ಡಿಕೆಗೆ ರೈತರ ಜತೆ ಚೆಲ್ಲಾಟ ಆಡಲು ಬಿಡಲ್ಲ: ಬಿವೈವಿ

KannadaprabhaNewsNetwork |  
Published : Jun 18, 2026, 01:45 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಡಿ.ಕೆ.ಶಿವಕುಮಾರ್ ಅವರು ಈ ನಾಡಿನ ಮುಖ್ಯಮಂತ್ರಿ. ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ಅವರು ನಿಲ್ಲಬೇಕೇ ಹೊರತು ರಿಯಲ್ ಎಸ್ಟೇಟ್ ಮಾಡುವವರ ಪರವಾಗಿ ಅಲ್ಲ. ಮುಖ್ಯಮಂತ್ರಿಗೆ ಯಾವ ಕಾರಣಕ್ಕೂ ರೈತರ ಬದುಕಿನ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಡಿ.ಕೆ.ಶಿವಕುಮಾರ್ ಅವರು ಈ ನಾಡಿನ ಮುಖ್ಯಮಂತ್ರಿ. ದೇಶಕ್ಕೆ ಅನ್ನ ನೀಡುವ ರೈತರ ಪರವಾಗಿ ಅವರು ನಿಲ್ಲಬೇಕೇ ಹೊರತು ರಿಯಲ್ ಎಸ್ಟೇಟ್ ಮಾಡುವವರ ಪರವಾಗಿ ಅಲ್ಲ. ಮುಖ್ಯಮಂತ್ರಿಗೆ ಯಾವ ಕಾರಣಕ್ಕೂ ರೈತರ ಬದುಕಿನ ಜೊತೆ ಚೆಲ್ಲಾಟ ಆಡಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದರು.

ಬಿಡದಿ ಟೌನ್ ಶಿಪ್ ಯೋಜನೆಗಾಗಿ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ಕೆಂಪಯ್ಯನಪಾಳ್ಯ, ಅರಳಾಳುಸಂದ್ರ, ಹೊಸೂರು, ಬನ್ನಿಗಿರಿ ಹಳ್ಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ರೈತರ ಚಳವಳಿಯಲ್ಲಿ ಅವರು ಪಾಲ್ಗೊಂಡರು. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ಇಲ್ಲಿವರೆಗೆ ರೖೆತರ ಹೊಟ್ಟೆ ಮೇಲೆ ಹೊಡೆದು ಕಣ್ಣೀರು ಹಾಕಿಸಿದ ಯಾವುದೇ ಸರ್ಕಾರಕ್ಕೆ ಒಳ್ಳೆಯದಾಗಿಲ್ಲ. ಆ ಸರ್ಕಾರಗಳು ಹೆಚ್ಚು ದಿನ ಉಳಿಯುವುದೂ ಇಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೈತರ ಮೇಲೆ ಗೂಂಡಾಗಿರಿ, ದಬ್ಬಾಳಿಕೆ ಮಾಡುವುದನ್ನು ಬಿಟ್ಟು ರೈತರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಬೇರೆ ಕಡೆಗಳಲ್ಲಿ ಬೇಕಾದಷ್ಟು ಜಮೀನುಗಳಿವೆ. ಮುಖ್ಯಮಂತ್ರಿಗಳು, ಶಾಸಕರು ನೂರಾರು ಎಕರೆ ಜಮೀನು ಇಟ್ಟುಕೊಳ್ಳಬಹುದು, ಅದೇ ಸಣ್ಣ ರೈತರು ಜಮೀನು ಇಟ್ಟುಕೊಂಡು ಬದುಕುವುದು ಬೇಡವೇ?. ರೈತರನ್ನು ಬೀದಿಗೆ ತಂದರೆ ಆ ಭಗವಂತನು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಈ ಯೋಜನೆಗೆ ಬಲವಂತವಾಗಿ ಭೂಸ್ವಾಧೀನ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರು ಶೇ.70ರಷ್ಟು ರೈತರು ಸ್ವಾಧೀನದ ಪರವಾಗಿದ್ದಾರೆ. ಭೂಸ್ವಾಧೀನದ ಜಾಗ ಬರಡು ಭೂಮಿ, ಪ್ರಧಾನಿ ಮೋದಿಯವರು ಒಪ್ಪಿಗೆ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಧಾನಿ ಹೆಸರನ್ನು ಎಳೆದು ತರುತ್ತಿರುವ ಮುಖ್ಯಮಂತ್ರಿಗೆ ನಾಚಿಕೆ ಆಗಬೇಕು. ಪ್ರಧಾನಿ ಮೋದಿಯವರು ರೈತರ ಪರವಾಗಿ ಇರುವವರು. ಅವರೆಂದೂ ರೈತರ ಭೂಮಿ ಕಸಿದುಕೊಳ್ಳಿ ಅಂತ ಹೇಳಿರಲು ಸಾಧ್ಯವೇ ಇಲ್ಲ. ನೀವು ಮುಖ್ಯಮಂತ್ರಿಯಾಗಿ ಈ ರೀತಿ ಸುಳ್ಳು ಹೇಳಬಾರದು ಎಂದು ತಿರುಗೇಟು ನೀಡಿದರು.ಆಡಳಿತ ಪಕ್ಷದಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ಹಾಗಾಗಿ, ಈ ರಾಜ್ಯ ಸರ್ಕಾರಕ್ಕೆ ವಾಸ್ತವವನ್ನು ತಿಳಿಸುವ ಕೆಲಸ ಮಾಡಬೇಕೆಂದು ನಿರ್ಧರಿಸಿ ಬಿಡದಿ ಭಾಗದ ಹೊಲಗಳಿಗೆ ಭೇಟಿ ನೀಡಿ ರೈತರಿಂದ ಅಹವಾಲು ಆಲಿಸಿದ್ದೇವೆ. ಬಿಜೆಪಿ, ರೈತರ ವಿಚಾರದಲ್ಲಿ ಹುಡುಗಾಟಿಕೆ, ರಾಜಕೀಯ ಮಾಡಲು ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿಲ್ಲ. ಬಿಡದಿ, ರಾಯಚೂರು, ಬೆಳಗಾವಿ ಮಾತ್ರವಲ್ಲ, ನಾಡಿನಲ್ಲಿ ಎಲ್ಲೇ ರೈತರು ಸಂಕಷ್ಟದಲ್ಲಿದ್ದರೂ ಬಿಜೆಪಿ ಅವರ ಪರವಾಗಿ ನಿಲ್ಲಲಿದೆ ಎಂದು ಹೇಳಿದರು.

ನಮ್ಮ ಮೇಲೆ ಗೂಂಡಾಗಿರಿ ಮಾಡಲು ಬರಬೇಡಿ:

ಬಿಜೆಪಿ ನಾಯಕರು ಬರುತ್ತಿದ್ದಾರೆಂದು ಹೆದರಿ ಕಾಂಗ್ರೆಸ್ ನವರು ಪೋಸ್ಟರ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಗೂಂಡಾಗಳನ್ನು ಬಿಟ್ಟು ರೈತರೇ ಜಮೀನು ಬಿಟ್ಟು ಕೊಡುವಂತಹ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ರಾತ್ರಿ ವೇಳೆ ಮನೆಗಳಿಗೆ ಬರುವ ಗೂಂಡಾಗಳು ಜೀವ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿವೆ ಎಂದು ರೈತರು ಹೇಳಿಕೊಂಡಿದ್ದಾರೆ. ಹೀಗಿದ್ದರೂ, ಇಲ್ಲಿನ ರೖೆತರು ಪ್ರಾಣ ಬೇಕಾದರೂ ಕೊಡುತ್ತೇವೆ. ಭೂಮಿ ಮಾತ್ರ ಕೊಡಲ್ಲ ಅಂದಿದ್ದಾರೆ. ಆ ರೈತರ ಫಲವತ್ತಾದ ಕೃಷಿ ಭೂಮಿ ಕಸಿದುಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿರುವ ನಿಮ್ಮದೇ ಸರ್ಕಾರಕ್ಕೆ ರೖೆತರನ್ನು ಒಕ್ಕಲೆಬ್ಬಿಸಲು ಅವಕಾಶ ನೀಡಬೇಡಿ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ನಾನೇ ಪತ್ರ ಬರೆದಿದ್ದೇನೆ. ರಾಹುಲ್ ಗಾಂಧಿ ಒಂದು ಮಾತು ಹೇಳಿದರೆ ಸಾಕು ಡಿಕೆಶಿ, ಕುರ್ಚಿ ಉಳಿಸಿಕೊಳ್ಳಲಾದರೂ ರೖೆತರ ಪರವಾಗಿ ನಿಲ್ಲುತ್ತಾರೆ ಎಂದರು.ಬಿಡದಿ ಟೌನ್‌ಶಿಪ್‌ಗೆ ಮೈತ್ರಿ ಸರ್ಕಾರ ಕೊಕ್‌:

ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ರೈತರ ಮನೆ ಹಾಳು ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಬಿಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಒಂದೂವರೆ ವರ್ಷ ಮಾತ್ರ ಇರುತ್ತದೆ. ಈ ಯೋಜನೆಯನ್ನು ಪ್ರಾರಂಭ ಮಾಡುವಷ್ಟರಲ್ಲಿ ಸರ್ಕಾರವೇ ಹೋಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಬಂದಾಗ ಈ ಯೋಜನೆಯನ್ನು ಕೈಬಿಡಲಾಗುವುದು. ನನ್ನ 35 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಹಸಿರು ವಲಯವನ್ನು ನೋಡಿಯೇ ಇಲ್ಲ. ವಾರ್ಷಿಕ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ರೈತರಿಗೆ ₹25 ಕೋಟಿ ಆದಾಯವಿದೆ. ರೇಷ್ಮೆ ಬೆಳೆಯಿಂದ ₹35 ಕೋಟಿ ಲಾಭವಿದೆ. ಇಂತಹ ಫಲವತ್ತಾದ ಭೂಮಿಯಲ್ಲಿ ಲೇಔಟ್ ನಿರ್ಮಿಸಿ ರೈತರ ಮನೆಹಾಳು ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.ಅಲ್ಲಿ ಓಕೆ, ಇಲ್ಲಿ ಸಿಟ್ಟು ಏಕೆ?:ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಅಂಡಮಾನ್-ನಿಕೋಬಾರ್‌ನಲ್ಲಿ ಚೀನಾ ದಾಳಿ ನಿಲ್ಲಿಸಲು ಸ್ಥಾಪಿಸುತ್ತಿರುವ ಹಡಗು ನಿಲ್ದಾಣ ಜಾಗಕ್ಕೆ ಹೋಗಿ ಯೋಜನೆಯನ್ನು ವಿರೋಧಿಸಿದ್ದಾರೆ. ಲಕ್ಷಾಂತರ ಮರಗಿಡಗಳು, ಪ್ರಾಣಿಪಕ್ಷಿಗಳು ನಾಶವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಸಿರು ಉಳಿಸಲು ಹೇಳಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.ಈಗ ಈ ಭಾಗದ ಹಸಿರನ್ನು ರಾಹುಲ್ ಗಾಂಧಿಯವರೇ ಒಮ್ಮೆ ಬಂದು ನೋಡಲಿ. ಡಿಕೆಶಿ ಅವರು ಕೆಂಪೇಗೌಡರ ಜಯಂತಿಗೆ 16 ಸಾವಿರ ಮರ ನೆಡುತ್ತಾರಂತೆ. ಇಲ್ಲಿರುವ ತೆಂಗು, ಮಾವು, ಸಪೋಟ, ಅಡಿಕೆ ಸೇರಿದಂತೆ ಲಕ್ಷಾಂತರ ಮರಗಳು ಮರಗಳಲ್ಲವೇ?. ಅಂಡಮಾನ್-ನಿಕೋಬಾರ್ ವಿಚಾರದ ಪರವಾಗಿ ಸ್ಟ್ಯಾಂಡ್ ತೆಗೆದುಕೊಳ್ಳುವ ಡಿ.ಕೆ.ಶಿವಕುಮಾರ್ ಗೆ ಬಿಡದಿ ರೈತರ ಮೇಲೆ ಸಿಟ್ಟು ಏಕೆ?. ಇದು ಡಬಲ್ ಸ್ಟ್ಯಾಂಡ್ ಅಲ್ಲವೇ? ಎಂದು ಪ್ರಶ್ನಿಸಿದರು.