ಆಡಳಿತಕ್ಕೆ ಚುರುಕು ಮುಟ್ಟಿಸಲು ಡಿಕೆಶಿ ಪ್ರಯತ್ನ

KannadaprabhaNewsNetwork |  
Published : Jun 05, 2026, 02:00 AM ISTUpdated : Jun 05, 2026, 11:36 AM IST
DK Shivakumar

ಸಾರಾಂಶ

ಪ್ರಮಾಣ ವಚನ ಸ್ವೀಕರಿಸಿ ಸರ್ಕಾರ ರಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುರುವಾರ ಸರ್ಕಾರ ಹಾಗೂ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಆಡಳಿತ ಚುರುಕುಗೊಳಿಸುವ ಕೆಲಸ ಮಾಡಿದರು.

 ಬೆಂಗಳೂರು :  ಪ್ರಮಾಣ ವಚನ ಸ್ವೀಕರಿಸಿ ಸರ್ಕಾರ ರಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುರುವಾರ ಸರ್ಕಾರ ಹಾಗೂ ಎಲ್ಲಾ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಆಡಳಿತ ಚುರುಕುಗೊಳಿಸುವ ಕೆಲಸ ಮಾಡಿದರು.

ತಮ್ಮ ಸರ್ಕಾರದ ಗುರಿ, ಆಲೋಚನೆ, ನಿರೀಕ್ಷೆಗಳೇನು ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಸಿದ ಮುಖ್ಯಮಂತ್ರಿ ಅವರು, ಸಚಿವರು, ಶಾಸಕರು ಅಷ್ಟೇ ಏಕೆ? ನನ್ನ ಕಚೇರಿಯವರ ಒತ್ತಡಕ್ಕೂ ಒತ್ತಡ, ಯಾವುದೇ ಪ್ರಭಾವಕ್ಕೆ ಮಣಿಯಬೇಡಿ. ಕಾನೂನು ಚೌಕಟ್ಟು ಮೀರದಂತೆ ಕೆಲಸ ಮಾಡಿ. ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಸಹಕಾರ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿಧಾನಸೌಧದಲ್ಲಿ ಗುರುವಾರ ಮುಖ್ಯ ಕಾರ್ಯದರ್ಶಿ, ಎಲ್ಲಾ ಅಪರ ಮುಖ್ಯಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಧಿಕಾರಿಗಳನ್ನು ಕರೆಸಿ ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಿದೆ ಎಂದು ಸಂದೇಶ ನೀಡಿದ್ದೇವೆ. ಮೊದಲ ದಿನ ನಾವು ಅವರಿಂದ ಏನು ನಿರೀಕ್ಷೆ ಮಾಡಿದ್ದೇವೆ, ನಮ್ಮಿಂದ ಅವರ ನಿರೀಕ್ಷೆಗಳೇನು ಎಂದು ತಿಳಿಸಿದ್ದೇನೆ. ನಮ್ಮ ಸರ್ಕಾರ ಜಾತಿ, ಧರ್ಮ, ಪ್ರಭಾವಕ್ಕೆ ಮಣಿಯುವುದಿಲ್ಲ. ಯಾವ ಅಧಿಕಾರಿಗಳು ಇದಕ್ಕೆ ಮಣಿಯಬಾರದು. ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು. ಜನರ ಭಾವನಗೆ ತಕ್ಕಂತೆ, ಜನರ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.

ಅಧಿಕಾರಿಗಳಿಗೆ ಸೂಚನೆ:

15 ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿನ ಕಾರ್ಯಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಯಾ ಜಿಲ್ಲೆಯಲ್ಲಿ ಯಾವ ಹೊಸ ಕೆಲಸ ಮಾಡಬಹುದು ಎಂದು ಗುರುತಿಸಬೇಕು. ಆರ್ಥಿಕ ಚೌಕಟ್ಟಿನಲ್ಲಿ ನಾವು ಏನು ಮಾಡಬಹುದು ಎಂದು ಪಟ್ಟಿ ಮಾಡಲು ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆಯಾ ಜಿಲ್ಲೆಯ ಸಂಪೂರ್ಣ ಮಾಹಿತಿ ನೀಡಬೇಕು. ಪ್ರತಿಯೊಂದಕ್ಕೂ ಖರ್ಚು-ವೆಚ್ಚಗಳಿಗೂ ಪಕ್ಕಾ ಲೆಕ್ಕವಿರಬೇಕು. ಎಲ್ಲರಿಗೂ ಹೊಣೆಗಾರಿಕೆ ಇರಬೇಕು. ವಿದ್ಯಾವಂತಿಕೆ, ಬುದ್ಧಿವಂತಿಕೆಗಿಂತ ಹೆಚ್ಚು ಪ್ರಜ್ಞಾವಂತಿಕೆ ಮುಖ್ಯ. ಸಾಮಾನ್ಯ ಪ್ರಜ್ಞೆ ಇದ್ದಾಗ ಮಾತ್ರ ಜನರ ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಲು ಸಾಧ್ಯ ಎಂದರು.

ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ, ಯು.ಟಿ.ಖಾದರ್‌ ಹಾಗೂ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಎಲ್ಲ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಲಮಿತಿಯೊಳಗೆ 56000 ಹುದ್ದೆ ಭರ್ತಿ:

ಹದಿನೈದು ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. 56 ಸಾವಿರ ಹುದ್ದೆಗಳ ಭರ್ತಿಗೆ ಸಮಯ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.ವಿಧಾನಸೌಧದಲ್ಲಿ ಗುರುವಾರ ಮುಖ್ಯ ಕಾರ್ಯದರ್ಶಿ, ಎಲ್ಲಾ ಅಪರ ಮುಖ್ಯಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ ಈ ವಿಚಾರ ತಿಳಿಸಿದರು. 

ರಾಜ್ಯದಲ್ಲಿ ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ಸ್ಥಾಪಿಸಲಾಗುವುದು. ಎಲ್ಲಾ ಖಾಸಗಿ, ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ, ಯುವಕರಿಗೆ ಕೆಲಸ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದರು‌. ಸಕಾಲ ವಿಚಾರದಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಆಯಾ ಜಿಲ್ಲೆಗಳಲ್ಲಿರುವ ತಾಲೂಕುಗಳಿಗೆ ಹೋಗಿ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದೇನೆ. ಇನ್ನು, ಕರ್ನಾಟಕ ಭವನ ಕಾರ್ಯಾಚರಣೆಯಲ್ಲಿ ನನಗೆ ತೃಪ್ತಿಯಿಲ್ಲ. ಹೀಗಾಗಿ ನಾನು ದೆಹಲಿಗೆ ಹೋಗಿ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆ ಮಾಡಿ ಕೆಲ ವಿಭಾಗಗಳನ್ನು ರಚಿಸಲಾಗುವುದು. ದೆಹಲಿಯಲ್ಲಿರುವ ನಮ್ಮ ರಾಜ್ಯದ ಅಧಿಕಾರಿಗಳು, ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು ಎಂದರು.

ಎಸ್‌ಐಆರ್‌ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು:  

ರಾಜ್ಯದಲ್ಲಿ ಈಗ ವಿಶೇಷ ತೀವ್ರ ಮತ ಪರಿಷ್ಕರಣೆ(ಎಸ್‌ಐಆರ್‌) ನಡೆಯುತ್ತಿದೆ. ಯಾವುದೇ ಒಬ್ಬ ಮತದಾರನೂ ಮತದಾನದ ಹಕ್ಕು ಕಳೆದುಕೊಳ್ಳಬಾರದು. ಈ ಪ್ರಕ್ರಿಯೆಗೆ ಅಗತ್ಯವಾದ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ತಿಳಿಸಿದರು. ಕೇರಳ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ 90 ಲಕ್ಷ, 20 ಲಕ್ಷ ಜನರ ಎಸ್‌ಐಆರ್‌ನಿಂದ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಹಾಗೆ ಆಗಬಾರದು. ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ ನಿವಾಸ ಧೃಢೀಕರಣ ಪತ್ರ ನೀಡಲು ಅವಕಾಶವಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ದಾಖಲೆ ನೀಡಬೇಕು. ಅಗತ್ಯ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪಿಸುವುದು ಸೇರಿ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿದ್ದೇನೆ. ಜೊತೆಗೆ ಈ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳದಿದ್ದರೆ ಸವಲತ್ತುಗಳನ್ನು ಜನ ಕಳೆದುಕೊಳ್ಳಲಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿ ಎಲ್ಲಾ ಮತದಾರರು ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಜಾಗೃತಿ ಮೂಡಿಸಬೇಕು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೆಪಿಎಸ್‌ ನಿರ್ಮಾಣಕ್ಕೆ ಸಿಎಸ್‌ಆರ್‌ ನಿಧಿ ವಿನಿಯೋಗಕ್ಕೆ ಶೀಘ್ರ ಪತ್ರ: 

