ಕನ್ನಡಪ್ರಭ ವಾರ್ತೆ ಬೆಂಗಳೂರು:
ಸೋಮವಾರ ನಯನಾ ಮೋಟಮ್ಮ ಅವರು ವಿಧಾನಸೌಧದ ಸ್ಪೀಕರ್ ಕಚೇರಿಗೆ ರಾಜೀನಾಮೆ ಪತ್ರ ಹಿಡಿದು ಬಂದಿದ್ದರು. ಈ ವೇಳೆ ಸ್ಪೀಕರ್ ಜಿ.ಎಸ್.ಪಾಟೀಲ್ ಅವರು ಕಚೇರಿಯಲ್ಲಿ ಇರಲಿಲ್ಲ. ಬಳಿಕ ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರನ್ನು ಭೇಟಿಯಾದ ನಯನಾ, ರಾಜೀನಾಮೆ ಪತ್ರ ಕೊಡಲು ಮುಂದಾದರು. ಈ ವೇಳೆ, ನಿಯಮಗಳ ಪ್ರಕಾರ ನಾನು ರಾಜೀನಾಮೆ ಪತ್ರ ಸ್ವೀಕರಿಸಲು ಅವಕಾಶವಿಲ್ಲ ಎಂದು ಅಶೋಕ್ ಮಿರ್ಜಿ ಸ್ಪಷ್ಟಪಡಿಸಿದರು.
ಅಲ್ಲದೆ, ಸ್ಪೀಕರ್ ಜಿ.ಎಸ್.ಪಾಟೀಲ್‌ಗೆ ದೂರವಾಣಿ ಕರೆ ಮಾಡಿದ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ, ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ನೀಡಲು ಕಚೇರಿಗೆ ಬಂದಿರುವ ವಿಚಾರ ತಿಳಿಸಿದರು. ಈ ನಡುವೆ ಮಂಗಳವಾರ ಖುದ್ದು ಸ್ಪೀಕರ್ ಅವರನ್ನೇ ಭೇಟಿಯಾಗುವೆ ಎಂದು ಹೇಳಿದ ನಯನಾ, ರಾಜೀನಾಮೆ ಪತ್ರವನ್ನು ಅಶೋಕ್ ಮಿರ್ಜಿ ಅವರಿಗೆ ನೀಡಿದರು.ನಯನಾ ರಾಜೀನಾಮೆ ನೀಡಲು ಬಂದಿರುವ ವಿಚಾರ ತಿಳಿದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎ.ಎಸ್.ಪೊನ್ನಣ್ಣ ಅವರು ತಕ್ಷಣ ಸ್ಪೀಕರ್ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿ ಅವರ ಕಚೇರಿಗೆ ಆಗಮಿಸಿದರು. ರಾಜೀನಾಮೆ ನೀಡದಂತೆ ನಯನಾ ಅವರ ಮನವೊಲಿಸಲು ಪ್ರಯತ್ನಿಸಿದರು. ಹೀಗಾಗಿ ಸ್ಪೀಕರ್ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಕೆಲ ಕಾಲ ನಯನಾ ರಾಜೀನಾಮೆ ಹೈಡ್ರಾಮಾ ನಡೆಯಿತು.