ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕೂಡ್ಲಿಗಿಯಾವುದೇ ಅಧಿಕಾರಿಗಳು ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿ, ಇಲ್ಲಂದ್ರೆ ಬೀದರ್ ಮುಂತಾದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಜಾಗ ಖಾಲಿ ಇವೆ, ಅಲ್ಲಿಗೆ ಹೋಗುತ್ತೀರಾ ನೀವೇ ನಿರ್ಧರಿಸಿ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಣ್ಣಪುಟ್ಟ ಕೆಲಸ ಮಾಡಿಕೊಡಲು ಅಧಿಕಾರಿಗಳು ಅಸಡ್ಡೆ ತೋರುತ್ತಾರೆ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗುತ್ತಿವೆ ಎಂದು ಜನಸ್ಪಂದನಾ ಕಾರ್ಯಕ್ರಮದ ಕುರಿತು ಸೋಮವಾರ ಪ್ರಕಟವಾದ ವರದಿ ಪರಿಗಣಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ, ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾಲೂಕಿನ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಪ್ರಸನ್ನ ಹಾಗೂ ಜೆಸ್ಕಾಂ ಎಇಇ ಏಕಾಂತರೆಡ್ಡಿ ಅವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು. ಹುಡೇಂ ಗ್ರಾಪಂ ವ್ಯಾಪ್ತಿಯ ನಡುವಲ ಕರ್ನಾರಹಟ್ಟಿ, ಬಡೇಲಡುಕು ಗ್ರಾಪಂ ವ್ಯಾಪ್ತಿಯ ಸಣ್ಣಗೊಲ್ಲರಹಟ್ಟಿ ಸೇರಿ ನಾನಾ ಹಳ್ಳಿಗಳಲ್ಲಿ ಸಮಸ್ಯೆ ಇದ್ದು, ಬೋರ್‌ವೆಲ್ ಕೊರೆಸುವ ಅಗತ್ಯವಿದೆ. ಕಳೆದ ವರ್ಷದ ಬೇಸಿಗೆಯಲ್ಲೂ ಆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿತ್ತು ಎಂದು ಹೇಳಿದರು. ಆಗ, ಓಬಳಾಪುರ ಮತ್ತು ಮ್ಯಾಸರಹಟ್ಟಿಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಸ್ಥಾಪನೆಯಾಗಬೇಕಿದೆ ಎಂದು ಹುರುಳಿಹಾಳ್ ಗ್ರಾಪಂ ಪಿಡಿಒ ಕವಿತಾ ತಿಳಿಸಿದರು.
ಶಾಸಕರು ಮಾತನಾಡಿ, ಕುಡಿಯುವ ನೀರಿಗೆ ತೊಂದರೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಬೋರ್‌ವೆಲ್ ಕೊರೆಸುವ ಅವಶ್ಯವಿದ್ದರೆ ಕ್ರಮಕೈಗೊಳ್ಳಬೇಕು ಎಂದು ಎಇಇ ಪ್ರಸನ್ನ ಹಾಗೂ ಕೆಲ ಪಿಡಿಒಗಳಿಗೆ ತಿಳಿಸಿದರಲ್ಲದೆ, ಪಿಡಿಒಗಳು ಸಣ್ಣಪುಟ್ಟ ವಿಷಯಗಳನ್ನೇ ಯಾಕೆ ತಡ ಮಾಡುತ್ತೀರಿ? ಈ ರೀತಿ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಮಾಕನಡುಕು ಗ್ರಾಪಂ ಅಧಿಕಾರಿಗೆ ಸೂಚಿಸಿದರು.ಜಲಜೀವನ ಮಿಷನ್ ಯೋಜನೆಯಡಿ ಕೆಲ ಹಳ್ಳಿಗಳಲ್ಲಿ ಕಾಮಗಾರಿ ಯಾಕೆ ನಡೆದಿಲ್ಲ ಎಂದು ಶಾಸಕರು ಕೇಳಿದ್ದಕ್ಕೆ ತಾಲೂಕಿನ 65 ಹಳ್ಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಎಇಇ ಪ್ರಸನ್ನ ತಿಳಿಸಿದರು.
ತಾಲೂಕಿನಲ್ಲಿ ಇತ್ತೀಚೆಗೆ ಬಿರುಗಾಳಿ, ಮಳೆಗೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಜೆಸ್ಕಾಂನಲ್ಲಿ ಪವರ್‌ಮೆನ್‌ಗಳ ಕೊರತೆ ಇದೆ. ಗುತ್ತಿಗೆದಾರರು ಕಾಮಗಾರಿಗಳನ್ನು ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಜೆಸ್ಕಾಂ ಉಪವಿಭಾಗ ಎಇಇ ಏಕಾಂತ್ ರೆಡ್ಡಿ ತಿಳಿಸಿದರು. ಜೆಸ್ಕಾಂನ ಕೆಲ ಲೈನ್‌ಮೆನ್‌ಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಅಂಥವರನ್ನು ಬೇರೆಡೆ ಕಳುಹಿಸಿ, ನಿಯೋಜನೆ ಮೇಲೆ ಬೇರೆಡೆ ಹೋಗಿರುವ ಸಿಬ್ಬಂದಿಯನ್ನು ವಾಪಸ್ ಕರೆತರುವಂತೆ ಸೂಚಿಸಿದರು. ಕೃಷಿ, ಶಿಕ್ಷಣ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ವಾಚಿಸಿದರು. ಬಿರುಗಾಳಿ, ಮಳೆಗೆ ಬೆಳೆ ಕಳೆದುಕೊಂಡ ರೈತರ ಜಮೀನುಗಳಲ್ಲಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭ ತಾಪಂ ಇಒ ನರಸಪ್ಪ, ತಹಸೀಲ್ದಾರ್ ವಿ.ಕೆ. ನೇತ್ರಾವತಿ, ಕೊಟ್ಟೂರು ತಾಪಂ ಇಒ ಆನಂದ್, ತಾಪಂ ನಾಮನಿರ್ದೇಶಿತ ಸದಸ್ಯರಾದ ದಿನ್ನೆ ಮಲ್ಲಿಕಾರ್ಜುನ, ಭಾಗ್ಯಮ್ಮ, ಖಲಂದರ್ ನೂರ್ ಸಾಬ್, ಪಾಪಾನಾಯಕ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.