;Resize=(412,232))
ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಆಗಮಿಸಿ ನಾಲ್ಕು ದಿನ ಕಳೆದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈವರೆಗೆ ಅವರನ್ನು ಭೇಟಿ ಮಾಡಿಲ್ಲ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಧಿಕಾರ ಹಸ್ತಾಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಆಪ್ತ ಶಾಸಕರ ತಂಡ ದೆಹಲಿಯಲ್ಲಿ ಪರೇಡ್ ನಡೆಸಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಸಂಜೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದರು. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವರು ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಸೋಮವಾರವೂ ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿ ಹಲವರು ಖರ್ಗೆ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದರು.
ಆದರೆ, ನಾಲ್ಕೂ ದಿನವೂ ಖರ್ಗೆ ಅವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿಲ್ಲ. ಬದಲಿಗೆ ಖರ್ಗೆ ಅವರನ್ನು ಭೇಟಿ ಮಾಡಿ ಬಂದ ಕೆ.ಜೆ.ಜಾರ್ಜ್ ಅವರೊಂದಿಗೆ ಚರ್ಚಿಸಿದ್ದರು. ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ವಾಪಸಾಗುತ್ತಿದ್ದು, ಆದರೂ ಡಿ.ಕೆ.ಶಿವಕುಮಾರ್ ಅವರು ಭೇಟಿ ಮಾಡದಿರುವುದು ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಈ ಕುರಿತು ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಖರ್ಗೆಯವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಮತ್ತೆ ಭೇಟಿ ಮಾಡಬೇಕು ಎಂದರೆ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗದಿರುವ ಕುರಿತು ಡಿಕೆಶಿ ಪ್ರತಿಕ್ರಿಯಿಸಿ, ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದಾಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದೆ. ಪದೇಪದೇ ಭೇಟಿ ಮಾಡುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೋದರೂ ಮಾಧ್ಯಮಗಳು ಡಿ.ಕೆ.ಶಿವಕುಮಾರ್ ಬಂದರು, ಕಾಫಿ ಕುಡಿದರು, ಹೋದರು ಎಂದು ಗೊಂದಲ ಸೃಷ್ಟಿಸುತ್ತವೆ. ಭೇಟಿ ಮಾಡಲೇಬೇಕಾದ ಸಂದರ್ಭ ಇದ್ದರೆ ಅವರನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು .
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಆಸ್ತಿ. ಅವರು ಏನು ಹೇಳಿದರೂ ಅದಕ್ಕೆ ನಮ್ಮ ತಕರಾರಿಲ್ಲ. ಅದು ನಮಗೆ ವೇದವಾಕ್ಯ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಬಗ್ಗೆ ನಾನು ಯಾವತ್ತು ಏನೂ ಹೇಳಿಲ್ಲ. ಅವರು ಹೇಳಿದ್ದಕ್ಕೆ ನಾನು ಗೌರವ ನೀಡುತ್ತೇನೆ, ನನ್ನದೇನೂ ತಕರಾರಿಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ಇನ್ನು, ಮಾಧ್ಯಮಗಳು ಸುಮ್ಮನೆ ಗೊಂದಲ ಸೃಷ್ಟಿಸುತ್ತಿವೆ. ಏನಾದರೂ ಇದ್ದರೆ ನನ್ನ ಮತ್ತು ಪಕ್ಷದ ಹೈಕಮಾಂಡ್ ನಡುವೆ ಇರುತ್ತದೆ. ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತೇನೆ ಎಂದರು.