ಇದು ಕುಮಾರಸ್ವಾಮಿ ಕೂಸು ಎನ್ನುವ ನೀವು ಅವರ ಅವಧಿಯಲ್ಲೂ ಯೋಜನೆಯನ್ನು ಅನುಷ್ಠಾನಗೊಳಿಸಲಿಲ್ಲ. ಯಡಿಯೂರಪ್ಪ ಸರ್ಕಾರದಲ್ಲಿಯೂ ಆಗಲಿಲ್ಲ. ಈಗೇಕೆ ಮಾಡುತ್ತೀರಾ?, ಬಿಟ್ಟು ಬಿಡಿ. ಬೆಂಗಳೂರಿನಲ್ಲಿರುವ ಹಲವು ಬಡಾವಣೆಗಳಲ್ಲಿ ಇನ್ನೂ ನಿವೇಶನಗಳು ಹಂಚಿಕೆಯಾಗಿಲ್ಲ. ಖಾಲಿ ನಿವೇಶನಗಳಲ್ಲಿ ಮನೆಗಳನ್ನೇ ಕಟ್ಟಿಲ್ಲ. ಇಲ್ಲೇಕೆ ಅಷ್ಟೊಂದು ಬಲವಂತವಾಗಿ ಟೌನ್ ಮಾಡುತ್ತಿದ್ದೀರಾ?. ಗುದ್ದಲಿ ಪೂಜೆ ಮಾಡುವಷ್ಟರಲ್ಲಿ ನಿಮ್ಮ ಸರ್ಕಾರವೇ ಹೋಗುತ್ತದೆ. ಮುಂದೆ ನಮ್ಮ ಸರ್ಕಾರ ಬಂದ ಮೇಲೆ ನಾವು ಈ ಯೋಜನೆ ಮಾಡುವುದಿಲ್ಲ ಎಂದು ಹೇಳಿದರು.ಡಿಕೆ ಸಿಎಂ ಆದರೂ ಪೋಸ್ಟರ್‌ ಚಾಳಿ ಬಿಟ್ಟಿಲ್ಲ:

‘ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿ ಆದ ನಂತರ ಬ್ಲೂ ಫಿಲ್ಮ್‌ ಮಾಡಿಸುವುದು, ಪೋಸ್ಟರ್‌ ಅಂಟಿಸುವುದು ಬಿಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಇನ್ನೂ ಹಳೇ ಚಾಳಿ ಬಿಟ್ಟಿಲ್ಲ’ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಿಡದಿ ರೈತರ ಪರ ಹೋರಾಟ ನಡೆಸುತ್ತಿರುವುದಕ್ಕೆ ಕಾಂಗ್ರೆಸ್‌ನವರು ಪೋಸ್ಟರ್‌ಗಳನ್ನು ಅಂಟಿಸಿ ತಮ್ಮ ಕುಟುಂಬದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ಮನುಷ್ಯ ಅಲ್ಲ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತದೆ ಎಂದು ಹರಿಹಾಯ್ದರು.ಕೈಲಾಗದವನ ಕೊನೆಯ ಅಸ್ತ್ರವೇ ಅಪಪ್ರಚಾರ. ಅದನ್ನೇ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ. ಪೋಸ್ಟರ್ ಅಂಟಿಸಿ ‌ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಪತ್ನಿಯ ಚಿತ್ರವನ್ನು ಪೋಸ್ಟರ್‌ನಲ್ಲಿ ಹಾಕಿದ್ದಾರೆ. ಹಾಗೆ ನೋಡಿದರೆ ಈ ವ್ಯಕ್ತಿ ಬಗ್ಗೆ ನಾವು ಎಷ್ಟು ಪೋಸ್ಟರ್‌ಗಳನ್ನು ಅಂಟಿಸಬೇಕು ಎಂದು ಅವರು ಪ್ರಶ್ನಿಸಿದರು.ನೂರು ಎಕರೆ ಅಂತ ಪೋಸ್ಟರ್‌ನಲ್ಲಿ ಬರೆದು ನನ್ನ ಮತ್ತು ನನ್ನ ಪುತ್ರ ನಿಖಿಲ್ ಫೋಟೋಗಳನ್ನು ಹಾಕಿದ್ದಾರೆ. ನನ್ನದೂ ಅಂತ 46 ಎಕರೆ ಭೂಮಿ ಇದೆ. 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿಸಿದ ಜಮೀನು ಅದು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನೂ ಇಲ್ಲ. ನೂರು ಎಕರೆ ಎಲ್ಲಿದೆ ಎಂದು ಅವರು ತೋರಿಸಲಿ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಭೂಮಿ ಖರೀದಿಸಿದ್ದಾರೆ. ಅದಕ್ಕೆ ಇನ್ನೂ ಯಾವನೋ ಒಬ್ಬನ ಫೋಟೋ ಹಾಕಿ ಅಂಟಿಸಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲೂಟಿ:ನಿಮಗೆ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಗೊತ್ತಿರಬಹುದು. ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲೂಟಿ ಹೊಡೆದ ಕೆಟ್ಟ ಚರಿತ್ರೆ ಈ ವ್ಯಕ್ತಿಯದು. ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಈ ವ್ಯಕ್ತಿ ಇವತ್ತು ತನ್ನ ಚೇಲಾಗಳಿಂದ ಪೋಸ್ಟರ್ ಹಾಕಿಸಿದ್ದಾರೆ. ನನ್ನ ಯೋಗ್ಯತೆ ಏನು? ಈ ವ್ಯಕ್ತಿಯ ಯೋಗ್ಯತೆ ಏನು ಎಂದು ಜನಕ್ಕೂ ಗೊತ್ತಿದೆ ಎಂದು ಹೇಳಿದರು.ಇದು ಸಿಎಂ ಡಿಕೆಶಿ ವಿಕೃತಿ:ಆರಂಭದಿಂದಲೂ ಇವರ ಹಿನ್ನೆಲೆ ಇದೇ ಆಗಿದೆ. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಿ.ವೈ.ವಿಜಯೇಂದ್ರ ಅವರ ವಿರುದ್ಧವೂ ಪೋಸ್ಟರ್ ಹಾಕಿಸಿದ್ದಾರೆ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಹೇಳಲಿ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಶಾಸಕರು, ಮಂತ್ರಿಗಳದ್ದು ನಡೆದು ಹೋಯಿತು. ನನ್ನನ್ನು ಹನಿಟ್ರ್ಯಾಪ್ ಮಾಡಿಸಲು ಸಂಚು ರೂಪಿಸಿದ್ದರು ಎಂದು ಸಚಿವರೊಬ್ಬರು ಆರೋಪಿಸಿದ್ದರು. ವಿಧಾನಸಭೆ ಕಲಾಪದಲ್ಲಿ ನಡೆದಿದ್ದನ್ನು ಇಡೀ ರಾಜ್ಯವೇ ನೋಡಿತು. ಕೊನೆಗೆ ಸತ್ಯ ಹೇಳುತ್ತೇನೆ ಎಂದ ಆ ಸಚಿವನ ಬಾಯಿ ಮುಚ್ಚಿಸಿದರು. ಈಗ ಮುಖ್ಯಮಂತ್ರಿ ಆದರೂ ಹಳೇ ಚಾಳಿ ಬಿಡುವಂತೆ ಕಾಣುತ್ತಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.ಹೆದರುವ ಪ್ರಶ್ನೆಯೇ ಇಲ್ಲ:ನನ್ನ ಬದುಕು ತೆರದ ಪುಸ್ತಕ. ನನ್ನ ಬಗ್ಗೆ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆ, ಅಪಪ್ರಚಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಈ ಪೋಸ್ಟರ್‌ಗಳಿಗೆ ಬೆದರುವ ಪ್ರಶ್ನೆಯೇ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಮುಂದುವರಿಯಲಿದೆ. ಬಿಡದಿ ಟೌನ್ ಶಿಪ್ ನನ್ನ ಕಾಲದಲ್ಲಿ ಮಾಡಲು ಹೊರಟಿದ್ದು ನಿಜ. ಜನ ವಿರೋಧಿಸಿದ ಹಿನ್ನೆಲೆಯಲ್ಲಿ ಆ ಯೋಜನೆಯನ್ನೇ ಕೈಬಿಟ್ಟೆ. ನಾನು ಮಾಡಲೇಬೇಕು ಎಂದು ಹೊರಟ್ಟಿದ್ದರೆ, ಎರಡನೇ ಬಾರಿ ಸಿಎಂ ಆಗಿದ್ದಾಗ ಮಾಡುತ್ತಿದ್ದೆ. ಅಂತಹ ಕೆಲಸ ನಾನು ಮಾಡಲಿಲ್ಲ. ಈಗ ನನ್ನ ಹೆಸರು ಹೇಳಿಕೊಂಡು ಭೂಮಿ ಲಪಟಾಯಿಸಲು ಹೊರಟಿದ್ದಾರೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಶರಣಾದ ಆಟೋ ಚಾಲಕ
ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿಗಳ ತೆರವು