ಡಿಕೆಶಿ ಮುಂದಿನ ಸಿಎಂ, ಬಿವೈವಿ ಡಿಸಿಎಂ: ಶಾಸಕ ಯತ್ನಾಳ್

KannadaprabhaNewsNetwork | Published : May 18, 2025 1:22 AM
Follow Us

ಸಾರಾಂಶ

ಡಿ.ಕೆ.ಶಿವಕುಮಾರ ಜೊತೆಗೆ ರಾಜ್ಯದಲ್ಲಿ ಸರ್ಕಾರ ಮಾಡಲು ಒಪ್ಪಂದವಾಗಿದೆ. ಮುಖ್ಯಮಂತ್ರಿಯಾಗಿ ಶಿವಕುಮಾರ, ಉಪ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಎನ್ನುವ ಒಪ್ಪಂದವೂ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಶೀಘ್ರವೇ ಹೊಸ ಕೂಸು!

ದಾವಣಗೆರೆ: ಡಿ.ಕೆ.ಶಿವಕುಮಾರ ಜೊತೆಗೆ ರಾಜ್ಯದಲ್ಲಿ ಸರ್ಕಾರ ಮಾಡಲು ಒಪ್ಪಂದವಾಗಿದೆ. ಮುಖ್ಯಮಂತ್ರಿಯಾಗಿ ಶಿವಕುಮಾರ, ಉಪ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಎನ್ನುವ ಒಪ್ಪಂದವೂ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಮಾತನಾಡಿ, ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿಯಾಗಲು ಯಾವುದೇ ಅವಕಾಶ ಕೊಡುವುದಿಲ್ಲ. ಡಿಕೆಶಿ ಜೊತೆಗೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಒಪ್ಪಂದವಾಗಿದೆ. ನಾನು ಹೊಸದಾಗಿ ಏನಾದರೂ ಮಾಡುತ್ತೇನೆಯೇ ಹೊರತು, ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದರು.

ಬಿಜೆಪಿಯಲ್ಲಿ ಕೆಲಸ ಮಾಡುವುದಕ್ಕೆ ಸಮರ್ಥ ನಾಯಕತ್ವ ಇಲ್ಲ. ಬಿಜೆಪಿಯಲ್ಲಿ ಹೊಸ ಕೂಸು ಹುಟ್ಟುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಒಂದು ಸಾವಿರ ಜನರು ಸಹ ಸೇರುವುದಿಲ್ಲ. ಇದು ಸಮರ್ಥ ರಾಜ್ಯಾಧ್ಯಕ್ಷ ಇಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದಲೇ ಶೀಘ್ರವೇ ಪಕ್ಷದಲ್ಲಿ ಹೊಸ ಕೂಸು ಹುಟ್ಟಲಿದೆ ಎಂದು ಭವಿಷ್ಯ ನುಡಿದರು.

ವೀರಶೈವ ಲಿಂಗಾಯತರನ್ನು ಒಗ್ಗೂಡಿಸಲು ಆಗಿಲ್ಲ. ಸಂಸದ ಬಿ.ವೈ.ರಾ‍ಘವೇಂದ್ರ, ಯಡಿಯೂರಪ್ಪ ಅವರಿಗೆ ಶಾಮನೂರು ಶಿವಶಂಕರಪ್ಪ ಆಶೀರ್ವಾದವಿದೆ. ರೇಣುಕಾಚಾರ್ಯ ಅಪ್ಪ- ಮಗನಿಗೆ ಹೆದರಿಸುತ್ತಾರೆ. ಈಶ್ವರಪ್ಪನಿಗೂ ಹೆದರಿಸೋಕೆ ಹೇಳುತ್ತಾರೆ. ವಿಜಯೇಂದ್ರ ಸಹ ಸೀಡಿ ಕಂಪನಿ ಮಾಲೀಕ. ಡಿ.ಕೆ.ಶಿವಕುಮಾರ್‌ ಸಹ ಅದೇ ಮಾಡುತ್ತಾರೆ. ವಿಜಯೇಂದ್ರ ಸೀಡಿ ಸಹ ಅಧಿಕಾರಿಗಳಿಂದ ಡಿಲೀಟ್‌ ಆಗಿ, ಪ್ರಕರಣ ಕ್ಲೋಸ್ ಆಗಿದೆ ಎಂದು ದೂರಿದರು.

ಕಾಂಗ್ರೆಸ್‌ನವರು ಭ್ರಷ್ಟಾಚಾರ ಬಿಟ್ಟರೆ ಬೇರೇನನ್ನೂ ಮಾಡಿಲ್ಲ. ಕಾಂಗ್ರೆಸ್ಸಿನವರ ಸಾಧನೆಯೆಂದರೆ ಪಂಚ ಗ್ಯಾರಂಟಿ ಮಾತ್ರ. ಆದರೆ, ಅದ್ಯಾವ ಸಾಧನೆ ಮಾಡಿದ್ದಾರೆಂಬಂತೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದ್ದಾರೆ? ಕಾಂಗ್ರೆಸ್‌ನಿಂದ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಸ್ವಾತಂತ್ರ್ಯವೇನಾದರೂ ಸಿಕ್ಕಿದ್ದರೆ ಅದು ನೇತಾಜಿ ಸುಭಾಶ್ಚಂದ್ರ ಬೋಸ್‌ರಿಂದ ಎಂದು ತಿಳಿಸಿದರು.

ದೇಶದ ವಿಷಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮಾತನಾಡಬೇಕು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್ ಮಾನಸಿಕ ಸ್ಥಿತಿ ಜನರು ಗಮನಿಸುತ್ತಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳನ್ನು ಖುಷಿಪಡಿಸುವುದಕ್ಕೆ ಇಂತಹವರು ಮಾತನಾಡುತ್ತಾರೆ. ಬಾಯಿ, ನಾಲಿಗೆಯನ್ನು ಸರಿಯಾಗಿಟ್ಟುಕೊಂಡು, ಪ್ರಿಯಾಂಕ್‌ ಖರ್ಗೆ, ಲಾಡ್ ಮಾತನಾಡಲಿ ಎಂದು ತಾಕೀತು ಮಾಡಿದರು.

ದೇಶದ ವಿಚಾರ ಬಂದಾರ ಯಾರೇ ಆಗಿದ್ದರೂ ರಾಜಕೀಯ ಮಾಡಬಾರದು. ಸಂತೋಷ್‌ ಲಾಡ್‌ ರಾಜ್ಯದ ಕೆಲಸ ಮಾಡುವುದನ್ನು ಬಿಟ್ಟು, ಪ್ರಧಾನಿ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.