ಕೆ.ಆರ್.ಪೇಟೆ: ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದ ಅಧಿಕಾರಿಗಳು

KannadaprabhaNewsNetwork |  
Published : Nov 24, 2026, 12:45 AM IST
23ಕೆಎಂಎನ್ ಡಿ18 | Kannada Prabha

ಸಾರಾಂಶ

ಬೆಳಗ್ಗೆ 10 ಗಂಟೆಗೆ ಉಪ ನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಆಗಮಿಸಬೇಕು. ಆದರೆ, 11 ಗಂಟೆ ನಂತರ ಕೆಲಸಕ್ಕೆ ಆಗಮಿಸಿದ್ದಾರೆ. ಇವರು ಬರುವವರೆಗೂ ರೈತರು ಮತ್ತು ಸಾರ್ವಜನಿಕರು ತಮ್ಮ ಕಾಗದ ಪತ್ರಗಳ ನೋಂದಣಿಗಾಗಿ ಕಾದು ನಿಲ್ಲಬೇಕಾದ ಪರಿಸ್ಥಿತಿಯಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ಪಟ್ಟಣದ ಉಪ ನೋಂದಣಾಧಿಕಾರಿಗಳು ಮತ್ತು ಕೆಲವು ಸಿಬ್ಬಂದಿಗೆ ಕೆಲಕಾಲ ದಿಗ್ಬಂಧನ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿ ಎದುರು ಧರಣಿ ಕುಳಿತು 11 ಗಂಟೆಗೆ ಕರ್ತವ್ಯಕ್ಕೆ ಆಗಮಿಸಿದ ಉಪ ನೋಂದಣಾಧಿಕಾರಿ ಮಧುಸೂದನ್ ಮತ್ತು ಕೆಲವು ಸಿಬ್ಬಂದಿಯನ್ನು ಒಳಗೆ ಬಿಡದೆ ತಡೆಹಿಡಿದರು.

ಈ ವೇಳೆ ಮಾತನಾಡಿದ ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಬೆಳಗ್ಗೆ 10 ಗಂಟೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಆಗಮಿಸಬೇಕು. ಆದರೆ, 11 ಗಂಟೆ ನಂತರ ಕೆಲಸಕ್ಕೆ ಆಗಮಿಸಿದ್ದಾರೆ. ಇವರು ಬರುವವರೆಗೂ ರೈತರು ಮತ್ತು ಸಾರ್ವಜನಿಕರು ತಮ್ಮ ಕಾಗದ ಪತ್ರಗಳ ನೋಂದಣಿಗಾಗಿ ಕಾದು ನಿಲ್ಲಬೇಕಾದ ಪರಿಸ್ಥಿತಿಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಕಾನೂನು ಹೇಳುವ ಅಧಿಕಾರಿಗಳು ಮತ್ತು ನೌಕರರು ಮಾತ್ರ ಕಾನೂನು ಪಾಲನೆ ಮಾಡುತ್ತಿಲ್ಲ. ಸರ್ಕಾರಿ ನಿಯಮಗಳು ಇವರಿಗೆ ಲೆಕ್ಕಕ್ಕೆ ಇಲ್ಲ. ನಿಯಮಾನುಸಾರ ತಮ್ಮ ಕರ್ತವ್ಯದ ಸ್ಥಳದಲ್ಲಿಯೇ ವಾಸಿಸಬೇಕು. ಆದರೆ, ಉಪ ನೋಂದಣಾಧಿಕಾರಿಗಳು ಮತ್ತು ಅವರ ಕಚೇರಿಯ ಕೆಲವು ಸಿಬ್ಬಂದಿ ದಿನನಿತ್ಯ ಮೈಸೂರಿನಿಂದ ಕಚೇರಿಗೆ ಬರುತ್ತಿರುವುದರಿಂದ ಪ್ರತಿನಿತ್ಯ ಕಚೇರಿಗೆ ಕನಿಷ್ಠ ಒಂದು ಗಂಟೆ ತಡವಾಗಿ ಆಗಮಿಸಿ ರೈತರನ್ನು ತಮ್ಮ ಗುಲಾಮರಂತೆ ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಗದ ಪತ್ರಗಳ ನೋಂದಣಿಗೆ ನಿಯಮಾವಳಿ ಮೀರಿ ಹಣ ವಸೂಲಿ ಮಾಡಲಾಗುತ್ತಿದೆ. ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಡವಾಗಿ ಬರುತ್ತಿರುವ ಅಧಿಕಾರಿ ಮತ್ತು ಸಿಬಂದ್ದಿ ಮೇಲೆ ಕ್ರಮ ಜರುಗಿಸುವವರೆಗೂ ತಡವಾಗಿ ಬಂದವರನ್ನು ಕಚೇರಿ ಒಳಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ನವಂಬರ್ 26ರಂದು ಕೆ.ಆರ್.ಪೇಟೆಗೆ ಆಗಮಿಸಿ ರೈತರ ಸಮಸ್ಯೆ ಆಲಿಸಿ ತಡವಾಗಿ ಬರುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗುವುದಾಗಿ ಜಿಲ್ಲಾ ನೋಂದಣಾಧಿಕಾರಿಗಳು ದೂರವಾಣಿ ಮೂಲಕ ಪ್ರತಿಭಟನಾ ನಿರತ ರೈತರ ಮನವೊಲಿಸಿದ ಆನಂತರ ರೈತ ಮುಖಂಡರು ಪ್ರತಿಭಟನೆ ಕೈಬಿಟ್ಟರು.

ಈ ವೇಳೆ ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಲಕ್ಷ್ಮೀಪುರ ನಾಗರಾಜು, ಹೊನ್ನೇಗೌಡ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?