ಬೆಂಗಳೂರು: ‘ನಮ್ಮ ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಿದ್ದು ಯಾಕೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಅವರು ಬಿಜೆಪಿಯವರನ್ನು ಪ್ರಶ್ನಿಸಬೇಕಿತ್ತು. ಅದನ್ನು ಕೇಳುವ ಶಕ್ತಿ ಸ್ವಾಮೀಜಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸತ್ಯವನ್ನು ಯಾರೂ ಮುಚ್ಚಿಡಲಾಗುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದೇ ವೇಳೆ, ‘ಒಕ್ಕಲಿಗರು ದಡ್ಡರಲ್ಲ, ಒಕ್ಕಲಿಗರ ಸ್ವಾಮೀಜಿಗಳೂ ದಡ್ಡರಲ್ಲ. ತಮ್ಮ ಬಳಿ ಬರುವವರಿಗೆ ಆಶೀರ್ವಾದ ಮಾಡಿ, ವಿಭೂತಿ, ಶಾಲು ಹಾಕಿ ಕಳುಹಿಸುತ್ತಾರೆ. ಸ್ವಾಮೀಜಿಯಾಗಲಿ, ಸಮಾಜ ಆಗಲಿ ಯಾರ ಪರವೂ ಇರುವುದಿಲ್ಲ. ಸಮಾಜದ ಜನರೂ ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್‌ನವರು ನಿರ್ಮಲಾನಂದನಾಥ ಸ್ವಾಮಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಿಗಿಸಿದವರನ್ನೇ ಇಂದು ಒಕ್ಕಲಿಗ ಸ್ವಾಮೀಜಿ ಬಳಿ ಕರೆದುಕೊಂಡು ಹೋಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಮೈತ್ರಿ ಸರ್ಕಾರ ಪತನವಾದ ಬಳಿಕ ನಮ್ಮ ಸಮಾಜದ ಮುಖ್ಯಮಂತ್ರಿ ಅವರನ್ನು ಇಳಿಸಿ ಬಿಟ್ಟಿರಲ್ಲ ಎಂದು ಸ್ವಾಮೀಜಿಗಳು ಬಿಜೆಪಿಯನ್ನು ಪ್ರಶ್ನಿಸಬಹುದಿತ್ತಲ್ಲವೇ? ಇದನ್ನು ಪ್ರಶ್ನಿಸುವ ಶಕ್ತಿ ಸ್ವಾಮೀಜಿಗೆ ಇದೆಯೋ, ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.
ಇದೇ ಸ್ವಾಮೀಜಿ ಅವರ ದೂರವಾಣಿ ಕದ್ದಾಲಿಕೆ ಆರೋಪ ಕೇಳಿಬಂದಿದ್ದು ಮರೆತು ಹೋಯಿತೇ? ಈ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಬೇರೆ ದಾರಿಗೆ ಎಳೆದುಕೊಂಡು ಹೋಗುತ್ತದೆ ಎಂದರು.
ಮೈತ್ರಿ ಸರ್ಕಾರ ಪತನಕ್ಕೆ ನಮ್ಮನ್ನು ದೂರುತ್ತಿದ್ದಾರೆ. ವಿಧಾನಸಭೆಯಲ್ಲಿ ದೇವೇಗೌಡರು, ಕುಮಾರಸ್ವಾಮಿಯವರ ಬಗ್ಗೆ ಯಡಿಯೂರಪ್ಪ ಅವರು ಏನು ಹೇಳಿದರು ಗೊತ್ತಿದೆಯೇ? ಅದು ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲವಲ್ಲ. ಎಂತೆಂಥಾ ಪದಗಳನ್ನು ಉಪಯೋಗಿಸಿದರು ಎಂಬುದನ್ನು ಸಮಾಜ ನೋಡಿದೆ ಎಂದು ಹೇಳಿದರು.
ಆದರೆ, ನಾವು ಅವರು ಮುಖ್ಯಮಂತ್ರಿಯಾಗಲು ಬೆಂಬಲಿಸಿದ್ದೆವು. ಈಗಲೂ ಲೋಕಸಭೆ ಚುನಾವಣೆಯಲ್ಲಿ ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನಾನು ಉಪ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷನಾಗಿದ್ದೇನೆ. ನಾವೆಲ್ಲಾ ಸಮಾಜದ ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲು ಈಗಲೇ ತಯಾರಿದ್ದೇವೆ. ಭವಿಷ್ಯದ ಬಗೆಗಿನ ಮಾತುಗಳನ್ನು ಕೇಳಲು ದಡ್ಡರಲ್ಲ ಎಂದು ಪರೋಕ್ಷವಾಗಿ ತಮಗೆ ಹೆಚ್ಚಿನ ಅಧಿಕಾರ ದೊರೆಯಲಿದೆ ಎಂಬ ಮುನ್ಸೂಚನೆ ರವಾನಿಸಿದರು.
