‘ರಾಜ್ಯ ಸರ್ಕಾರವು ಕರ್ನಾಟಕಕ್ಕೆ ಹೂಡಿಕೆ ಆಕರ್ಷಿಸಿ, ಬೆಂಗಳೂರಿನಿಂದ ಆಚೆಗೂ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಲು ಬದ್ಧವಾಗಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು:
‘ರಾಜ್ಯ ಸರ್ಕಾರವು ಕರ್ನಾಟಕಕ್ಕೆ ಹೂಡಿಕೆ ಆಕರ್ಷಿಸಿ, ಬೆಂಗಳೂರಿನಿಂದ ಆಚೆಗೂ ಕೈಗಾರಿಕಾ ಬೆಳವಣಿಗೆಗೆ ಒತ್ತು ನೀಡಲು ಬದ್ಧವಾಗಿದೆ. ಜತೆಗೆ ರಾಜ್ಯದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಹಾಗೂ ಹೊಸ ಹೂಡಿಕೆಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಕೈಗಾರಿಕೆಗಳನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಸುವುದು ಮತ್ತು ಬೆಂಗಳೂರಿನಿಂದ ಹೊರಗೆ ಆರ್ಥಿಕ ಅವಕಾಶ ವಿಸ್ತರಿಸುವ ಗುರಿ ಹೊಂದಿದ್ದೇವೆ. ಆ ಮೂಲಕ ಪ್ರತಿಯೊಂದು ಪ್ರದೇಶವನ್ನೂ ರಾಜ್ಯದ ಬೆಳವಣಿಗೆಯ ಪಯಣದಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಹೂಡಿಕೆ ಅಭಿಯಾನದ ಉದ್ದೇಶ ಎಂದಿದ್ದಾರೆ.
ರಾಜ್ಯ ಸರ್ಕಾರದ ಹೂಡಿಕೆ ಆಕರ್ಷಣೆ ಅಭಿಯಾನದ ಭಾಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹಾಗೂ ನಿಯೋಗದೊಂದಿಗೆ ಜಪಾನ್ನ ಮೊತೊಮಚಿ ಘಟಕದಲ್ಲಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರೊಂದಿಗೆ ಸಿಎಂ ಮಾತುಕತೆ ನಡೆಸಿದರು.
ಕರ್ನಾಟಕಕ್ಕೆ ಹೊಸ ಹೂಡಿಕೆ ಆಕರ್ಷಿಸುವುದು, ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಹಾಗೂ ವಿದೇಶಿ ನೇರ ಹೂಡಿಕೆ(ಎಫ್ಡಿಐ) ಬಲಪಡಿಸುವುದರ ಕುರಿತು ಚರ್ಚಿಸಿದರು.
ಟೊಯೋಟಾದ ವಿಸ್ತರಣಾ ಯೋಜನೆಗಳಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ಮತ್ತು ಅನುಕೂಲಗಳನ್ನು ರಾಜ್ಯ ಸರ್ಕಾರ ಕಲ್ಪಿಸಲಿದೆ. ರಾಜ್ಯದಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವಂತೆ ಟೊಯೋಟಾ ಆಡಳಿತ ಮಂಡಳಿಗೆ ಶಿವಕುಮಾರ್ ಮನವಿ ಮಾಡಿದರು.ಇದೇ ವೇಳೆ ಟೊಯೋಟಾ ಸಂಸ್ಥೆಯನ್ನು ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಿ, ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಕೋರಿದರು. ಸಭೆಯಲ್ಲಿ ಟೊಯೋಟಾ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಸಕಾಜು ಯೊಶಿಮುರಾ ನೇತೃತ್ವದ ನಿಯೋಗ ಹಾಜರಿತ್ತು.
ರಾಜ್ಯದಲ್ಲಿ ಅಗ್ಗದ ಹೈಬ್ರಿಡ್ ಟ್ಯಾಕ್ಸಿ, ಜೆಪಿಎನ್ ಟ್ಯಾಕ್ಸಿ ಪರಿಚಯಕ್ಕೆ ಒಲವು:
ಕರ್ನಾಟಕದಲ್ಲಿ ಟೊಯೋಟಾದ ಜಪಾನ್ ಮಾದರಿಯ ಕೈಗೆಟುಕುವ ಹೈಬ್ರಿಡ್ ಟ್ಯಾಕ್ಸಿ ಪರಿಚಯಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಿಎಂ ಶಿವಕುಮಾರ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಟ್ಯಾಕ್ಸಿ ಸೇವೆಗೆ ವಿನ್ಯಾಸಗೊಳಿಸಿರುವ ಈ ಹೈಬ್ರಿಡ್ ವಾಹನವು ಕಡಿಮೆ ನಿರ್ವಹಣಾ ವೆಚ್ಚದ ಮೂಲಕ ಸಾರ್ವಜನಿಕರಿಗೆ ಹೆಚ್ಚು ಕೈಗೆಟುಕುವ ಟ್ಯಾಕ್ಸಿ ಸೇವೆ ಒದಗಿಸಲು ನೆರವಾಗಬಹುದು ಎಂದರು. ಟೊಯೋಟಾದ ಜೆಪಿಎನ್ ಟ್ಯಾಕ್ಸಿ ಬಗ್ಗೆಯೂ ಸಿಎಂ ಹೆಚ್ಚಿನ ಆಸಕ್ತಿ ತೋರಿದರು. ರಾಜ್ಯದಲ್ಲಿ ಪರಿಚಯಿಸಲು ಹಾಗೂ ರಾಜ್ಯದಲ್ಲೇ ತಯಾರಿಕೆ ಮಾಡಲು ಇರುವ ಅವಕಾಶಗಳನ್ನು ಅಧ್ಯಯನ ಮಾಡಲು ಒಲವು ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.