ಸರ್ಕಾರ ಪ್ರಸ್ತುತ ಕೈಗೊಂಡಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳ ನಿಮಾಣಕ್ಕೆ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್‌) ನಿಧಿಯ ಹಣ ವಿನಿಯೋಗಿಸುವಂತೆ ರಾಜ್ಯದ ಎಲ್ಲಾ ಕೈಗಾರಿಕೆ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಶೀಘ್ರ ಪತ್ರ ಬರೆಯಲಾಗುವುದು ಎಂದು ಸಿಎಂ ತಿಳಿಸಿದರು. ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಯಾವ ಸಂಸ್ಥೆ ಯಾವ ಉದ್ದೇಶಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಇನ್ನು ಮುಂದೆ ಈ ನಿಧಿ ಬಳಕೆ ಸಂಬಂಧ ಸಂಸ್ಥೆಗಳು ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಾವು ಈಗಾಗಲೇ ಸಿಎಸ್ಆರ್ ನಿಧಿಯಲ್ಲಿ ಪ್ರತಿ ಮೂರು ಗ್ರಾಪಂಗೆ ಒಂದರಂತೆ ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸರ್ಕಾರ ಕೂಡ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಕ್ಷೇತ್ರಕ್ಕೆ ನಿಮ್ಮ ಸಿಎಸ್ಆರ್ ನಿಧಿ ಬಳಸುವಂತೆ ಮನವಿ ಮಾಡಿ ಪತ್ರ ಬರೆಯಲಾಗುವುದು. ಪ್ರಾಥಮಿಕ ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಈ ನಿಧಿ ಬಳಸಲಾಗುವುದು ಎಂದು ವಿವರಿಸಿದರು. 

ಗ್ಯಾರಂಟಿಗಳ ಪರಿಷ್ಕರಣೆ ಮಾಡುವುದಿಲ್ಲ:

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಮಾಡುವುದಿಲ್ಲ. ಆದರೆ, ಈ ಯೋಜನೆಗಳಲ್ಲಿ ಲೋಪಗಳನ್ನು ತಡೆಯಲು, ಫಲಾನುಭವಿಗಳ ಸಂಖ್ಯೆ ಕಲೆ ಹಾಕಲು ಅವರ ಮೊಬೈಲ್‌ ಸಂಖ್ಯೆ ಸೇರಿ ಇತರೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನಡೆಯಲಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನಾವು ಯಾವುದೇ ಗ್ಯಾರಂಟಿ ಯೋಜನೆಯ ಪರಿಷ್ಕರಣೆ ಮಾಡುತ್ತಿಲ್ಲ. ಫಲಾನುಭವಿಗಳ ಮೊಬೈಲ್ ಸಂಖ್ಯೆ ಹಾಗೂ ವಿವರಗಳನ್ನು ಪಡೆಯುತ್ತೇವೆ. 

ಗೃಹಜ್ಯೋತಿ ಯೋಜನೆಯಲ್ಲಿ 1.64 ಕೋಟಿ ಫಲಾನುಭವಿಗಳಿದ್ದು, ಯಾರು ಅರ್ಹರಿದ್ದಾರೋ ಅವರು ಉಚಿತ ವಿದ್ಯುತ್ ಪಡೆದರೆ ನಮ್ಮ ಅಭ್ಯಂತರವಿಲ್ಲ.ಆದರೆ, ವಾಸದ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಪಡೆದು, ಕೆಲವೆಡೆ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಒಬ್ಬರ ಹೆಸರಲ್ಲೇ ಐದಾರು ಮೀಟರ್‌ಗಳಿದ್ದು, ಇವರಲ್ಲಿ ನಮ್ಮ ರಾಜ್ಯದವರು ಇದ್ದಾರೋ, ಬೇರೆ ರಾಜ್ಯದವರು ಇದ್ದಾರೋ ಎಂಬ ಮಾಹಿತಿ ಸರ್ಕಾರಕ್ಕೆ ಇರಬೇಕಲ್ಲವೇ? ಎಂದರು.ಇನ್ನು, ಮೃತರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಪಡೆಯಲಾಗಿದೆ. ಇದರಿಂದ 120 ಕೋಟಿ ವ್ಯತ್ಯಾಸವಾಗಿದೆ. ಇದಕ್ಕೆ ನಿಖರ ಮಾಹಿತಿ ಇರಬೇಕಲ್ಲವೇ? ಹಾಗಾಗಿ ಫಲಾನುಭವಿಗಳ ವಿವರಗಳನ್ನು ಕಲೆ ಹಾಕಲಾಗುವುದು ಎಂದು ತಿಳಿಸಿದರು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯಿದೆ. ಈಗ ಮೇಕೆದಾಟು ವಿಚಾರವಾಗಿ ಕರ್ನಾಟಕದ ನಿಲುವು ಏನು ಎಂದು ಕೇಳಿದಾಗ, ಅವರು ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಾವು ನಮ್ಮ ಡಿಪಿಆರ್ ಸಲ್ಲಿಕೆ ಮಾಡಿದ್ದೇವೆ. ಅವರು ಅದನ್ನು ಪರಿಶೀಲಿಸುತ್ತಾರೆ. ಈಗಾಗಲೇ ಈ ವಿಷಯವಾಗಿ ನ್ಯಾಯಾಲಯ ತನ್ನ ತೀರ್ಮಾನ ಹೇಳಿದೆ. ಆದರೂ, ತನ್ನ ತೀರ್ಪನ್ನು ಪರಿಶೀಲನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ನಾವು ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ, ಜೊತೆಗೆ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