ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಎರಡನೇ ದಿನವಾದ ಗುರುವಾರ ಮಠಾಧೀಶರು, ಗಣ್ಯರು, ಸಚಿವರು ಹಾಗೂ ಸಚಿವಾಕಾಂಕ್ಷಿಗಳ ಭೇಟಿ ನಡುವೆ ಉನ್ನತ ಅಧಿಕಾರಿಗಳ ಜತೆಗಿನ ಸುದೀರ್ಘ ಸಭೆ, ಖಾತೆ ಕ್ಯಾತೆ ಬಗೆಹರಿಸುವ ಕುರಿತ ಸಂಧಾನ ಸಭೆ ಸೇರಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ ಎರಡನೇ ದಿನವಾದ ಗುರುವಾರ ಮಠಾಧೀಶರು, ಗಣ್ಯರು, ಸಚಿವರು ಹಾಗೂ ಸಚಿವಾಕಾಂಕ್ಷಿಗಳ ಭೇಟಿ ನಡುವೆ ಉನ್ನತ ಅಧಿಕಾರಿಗಳ ಜತೆಗಿನ ಸುದೀರ್ಘ ಸಭೆ, ಖಾತೆ ಕ್ಯಾತೆ ಬಗೆಹರಿಸುವ ಕುರಿತ ಸಂಧಾನ ಸಭೆ ಸೇರಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದರು.
ಬುಧವಾರ ಪದಗ್ರಹಣ ಮಾಡಿದ ಡಿ.ಕೆ.ಶಿವಕುಮಾರ್ ಅವರು ಗುರುವಾರ ಬೆಳಗ್ಗೆ ತಿರುಪತಿಗೆ ತೆರಳಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದರು. ಬಳಿಕ ನಿವಾಸಕ್ಕೆ ವಾಪಸಾದ ಡಿ.ಕೆ.ಶಿವಕುಮಾರ್ ಅವರನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭೇಟಿ ಮಾಡಿದರು.
ಇದರ ನಡುವೆ ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಪ್ರತಿಯಾಗಿ ಕೆಪಿಸಿಸಿ ಸಾರಥ್ಯ ವಹಿಸಿರುವ ಹರಿಪ್ರಸಾದ್ ಅವರಿಗೂ ಶಿವಕುಮಾರ್ ಅಭಿನಂದನೆ ಸಲ್ಲಿಸಿದರು.
ಸಚಿವ ಸ್ಥಾನಕ್ಕಾಗಿ ಲಾಬಿ:
ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ್‌ಪ್ರಕಾಶ್ ಪಾಟೀಲ್, ಕೆ.ಎಚ್.ಮುನಿಯಪ್ಪ ಅವರು ಖಾತೆ ಕುರಿತ ವಿಷಯಗಳ ಕುರಿತು ಶಿವಕುಮಾರ್ ಅವರ ಜತೆ ಲಾಬಿ ನಡೆಸಿದರು ಎನ್ನಲಾಗಿದೆ. ಮತ್ತೊಂದೆಡೆ ಸಚಿವಾಕಾಂಕ್ಷಿಗಳಾದ ಸಂತೋಷ್ ಲಾಡ್, ಲಕ್ಷ್ಮಣ ಸವದಿ ಸೇರಿ ಹಲವರು ಭೇಟಿ ಮಾಡಿ 2ನೇ ಹಂತದ ಸಂಪುಟ ರಚನೆ ವೇಳೆ ತಮ್ಮನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ವಿಧಾನಸೌಧದಲ್ಲಿ ಮ್ಯಾರಥಾನ್ ಸಭೆ:
ಬಳಿಕ ವಿಧಾನಸೌಧಕ್ಕೆ ತೆರಳಿದ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಹತ್ವದ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.
ರಾಮಲಿಂಗಾರೆಡ್ಡಿ ಜತೆ ಸಂಧಾನಕ್ಕೆ ಯತ್ನ:
ಮತ್ತೊಂದೆಡೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿರುವ ರಾಮಲಿಂಗಾರೆಡ್ಡಿ ಅವರನ್ನು ಸಮಾಧಾನಗೊಳಿಸಲು ರಾಮಲಿಂಗಾರೆಡ್ಡಿ ಹಾಗೂ ಮತ್ತೊಬ್ಬ ಆಕಾಂಕ್ಷಿಯಾಗಿರುವ ಕೃಷ್ಣಬೈರೇಗೌಡ ಅವರೊಂದಿಗೆ ಸಂಧಾನ ಸಭೆ ನಡೆಸಿದರು.
ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ ಶುಕ್ರವಾರ ರಾಹುಲ್‌ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳ ಕುರಿತೂ ಚರ್ಚಿಸಿದರು ಎನ್ನಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.