ಹಣ ಬಯಸುವ ಅಧಿಕಾರಿಗಳು ನನ್ನ ಕ್ಷೇತ್ರ ಬಿಟ್ಟು ತೊಲಗಿ

KannadaprabhaNewsNetwork |  
Published : Nov 24, 2026, 12:45 AM IST
23ಜಿಯುಡಿ1 | Kannada Prabha

ಸಾರಾಂಶ

ಜನರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಾರ್ನಿಂಗ್‌

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಸರ್ಕಾರಿ ಕೆಲಸಗಳಿಗಾಗಿ ಕಚೇರಿಗಳಿಗೆ ಬರುವಂತಹ ಜನರ ಬಳಿ ಹಣ ಬಯಸುವಂತಹ ಅಧಿಕಾರಿಗಳು ಕೂಡಲೇ ಕ್ಷೇತ್ರ ಬಿಟ್ಟು ತೊಲಗಿ, ಇಲ್ಲಿ ಇರಬೇಕಾದರೆ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೂಕಿನ ಜನರಿಗೆ ಸರ್ಕಾರದ ಸೌಲಭ್ಯಗಳು ಹಾಗೂ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೊತ್ತುಕೊಂಡು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು. ಅದನ್ನು ಬಿಟ್ಟು ಜನರ ಬಳಿ ಹಣ ಕೇಳುವುದು, ಅವರ ಕೆಲಸ ಮಾಡಿಕೊಡದೇ ಹಿಂಸೆ ಮಾಡುವುದು ಮಾಡಿದರೇ ಅಂತಹವರಿಗೆ ತಕ್ಕ ಪಾಠ ಕಲಿಸುತ್ತೇನೆ. ಜೊತೆಗೆ ಅವರನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ತಾಲೂಕಿನಲ್ಲಿ ಈಗಾಗಲೇ ೧೩ ಅಂಬೇಡ್ಕರ್ ಭವನಗಳು ಮಂಜೂರಾಗಿದ್ದು, ಕೇವಲ ೫ ಮಾತ್ರ ಪೂರ್ಣಗೊಂಡಿದೆ ಎಂಬ ಮಾಹಿತಿ ನೀಡಿದ್ದೀರಿ, ಕೂಡಲೇ ಎಲ್ಲಾ ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಬೇಕು ಎಂದು ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನೂ ಇತ್ತೀಚಿಗೆ ಸರ್ವೆ ಕಾರ್ಯ ನಡೆಸುವಾಗ ಪೊಲೀಸ್ ಭದ್ರತೆ ಬೇಕಾದರೇ ಪೊಲೀಸ್ ಇಲಾಖೆಯವರು ಶುಲ್ಕ ಕಟ್ಟಿಸಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಸಂಬಂಧ ಜಿಲ್ಲಾ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಲಾಗುವುದು. ರೈತರ ಬಳಿ ಯಾರೂ ಹಣ ಕೇಳಬಾರದು ಎಂದರು.

ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸರಿಯಾದ ಊಟ ನೀಡಬೇಕು. ಮಕ್ಕಳಿಗೆ ನೀಡುವಂತ ಆಹಾರದಲ್ಲಿ ಕಳಪೆ ಇರಬಾರದು. ಒಂದು ವೇಳೆ ಕಳಪೆ ಆಹಾರ ಧಾನ್ಯಗಳು ಬಂದರೇ ಅವನ್ನು ಟೆಂಡರ್ ದಾರರಿಗೆ ವಾಪಸ್ ಕಳುಹಿಸಬೇಕು. ನಿಲಯಪಾಲಕರ ಅಪ್ಪಣೆ ಇಲ್ಲದೇ ಯಾವುದೇ ಮಕ್ಕಳನ್ನು ಹೊರಗೆ ಕಳುಹಿಸಬಾರು. ಕಳೆದೆರಡು ದಿನಗಳ ಹಿಂದೆ ಮಕ್ಕಳು ಹಾಸ್ಟಲ್ ಹೊರಗೆ ತಿರುಗಾಡುತ್ತಿರುವುದು ಕಂಡು ಬಂದಿದ್ದು, ಆ ಹಾಸ್ಟಲ್ ವಾರ್ಡನ್ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಹಾಸ್ಟಲ್ ನಿಂದ ಹೊರಗೆ ಬಿಡಬಾರದು. ಒಂದು ವೇಳೆ ಈ ರೀತಿಯ ಘಟನೆಗಳು ಕಂಡುಬಂದರೇ ಅಂತಹವರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ತಾಲ್ಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಬಡ ರೋಗಿಗಳಿಗೆ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸದೆ, ತಾಲ್ಲೂಕು ಆಸ್ಪತ್ರೆಯಲ್ಲಿಯೇ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ವೈ.ರವಿ, ತಾಪಂ ಇಒ ನಾಗಮಣಿ, ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ಸೇರಿದಂತೆ ಕೆಡಿಪಿ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಹಾಜರಿದ್ದರು.

23ಜಿಯುಡಿ1: ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿತೆಗಳು ಜೀವಪರ ಸಂದೇಶ ಸಾರುವಂತಿರಲಿ
ಶುಂಠಿ ಕಣ ಬಂದ್ ಮಾಡಿದರೆ ಶಾಸಕರು ಖರೀದಿಸ್ತಾರಾ?