ಬೆಂಗಳೂರು : ಹಲವು ವರ್ಷದಿಂದ ನೆನಗುದಿಗೆ ಬಿದ್ದಿರುವ ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಿ, ಮಳೆ ಬಂದರೆ ಎಚ್‌ಎಸ್‌ಆರ್ 5ನೇ ಸೆಕ್ಟರ್‌ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದ್ದು ಶಾಶ್ವತ ಪರಿಹಾರ ಕೊಡಿ, ಕೋರಮಂಗಲ ಸುತ್ತಮುತ್ತ ಮಕ್ಕಳಲ್ಲಿ ಡ್ರಗ್ಸ್ ವ್ಯಸನ ಹೆಚ್ಚಾಗುತ್ತಿದೆ ಸೇರಿದಂತೆ ವಿವಿಧ ಸಮಸ್ಯೆ ಕುರಿತು ಸಾರ್ವಜನಿಕರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ನಡಿಗೆ’ ಸಮಾರಂಭದ ಅಂಗವಾಗಿ ಉದ್ಯಾನವನದಲ್ಲಿ ಸಂಚಾರ ಮಾಡುವ ಮೂಲಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಸೇನಾ ಸಮವಸ್ತ್ರ ಧರಿಸಿದ್ದ ಬಾಲಕ ಹೂವಿನ ಬೊಕ್ಕೆ ಕೊಟ್ಟ ಡಿಸಿಎಂ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಈ ವೇಳೆ ಸ್ಥಳೀಯರೊಬ್ಬರು, ಎಚ್‌ಎಸ್‌ಆರ್ ಸೆಕ್ಟರ್ 5ರಲ್ಲಿ ಮಳೆ ಬಂದರೆ ಸಾಕು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಲಹೆ ನೀಡಿ ಪ್ರವಾಹ ಮತ್ತು ಕೊಳಚೆ ನಿವಾಹರಣೆ ಮಾಡುವುದಕ್ಕೆ ಮನವಿ ಮಾಡಿದರು. ಮಹಿಳೆಯೊಬ್ಬರು, ಪಾರ್ಕ್‌ನ ತೆರೆದ ಜಿಮ್‌ನಲ್ಲಿದ್ದ ಸೈಕಲ್ ತೆಗೆದಿದ್ದು, ಮರಳಿ ಹಾಕುವಂತೆ ಮನವಿ ಮಾಡಿದರು. ಪಕ್ಕದಲ್ಲಿ ಇದ್ದ ಸಚಿವ ರಾಮಲಿಂಗಾರೆಡ್ಡಿ, ನಾವೇ ತಗಿಸಿದ್ದು, ಸೈಕಲ್ ಹಾಕುವುದಿಲ್ಲ ಎಂದು ಉತ್ತರಿಸಿದರು.
ಈಜಿಪುರ ಫ್ಲೈಓವರ್ ಪೂರ್ಣಗೊಳಿಸಿ:
ಹಲವು ವರ್ಷದಿಂದ ನೆನೆಗುದಿಗೆ ಬಿದ್ದ ಈಜೀಪುರ ಫ್ಲೈ ಓವರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ. ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಫ್ಲೈ ಓವರ್ ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಎಂದು ಜನರು ಮನವಿ ಮಾಡಿದರು.
ನೀರಿಲ್ಲ, ವಿದ್ಯುತ್ ಇಲ್ಲ:
ರಾಜೀವ್ ಗಾಂಧಿ ವಸತಿ ಯೋಜನೆಯಿಂದ 1 ಲಕ್ಷ ಬಹುಮಹಡಿ ಮನೆ ಯೋಜನೆ ಮಾಡಲಾಗಿದೆ. ಸಹಾಯಧನಕ್ಕಾಗಿ ಜಿಬಿಎಗೆ ಅರ್ಜಿ ಸಲ್ಲಿಸಲಾಗಿದೆ. ಸಹಾಯಧನ ನೀಡುವುದಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ, ಹಣ ಬಂದಿಲ್ಲ. ಜತೆಗೆ, ನಿರ್ಮಾಣ ಮಾಡಿರುವ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ. ಅಲ್ಲಿಗೆ ಹೋಗಿ ಹೇಗೆ ಜೀವನ ಮಾಡುವುದು ಎಂದು ಸಿದ್ದಮ್ಮ ಮನವಿ ಮಾಡಿದರು.
ಟಿಕೆಟ್ ದರ ದುಬಾರಿ:
ಪ್ರತಿ ದಿನ ಎಲೆಕ್ಟ್ರಾನಿಕ್ ಸಿಟಿಯಿಂದ ಕೆ.ಆರ್.ಪುರದವರೆಗೆ ಎಸಿ ಬಸ್‌ನಲ್ಲಿ ಪ್ರಮಾಣ ಮಾಡುತ್ತೇನೆ. 2 ಬದಿಯ ಪ್ರಯಾಣಕ್ಕೆ ಸುಮಾರು ₹200 ಪಾವತಿ ಮಾಡಬೇಕಾಗಿದೆ. ಸಾಮಾನ್ಯ ಎಸಿ ಬಸ್ ಪ್ರಯಾಣಕ್ಕೂ ಏರ್ ಪೋರ್ಟ್ ದರ ವಸೂಲಿ ಮಾಡಲಾಗುತ್ತಿದೆ. ಸಾಮಾನ್ಯ ಎಸಿ ಬಸ್ ದರ ನಿಗದಿ ಪಡಿಸುವಂತೆ ಐಟಿ ಉದ್ಯೋಗಿ ಮನವಿ ಮಾಡಿದರು.
ಒನ್ ವೇ ಓಡಾಟಕ್ಕೆ ಕಡಿವಾಣ ಹಾಕಿ
ನಗರದಲ್ಲಿ ಹೋಂ ಡೆಲಿವರಿ ಹೆಚ್ಚಾಗಿದೆ. ಡೆಲವರಿ ಬಾಯ್‌ಗಳು ಅತ್ಯಂತ ವೇಗವಾಗಿ ವಾಹನ ಚಲಾಯಿಸುತ್ತಾರೆ. ಒನ್ ವೇ ನಲ್ಲಿ ಬೈಕ್ ಗಳ ಓಡಾಟ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡಿ. ಇವಿ ವೆಹಿಕಲ್ ಗಳಿಗೆ ನಿಯಮ ರೂಪಿಸಿ ಎಂದು ಜನರು ಮನವಿ ಮಾಡಿದರು.
ಡ್ರಗ್ಸ್ ವ್ಯಸನ ಹೆಚ್ಚಾಗುತ್ತಿದೆ
ಕೋರಮಂಗಲ ಸುತ್ತಮುತ್ತದ ಪ್ರದೇಶದಲ್ಲಿ ಇತ್ತೀಚಿಗೆ ಮಕ್ಕಳಲ್ಲಿ ಡ್ರಗ್ಸ್ ವ್ಯಸನ ಹೆಚ್ಚಾಗುತ್ತಿದೆ. ಇದರಿಂದ ಯುವ ಜನರ ಭವಿಷ್ಯ ಹಾಳಾಗಲಿದೆ. ಈ ಬಗ್ಗೆ ಗಂಭೀರವಾಗಿ ಕ್ರಮ ವಹಿಸುವಂತೆ ಡಾ.ಸ್ನೇಹಾ ಎಂಬುವವರು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.