ಬ್ಯಾಡಗಿ: ದೇಶದ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಹಿನ್ನೆಲೆ ಹಾಗೂ ರಾಷ್ಟ್ರ ರಕ್ಷಣೆಗಾಗಿ ನಾಗರಿಕರ ವೇದಿಕೆಯಡಿ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ‘ತಿರಂಗಯಾತ್ರೆ’ಗೆ ಪಕ್ಷಾತೀತವಾಗಿ ಬೆಂಬಲ ದೊರೆತು ಅಭೂತಪೂರ್ವ ಯಶಸ್ಸು ಕಂಡಿತು.
ಒಟ್ಟು 100 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗೆ ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ತಿರಂಗಾ ಯಾತ್ರೆ ಹಳೇಪುರಸಭೆ, ಮುಖ್ಯರಸ್ತೆ, ಸುಭಾಸ್ ಸರ್ಕಲ್, ಸ್ಟೇಷನ್ ರಸ್ತೆ ಮೂಲಕ ತಹಸೀಲ್ದಾರ್ ಕಚೇರಿ ವರೆಗೆ ಸಾಗಿತು.ಸಾವಿರಾರು ಜನರಿಂದ ಹರ್ಷೋದ್ಗಾರ: ಜಿಲ್ಲೆಯ ಸಾವಿರಾರು ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಪಟ್ಟಣದ ರಸ್ತೆಗಳಲ್ಲಿ ಜನಸಾಗರವೇ ಸೇರಿ ‘ತಿರಂಗಾ ಯಾತ್ರೆ’ ಸಂಚಲನ ಮೂಡಿಸಿತು.
ಶಕ್ತಿ ನೀಡಿದ ಕೇಂದ್ರ ಸರ್ಕಾರ: ಈ ವೇಳೆ ಮಾತನಾಡಿದ ಮಾಜಿ ಸೈನಿಕ ಎಂ.ಬಿ. ಬಣಕಾರ, ಕಳೆದ 60 ವರ್ಷದಲ್ಲಿ ದೇಶದಲ್ಲಿ ಸೈನಿಕರಿಗೆ ಯಾವುದೇ ಪವರ್ ನೀಡಿರಲಿಲ್ಲ. ಕೇವಲ ಅವರನ್ನು ಬಲಿದಾನಕ್ಕಾಗಿ ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಮೊದಲ ಬಾರಿಗೆ ಆರ್ಮಿ, ನೇವಿ ಹಾಗೂ ಏರ್‌ಫೋರ್ಸ್ ಮೂರು ದಳಗಳಿಗೆ ಸಂಪೂರ್ಣ ಶಕ್ತಿ ನೀಡಲಾಗಿದ್ದು, ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಅಡಗಿದ್ದ ಭಯೋತ್ಪಾದಕರನ್ನು ಬೆನ್ನತ್ತಿ ಹೊಡೆಯಲು ಸಹಕಾರಿಯಾಯಿತು. ಇದುವೇ ನಮ್ಮ ಸೈನಿಕರ ತಾಕತ್ತು ಎಂದರು.ಪಕ್ಷಾತೀತ ಬೆಂಬಲ: ತಿರಂಗಾ ಯಾತ್ರೆಗೆ ನ್ಯಾಯವಾದಿಗಳ ಸಂಘ, ಮಾಜಿ ಸೈನಿಕರ ಸಂಘ, ರೈತ ಸಂಘ, ಅಂಗವಿಕಲರ ಸಂಘ, ಹಿರಿಯ ನಾಗರಿಕರು, ನಿವೃತ್ತ ಸೈನಿಕರು, ಜೈನ ಸಮುದಾಯ, ವರ್ತಕರ ಸಂಘ, ಅಂಜುಮನ್ ಏ-ಇಸ್ಲಾಂ ಸಂಸ್ಥೆ, ಕರವೇ, ಪುರಸಭೆ ಹಾಲಿ, ಮಾಜಿ ಸದಸ್ಯರು, ಹಾವೇಮುಲ್ ಸದಸ್ಯರು, ಮೋಟೆಬೆನ್ನೂರ ಹಾಗೂ ಬ್ಯಾಡಗಿ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸುವ ಮೂಲಕ ದೇಶ ಕಾಯುವ ಸೈನಿಕರ ಮನೋಬಲ ಹೆಚ್ಚಿಸುವ ಯಾತ್ರೆಗೆ ಕೈಜೋಡಿಸಿ ಯಶಸ್ವಿಗೊಳಿಸಲು ಸಹಕಾರ ನೀಡಿದರು.