ದೆಹಲಿಗೆ ಭೇಟಿ ಶಿಸ್ತು ಉಲ್ಲಂಘನೆಯಲ್ಲ:ಶಾಸಕರ ದೆಹಲಿ ಭೇಟಿ ಪಕ್ಷದ ಶಿಸ್ತು ಉಲ್ಲಂಘನೆಯಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಶಾಸಕರು ದೆಹಲಿಗೆ ಹೋಗುವುದು ಸಹಜ. ಸಚಿವ ಸಂಪುಟ ಪುನಾರಚನೆ ಪ್ರಸ್ತಾಪವಾಗಿರುವ ಕಾರಣ ಸಚಿವ ಸ್ಥಾನ ಆಕಾಂಕ್ಷಿಗಳು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ನಮ್ಮ ಪಕ್ಷದ ನಾಯಕರಿದ್ದಾರೆ, ಅವರ ಮನೆ ನಮಗೆ ದೇವಸ್ಥಾನವಿದ್ದಂತೆ. ಅಲ್ಲಿಗೆ ಭೇಟಿ ನೀಡಬಹುದು. ಶಾಸಕರು ಪಕ್ಷ ವಿರೋಧಿ ಹೇಳಿಕೆ ನೀಡಿರುವುದು, ಚಟುವಟಿಕೆ ಮಾಡಿರುವುದು, ಡಿನ್ನರ್ ಸಭೆ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೆಹಲಿಗೆ ಹೋಗಿರಬಹುದು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನ ಎಂದು ಹೇಳಿರುವುದಕ್ಕೆ ಉತ್ತರಿಸಿ, ಹೈಕಮಾಂಡ್ ಎಂದರೆ ಒಂದು ಸಮಿತಿಯಿದೆ. ಏಕಾಏಕಿ ಒಬ್ಬರು ನಿರ್ಧರಿಸಲಾಗದು. ಕೆಪಿಸಿಸಿಗೆ ನಾನು ಅಧ್ಯಕ್ಷನಾಗಿದ್ದರೂ ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ. ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಮುಖ್ಯಮಂತ್ರಿ ಅವರನ್ನು ಕೇಳಿದ್ದೇನೆ. ಜಿಲ್ಲಾಧ್ಯಕ್ಷರು, ವಿವಿಧ ನಾಯಕರೊಂದಿಗೆ ಮಾತನಾಡಿದ್ದೇನೆ. ಅದೇ ದಾಟಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರನ್ನು ಕಾಂಗ್ರೆಸ್ ನಾಯಕರೇ ಖರೀದಿ ಮಾಡುವ ಪರಿಸ್ಥಿತಿಯಿದೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಶಾಸಕರ ಖರೀದಿ, ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ. ಕುದುರೆ ವ್ಯಾಪಾರದ ಪಿತಾಮಹರೇ ಬಿಜೆಪಿ ನಾಯಕರು. ಅದು ಅವರ ರೂಢಿ. ಜೆಡಿಎಸ್ ಅದಕ್ಕೆ ಬಲಿಯಾಯಿತು. ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಎಷ್ಟು ಸಾವಿರ ಕೋಟಿ ರು.ಅನ್ನು ಖರ್ಚು ಮಾಡಿದ್ದರು. ಹೋಟೆಲ್‌ನಲ್ಲಿ ಸಿಗುವ ತಿಂಡಿ ರೀತಿ ಪ್ರತಿ ಹುದ್ದೆಗಳಿಗೆ ಇಂತಿಷ್ಟು ಎಂದು ನಿಗದಿ ಮಾಡಿದ್ದರು ಎಂದು ವ್ಯಂಗ್ಯವಾಡಿದರು.ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು. ಸಚಿವ ಸ್ಥಾನಕ್ಕೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿದ್ದರು. ಅವರು ಎಷ್ಟು ಹಣ ಆಮಿಷವೊಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿತ್ತು. ಅದು ದಾಖಲೆಗಳಲ್ಲಿದೆ. ಈಗ ಬಿಜೆಪಿ ಅವರು ತಮ್ಮ ಪ್ರವೃತ್ತಿಯನ್ನು ನೆನಪು ಮಾಡಿಕೊಳ್ಳುತ್ತಿರಬೇಕು ಎಂದರು.
ದೇವರು ಎರಡು ಆಯ್ಕೆ ಕೊಟ್ಟಿರ್ತಾನೆ: ‘ದೇವರು ನಮ್ಮ ಮುಂದೆ ಎರಡು ಆಯ್ಕೆ ಕೊಟ್ಟಿರುತ್ತಾನೆ. ಒಂದು ಕೊಟ್ಟು ಹೋಗುವುದು, ಇನ್ನೊಂದು ಬಿಟ್ಟು ಹೋಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾರ್ಮಿಕವಾಗಿ ನುಡಿದಿದ್ದಾರೆ.ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವುದು ಜೆಡಿಎಸ್ ಶಾಸಕ ಮೇಲೂರು ರವಿಕುಮಾರ್. ಆದರೆ, ಅವರ ಕ್ಷೇತ್ರದಲ್ಲಿ 2 ಸಾವಿರ ಕೋಟಿ ರು.ಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇವೆ.
ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಪರ ನಿಂತಿದೆ ಎಂಬುದಕ್ಕೆ ಇದು ಸಾಕ್ಷಿ. ರಾಜ್ಯದ ಮಹಿಳೆಯರು ಪ್ರತಿದಿನ ನಮ್ಮ ಕಾಂಗ್ರೆಸ್ ಸರ್ಕಾರವನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.ಕಾಂಗ್ರೆಸ್ ನವರಿಂದ ಕಾಂಗ್ರೆಸ್ ಶಾಸಕರ ಖರೀದಿ ಎಂಬ ವಿರೋಧ ಪಕ್ಷದ ನಾಯಕ ಆರ್, ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿ, ಶಾಸಕರ ಖರೀದಿ ಸಂಸ್ಕೃತಿ ಇರುವುದು ಬಿಜೆಪಿಯಲ್ಲಿ. ಮುಖ್ಯಮಂತ್ರಿ ಆಗಬೇಕಾದರೆ ಎಷ್ಟು ಸಾವಿರ ಕೋಟಿ ಕೊಡಬೇಕು ಅಂತ ಬಿಜೆಪಿಯವರೇ ಹಿಂದೆ ಹೇಳಿದ್ದಾರೆ. ಅಸೆಂಬ್ಲಿ ಯಲ್ಲೂ ಸಹ ಎಷ್ಟೆಷ್ಟೋ ಕೋಟಿ ಕೊಟ್ಟು ಶಾಸಕರ ಖರೀದಿ ಮಾಡಿದ ಬಗ್ಗೆ ದಾಖಲೆಗಳಲ್ಲೇ ಬಂದಿದೆ. ಅವರು ಮಾಡ್ತಿದ್ದ ಪ್ರವೃತ್ತಿನಾ ಅವರು ನೆನಪಿಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದರು.
