ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂಲಗಳ ಪ್ರಕಾರ ಭಾನುವಾರ ಶಿವಕುಮಾರ್ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಅಧಿಕಾರ ಹಂಚಿಕೆ ತಿಕ್ಕಾಟದ ನಡುವೆಯೇ ರಾಹುಲ್‌ರನ್ನು ಶಿವಕುಮಾರ್ ಭೇಟಿ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ನಿನ್ನೆ ಬೆಂಗಳೂರಿಗೆ ವಾಪಸಾಗಬೇಕಿತ್ತು:ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸಂಜೆ ರಾಹುಲ್ ನೇತೃತ್ವದಲ್ಲಿ ನಡೆದಿದ್ದ ಅಸ್ಸಾಂ ವೀಕ್ಷಕರ ಸಭೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ಜೊತೆ ಉಭಯ ಕುಶಲೋಪರಿ ಹೊರತುಪಡಿಸಿ ರಾಜ್ಯ ರಾಜಕೀಯ ಬಗ್ಗೆ ಚರ್ಚಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶನಿವಾರ ರಾಹುಲ್ ಭೇಟಿ ಮಾಡಿ ಸಂಜೆ 5ಕ್ಕೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲು ಶಿವಕುಮಾರ್ ನಿರ್ಧರಿಸಿದ್ದರು ಎನ್ನಲಾಗಿದೆ.
ಆದರೆ, ಇದರ ನಡುವೆ ಹಿರಿಯ ಮುಖಂಡ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನರಾದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ದೆಹಲಿಯಿಂದ ಶನಿವಾರ ಹೈದರಾಬಾದ್‌ಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಬೀದರ್‌ಗೆ ತೆರಳಿದರು. ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡ ನಂತರ ಮತ್ತೆ ಹೈದರಾಬಾದ್ ಮೂಲಕ ದೆಹಲಿಗೆ ಮರಳಿದರು.ಇದರ ನಡುವೆಯೇ ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಲು ಭಾನುವಾರ ಹಮ್ಮಿಕೊಂಡಿದ್ದ ಸ್ವಿಟ್ಜರ್‌ಲೆಂಡ್‌ನ ದಾವೋಸ್ ಪ್ರವಾಸ ರದ್ದುಪಡಿಸಿದ್ದಾರೆ.
ಅಧಿಕೃತ ಕಾರ್ಯಕ್ರಮ ಹಿನ್ನೆಲೆ ರದ್ದು:ಈ ಬಗ್ಗೆ ಡಿಸಿಎಂ ಕಚೇರಿ ಪತ್ರಿಕಾ ಹೇಳಿಕೆ ನೀಡಿದ್ದು, ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ದಾವೋಸ್ ಪ್ರವಾಸ ರದ್ದುಗೊಳಿಸಲಾಗಿದೆ. ಶಿವಕುಮಾರ್ ಅವರು ಎಐಸಿಸಿ ನಾಯಕರ ಜೊತೆಗಿನ ಸರಣಿ ಸಭೆ ಹಾಗೂ ಮನರೇಗಾ ಮರುಜಾರಿ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧದ ಅಭಿಯಾನ, ಜ.22ರಿಂದ ಆರಂಭವಾಗುವ 5 ದಿನಗಳ ವಿಶೇಷ ಅಧಿವೇಶನದಲ್ಲಿ ಭಾಗವಹಿಸಬೇಕಾಗಿದೆ ಎಂದು ತಿಳಿಸಲಾಗಿದೆ.