ಮೇ 20ರಂದು ಪಕ್ಷದ ಸಮಾವೇಶ । ಎಲ್ಲ ಭಾಗವಹಿಸಲು ಮನವಿ
ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಮೇ 20ರಂದು ಹೊಸಪೇಟೆಯಲ್ಲಿ ನಡೆಯಲಿದ್ದು, ಎಲ್ಲಾ ಸಚಿವರು, ಶಾಸಕರು, ಜನ ಪ್ರತಿನಿಧಿಗಳು ಫಲಾನುಭವಿಗಳನ್ನು ಕರೆ ತಂದು, ಸಮಾವೇಶ ಯಶಸ್ಸಿಗೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಮಯೂರ್ ಜಯಕುಮಾರ ಕರೆ ನೀಡಿದರು.
ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಸಭೆಯಲ್ಲಿ ಮಾತನಾಡಿ, ಸರ್ಕಾರದ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ್ದೇ ಆಗಿರುವುದರಿಂದ ಪಕ್ಷದ ಪ್ರತಿಯೊಬ್ಬರೂ ಸಮಾವೇಶದ ಯಶಸ್ಸಿಗೆ ಸಹಕರಿಸಬೇಕು ಎಂದರು.ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಸರ್ಕಾರ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರವೆಂಬ ಹೆಗ್ಗಳಿಕೆ ಇದೆ. ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಸತತ ಪ್ರಯತ್ನ ಮಾಡಿ ಘೋಷಿಸಿದಂತೆ, ಸರ್ಕಾರ ಮಾಡಿದ 30 ದಿನದೊಳಗೆ ಜಾರಿಗೊಳಿಸಿದ್ದಾರೆ. ಪ್ರಸ್ತುತ ಕೋಟ್ಯಂತರ ಜನರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳನ್ನು ಪ್ರತಿಯೊಂದು ಮನೆಗೆ ತಲುಪಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ. 6.5 ಕೋಟಿ ಜನಸಂಖ್ಯೆಯಲ್ಲಿ ಸುಮಾರು 4.5 ಕೋಟಿ ಜನ ಒಂದಲ್ಲ ಒಂದು ರೀತಿ ಫಲಾನುಭವಿಗಳಾಗಿದ್ದಾರೆ. ಇದು ಬರೀ ಕಾಂಗ್ರೆಸ್ಸಷ್ಟೇ ಅಲ್ಲ. ಇದರಲ್ಲಿ ಸುಮಾರು ಶೇ.40 ಬಿಜೆಪಿ ಜನ ಲಾಭ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯನವರ 2 ವರ್ಷದ ಅವಧಿ ಸುವರ್ಣ ಕಾಲವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು 2028ರಲ್ಲೂ ನಾವೇ ಬರಬೇಕು. ಇದಕ್ಕೆ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಸಜ್ಜಾಗಬೇಕು. ಕೇಂದ್ರದ ಬಿಜೆಪಿ ಸರ್ಕಾರ ನಮ್ಮ ರಾಷ್ಟ್ರ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಿ, ದ್ವೇಷ ರಾಜಕಾರಣ ಮಾಡುತ್ತಿದೆ ಎಂದರು.