ಬಿಜೆಪಿ ಸರ್ಕಾರಗಳು ಈಗ ಕರ್ನಾಟಕದ ಮಾಡಲ್ ನ್ನು ಅನುಕರಣೆ ಮಾಡುತ್ತಿವೆ. ನಮ್ಮ ಗ್ಯಾರಂಟಿಗಳ ಅನುಕರಣೆ ಮಾಡುತ್ತಿವೆ. ಹೀಗಾಗಿ, 2028ಕ್ಕೂ ಕಾಂಗ್ರೆಸ್ ಸರ್ಕಾರನೇ ಅಧಿಕಾರಕ್ಕೆ ಬರುತ್ತೆ. ವಿರೋಧ ಪಕ್ಷದ ನಾಯಕರು ಹಗಲು ಗನಸು ಕಾಣುವುದು ಬೇಡ ಎಂದರು.ನಾನು ಯಾವ ಪ್ರತಿನಿಧಿಯಾಗಿ ಡಿಕೆಶಿ ಭೇಟಿಯಾಗಿಲ್ಲ: ಜಾರ್ಜ್:ನಾನು ಯಾವ ಪ್ರತಿನಿಧಿಯಾಗಿಯೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ. ನಮ್ಮಲ್ಲಿ ನಾಯಕತ್ವ ಬದಲಾವಣೆ ಗೊಂದಲವಿಲ್ಲ. ಬಂಡಾಯವೇ ಇಲ್ಲ ಅಂದ್ಮೇಲೆ ಶಮನ ಎಲ್ಲಿಂದ ಬಂತು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಡಿಕೆಶಿ ಭೇಟಿಯ ವೇಳೆ ಬಂಡಾಯ ಶಮನಕ್ಕೆ ಪ್ರಯತ್ನಿಸಲಾಯಿತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾದಗಿರಿಯಲ್ಲಿ ಸೋಮವಾರ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿದ್ದು, ನಮ್ಮ ಸಹೋದ್ಯೋಗಿ. ಆಗಾಗ ಅವರ ಜೊತೆ ನಮ್ಮದು ಆತ್ಮೀಯ ಭೇಟಿ ಇರುತ್ತದೆ. ಇಂತಹ ಭೇಟಿಗಳನ್ನು ನಾಯಕತ್ವ ಬದಲಾವಣೆ ಚರ್ಚೆ ಎಂಬ ಗೊಂದಲ ಸೃಷ್ಟಿ ಸರಿಯಲ್ಲ. ಬಿಜೆಪಿಯವರ ಮಾತು ಕೇಳಿ ಬಂಡಾಯ ಎಂಬ ಗೊಂದಲದ ಪ್ರಶ್ನೆ ಕೇಳಬೇಡಿ ಎಂದು ಡಿಕೆಶಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದರು.
ಡಿಕೆಶಿ ಭೇಟಿ ವೇಳೆ ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಚಾರ ಮಾತನಾಡಿದ್ದೇವೆ. ಎಐಸಿಸಿ ತಮಗೆ ಯಾವುದೇ ವಿಚಾರ ಒಪ್ಪಿಸಿಲ್ಲ. ಅದರ ಜವಾಬ್ದಾರಿಯೂ ನನಗಿಲ್ಲ. ಡಿಕೆಶಿ ನಾನು 40 ವರ್ಷಗಳಿಂದ ಪರಿಚಯವಿದ್ದು, ಆತ್ಮೀಯತೆ ಇದೆ. ಹಾಗಾಗಿ, ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಬರುತ್ತಾರೆ ಎಂದು ಸ್ಪಷ್ಟನೆ ನೀಡಿದರು.
ನಾನು ರಾಜ್ಯದ ಮುಖ್ಯಮಂತ್ರಿ ಪ್ರತಿನಿಧಿ, ಎಐಸಿಸಿ ಪ್ರತಿನಿಧಿ ಅಲ್ಲ. ನಾನು ವೈಯಕ್ತಿಕವಾಗಿ ಆಗಾಗ ಡಿಕೆಶಿ ಅವರನ್ನು ಭೇಟಿಯಾಗುತ್ತಲೇ ಇರುವೆ. ಬಂಡಾಯವೇ ಇಲ್ಲ, ಶಮನ ಎಲ್ಲಿಂದ ಆಗುತ್ತದೆ. ಎಲ್ಲ ಕಾಂಗ್ರೆಸ್ ಶಾಸಕರು ಒಂದೇ ಕುಟುಂಬ ಇದ್ದಂತೆ ಇದ್ದೇವೆ. ಡಿಕೆಶಿ ನೇರವಾಗಿ ಹೇಳಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಜೊತೆಯಲ್ಲಿದ್ದೇವೆ ಎಂದಿದ್ದಾರೆ ಎಂದು ಗೊಂದಲಕ್ಕೆ ತೆರೆ ಎಳೆದರು.