ಮಾಜಿ ಸೈನಿಕರಾದ ಮಲ್ಲೇಶ ಚಿಕ್ಕಣ್ಣನವರ, ಎನ್.ಎಸ್. ಬಂಡಿವಡ್ಡರ, ರಮೇಶ ಮೋರೆ, ದೇವರಾಜ ಡಿಸ್ಲೆ, ಕರಬಸಪ್ಪ ನೂರಂದನವರ, ರಾಜಶೇಖರ ಹೊಸಳ್ಳಿ, ಕಾಳಿಂಗರಾಜ ಮಾತನವರ, ಹನುಮಂತಪ್ಪ ಛತ್ರದ, ಜಿಪಂ ಮಾಜಿ ಅಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ಬಸವರಾಜ ಛತ್ರದ, ಭಾರತಿ ಜಂಬಗಿ, ಶಿವಬಸಣ್ಣ ಕುಳೇನೂರ, ಲಲಿತಾ ಗುಂಡೇನಹಳ್ಳಿ, ರಾಜು ಮೋರಿಗೇರಿ, ಸರೋಜಾ ಉಳ್ಳಾಗಡ್ಡಿ, ಎನ್.ಎಸ್. ಬಟ್ಟಲಕಟ್ಟಿ, ವಿಜಯಭರತ ಬಳ್ಳಾರಿ, ಸುರೇಶ ಅಸಾದಿ, ವಿನಯ ಹಿರೇಮಠ, ಲಲಿತಾ ಗುಂಡೇನಹಳ್ಳಿ, ಮಂಜುನಾಥ ಓಲೇಕಾರ, ಮುರಿಗೆಪ್ಪ ಶೆಟ್ಟರ, ಸುಭಾಸ್ ಮಾಳಗಿ, ರಾಜು ಶಿಡೇನೂರ, ಸಂತೋಷ ಆಲದಕಟ್ಟಿ, ನಂದೀಶ ವೀರನಗೌಡ್ರ, ವಿಜಯ ಮಾಳಗಿ, ವಿಶ್ವನಾಥ ಅಂಕಲಕೋಟಿ, ಗಣೇಶ ಅಚಲಕರ, ವಿದ್ಯಾ ಶೆಟ್ಟಿ, ಮಂಜುನಾಥ ಬೋವಿ, ಬಿಇಎಸ್ ವರ್ತಕರ ಕಾಲೇಜು ಉಪನ್ಯಾಸಕರು, ಎಸ್‌ಜೆಜೆಎಂ ಎನ್‌ಸಿಸಿ ಹಾಗೂ ಎನ್.ಎಸ್.ಎಸ್. ಘಟಕದ ಸದಸ್ಯರು ನವಚೇತನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ದೇಶ ಸಾರ್ವಭೌಮತ್ವದ ಪ್ರಶ್ನೆ ಬಂದಾಗ ಜಾತಿ, ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ದೇಶದ ರಕ್ಷಣೆಗೆ ನಿಲ್ಲಬೇಕು. ಭಾರತೀಯರಾಗಿ ಇದು ನಮ್ಮ ಕರ್ತವ್ಯವೂ ಹೌದು. ಇಲ್ಲದಿದ್ದಲ್ಲಿ ಹೊರಗಿನ ಶತ್ರುಗಳು ನಮ್ಮ ಮನೆಗಳಿಗೆ ನುಗ್ಗಿ ಹೊಡೆಯುವ ಕಾಲ ದೂರವಿಲ್ಲ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ನಮ್ಮ ದೇಶದ ಸೈನಿಕರು ದೇಶದ ಹಿರಿಮೆ ಹಾಗೂ ಗರಿಮೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಶತ್ರುಗಳು ದೇಶದೊಳಗೆ ನುಗ್ಗಿ ನಡೆಸಿದ ಹತ್ಯಾಕಾಂಡಕ್ಕೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ದೇಶದ ಸೈನಿಕರಿಗೆ ನಾವು ಏನು ಮಾಡಿದರೂ ಕಮ್ಮಿಯೇ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.