ಒಕ್ಕಲಿಗ ನಾಯಕರನ್ನು ಒಗ್ಗೂಡಿಸುತ್ತೇವೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಎಲ್ಲರೂ ಅವರವರ ಬದುಕು ನೋಡಿಕೊಳ್ಳುತ್ತಾರೆ. ನಾವು ಈಗಾಗಲೇ ಅಧಿಕಾರದಲ್ಲಿದ್ದೇವೆ. ಅದಾದ ನಂತರ ಮುಂದಿನ ಐದು ವರ್ಷವೂ ನಾವೇ ಇರುತ್ತೇವೆ. ಮುಂದೆ ತಾವು ಗೆಲ್ಲುವುದಿಲ್ಲ ಎಂಬುದು ಅವರಿಗೆ ಖಾತ್ರಿಯಾಗಿದೆ. ಹೀಗಾಗಿ ಈ ರೀತಿ ಹೇಳುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಸಿದ್ಧಾಂತವನ್ನೇ ಮಾರಿಕೊಂಡಿದ್ದಾರೆ. ಕುಮಾರಸ್ವಾಮಿ ಅವರ ವಿಚಾರ ಬಿಡಿ. ಆದರೆ ದೇವೇಗೌಡರಿಗೆ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸುವ ಪರಿಸ್ಥಿತಿ ಬರಬಾರದಿತ್ತು. ಅವರ ಸ್ಥಿತಿ ನೋಡಿ ಬೇಸರವಾಗುತ್ತದೆ ಎಂದರು.
ಮೈತ್ರಿ ಸರ್ಕಾರ ಬೀಳಿಸಿದವರು ಕಾಂಗ್ರೆಸ್ಸಿಗರು ಎಂಬ ಕುಮಾರಸ್ವಾಮಿ ಹೇಳಿಕೆಗೆ, ‘ಕುಮಾರಸ್ವಾಮಿ ಅವರು ವಿಶ್ವನಾಥ್, ನಾರಾಯಣಗೌಡರನ್ನು ಭೇಟಿ ಮಾಡಿದ್ದಾರೆ. ಯೋಗೇಶ್ವರ್, ಅಶ್ವತ್ಥನಾರಾಯಣ, ಯಡಿಯೂರಪ್ಪ ಅವರನ್ನು ತಬ್ಬಾಡುತ್ತಿದ್ದಾರೆ. ಜನಕ್ಕೆ ಇದಕ್ಕಿಂತ ಸಾಕ್ಷಿ ಬೇರೇನು ಬೇಕು? ಕುಮಾರಸ್ವಾಮಿ ಆಗ ಏನು ಮಾತನಾಡಿದ್ದರು?’ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾಗುತ್ತಾರಂತೆ ಎಂಬ ಹೇಳಿಕೆಗೆ, ‘ಕೇಂದ್ರ ಸಚಿವರೂ ಆಗಲಿ, ಇನ್ನು ಏನಾದರೂ ದೊಡ್ಡದು ಸಿಕ್ಕರೂ ಸಿಗಲಿ, ಒಳ್ಳೆಯದಾಗಲಿ. ಕೋವಿಡ್ ಸಮಯದಲ್ಲಿ ಏನೂ ಮಾಡದೇ ಈಗ ಊಟ ಹಾಕಿಸುತ್ತಿದ್ದಾರೆ, ಹಾಕಿಸಲಿ. ಆ ಬಗ್ಗೆಯೂ ನಾವು ಏನೂ ಮಾತನಾಡುವುದಿಲ್ಲ’ ಎಂದರು.
ಒಕ್ಕಲಿಗ ಮಠ ಇಬ್ಭಾಗ ಮಾಡಿದವರು ಎಚ್‌ಡಿಕೆ:
ಎಚ್.ಡಿ.ಕುಮಾರಸ್ವಾಮಿ ಅವರು ಯಾರನ್ನೂ ಬಿಡುವುದಿಲ್ಲ. ಅವರು ಒಕ್ಕಲಿಗ ಮಠದ ಸ್ವಾಮೀಜಿಗಳನ್ನೇ ಬಿಟ್ಟಿಲ್ಲ. ಒಕ್ಕಲಿಗ ಮಠ ಒಡೆದು ಎರಡು ಮಾಡಿದ್ದಾರೆ. ಈಗ ದಿನ ಬೆಳಗಾದರೆ ಮಠಕ್ಕೆ ಹೋಗಿ ಭೇಟಿ ಮಾಡುತ್ತಾರೆ. ಅವರು ತಮ್ಮ ಮಾತಿಗೆ ಎಂದಿಗೂ ಬದ್ಧರಾಗಿರುವುದಿಲ್ಲ. ಹೀಗಾಗಿ ಅವರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.