸಾತನೂರು ಕ್ಷೇತ್ರ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಹಂಚಿ ಹೋದವು. ಕನಕಪುರ ಕ್ಷೇತ್ರಕ್ಕೆ ವಲಸೆ ಬಂದು ಸಿಂಧ್ಯಾ ಕಟ್ಟಿದ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಪಡಿಸಿದರು. 2008ರಲ್ಲಿ ಜೆಡಿಎಸ್ ನ ಡಿ.ಎಂ.ವಿಶ್ವನಾಥ್ ಎದುರು ಗೆದ್ದ ಡಿ.ಕೆ.ಶಿವಕುಮಾರ್, 2013ರಲ್ಲಿ ಪಿಜಿಆರ್ ಸಿಂಧ್ಯಾ ಅವರನ್ನು ಮಣಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.

ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳ ಪೈಕಿ ಕನಕಪುರ ಎರಡನೇ ಸ್ಥಾನದಲ್ಲಿತ್ತು. ಇಂದು ಡಿ.ಕೆ.ಶಿವಕುಮಾರ್ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರವನ್ನು ಕನಕನಗಿರಿಯನ್ನಾಗಿ ಮಾಡಿರುವುದು ಕ್ಷೇತ್ರದ ಜನರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ಶಿವಕುಮಾರ್ ಅವರಿಗೆ ಠಕ್ಕರ್ ನೀಡುವ ಪ್ರಬಲ ವಿರೋಧಿಯೇ ಇಲ್ಲದಂತಾಗಿದೆ.

ಇದಕ್ಕೆ ಉದಾಹರಣೆ ಎಂದರೆ 2018ರ ಚುನಾವಣೆಯಲ್ಲಿ ಜೆಡಿಎಸ್ ನಾರಾಯಣಗೌಡರ ವಿರುದ್ಧ 79,909 ಮತಗಳ ಅಂತರದಿಂದ ಗೆಲುವು ಸಾಧಿಸಿದ ಡಿ.ಕೆ.ಶಿವಕುಮಾರ್, ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸಿದರು. 2023ರ ಚುನಾವಣೆಯಲ್ಲಿ ಜೆಡಿಎಸ್‌ ನ ನಾಗರಾಜು ಅವರನ್ನು ಮಣಿಸಿದರು. ಹೀಗೆ ಹಂತ ಹಂತವಾಗಿ ರಾಜಕೀಯವಾಗಿ ತನ್ನ ಬೆಳವಣಿಗೆಗೆ ಅಡ್ಡಿಯಾಗಿದ್ದ ರಾಜಕೀಯ ವೈರಿಗಳು ಹಾಗೂ ಅಡೆತಡೆಗಳನ್ನು ಮೆಟ್ಟಿ ಪ್ರಬಲ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ಮತ್ತು ಉಪಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿದ್ದಾರೆ.

2ಕೆಆರ್ ಎಂಎನ್ 1.ಜೆಪಿಜಿ

ಡಿ.ಕೆ.ಶಿವಕುಮಾರ್ .

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ವಿರುದ್ಧ ಕಠಿಣ ಕ್ರಮ, ಮಂಪರು ಪರೀಕ್ಷೆಗೆ ಒತ್ತಾಯ
ನಾಲ್ಕು ಹೋಬಳಿಯಲ್ಲಿ ಬಿತ್ತನೆ ಬೀಜ ವಿತರಣೆ