ಸರ್ವೇ ಇಲಾಖೆಯಿಂದ ಬಿ.ಟಿ.ಬಡಾವಣೆ ಜಾಗ ಸರ್ವೇ ಮಾಡಿಸಿ: ಪುರಸಭೆ ಸದಸ್ಯರ ಒತ್ತಾಯ

KannadaprabhaNewsNetwork | Published : Aug 15, 2024 1:54 AM

ಸಾರಾಂಶ

ಬಡವರ ನಿವೇಶನ ಹಂಚಿಕೆ ಉದ್ದೇಶದಿಂದ ಸ್ವಾಧೀನ ಪಡಿಸಿಕೊಂಡ 17.21 ಎಕರೆ ಭೂ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ. ಆದರೆ, ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಪುರಸಭೆ ಆಸ್ತಿ ಮೂಲ ಉದ್ದೇಶಕ್ಕೆ ಬಳಕೆಯಾಗದೆ ಅತಿಕ್ರಮಣಕ್ಕೆ ಒಳಗಾಗಿದ್ದರೂ ಪುರಸಭೆ ತನ್ನ ಆಸ್ತಿ ರಕ್ಷಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ನಿವೇಶನ ರಹಿತ ಕಡುಬಡವರಿಗೆ ಹಂಚಿಕೆ ಮಾಡುವ ಸದುದ್ದೇಶದಿಂದ ಪುರಸಭೆ 1976-77ರ ಅವಧಿಯಲ್ಲಿ ಭೂಸ್ವಾಧೀನ ಮಾಡಿಕೊಂಡಿರುವ ಟಿ.ಬಿ.ಬಡಾವಣೆಯ ಜಾಗವನ್ನು ಸರ್ವೇ ಇಲಾಖೆಯಿಂದ ಅಳತೆ ಮಾಡಿಸಿ ತಂತಿ ಬೇಲಿ ಹಾಕಿಸುವಂತೆ ಪುರಸಭಾ ಸದಸ್ಯರು ಆಗ್ರಹಿಸಿದರು.

ಪಟ್ಟಣದ ಶಹರಿ ರೋಜಗಾರ್ ಭವನದಲ್ಲಿ ಶಾಸಕ ಎಚ್.ಟಿ.ಮಂಜು ಉಪಸ್ಥಿತಿಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೆ.ಸಿ.ಮಂಜುನಾಥ್ ಟಿ.ಬಿ ಬಡಾವಣೆ ಬಗ್ಗೆ ವಿಷಯ ಪ್ರಸ್ತಾಪಿಸಿದರು.

ಬಡವರ ನಿವೇಶನ ಹಂಚಿಕೆ ಉದ್ದೇಶದಿಂದ ಸ್ವಾಧೀನ ಪಡಿಸಿಕೊಂಡ 17.21 ಎಕರೆ ಭೂ ಪ್ರದೇಶ ಅತಿಕ್ರಮಣಕ್ಕೆ ಒಳಗಾಗಿದೆ. ಆದರೆ, ಬಡವರಿಗೆ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಪುರಸಭೆ ಆಸ್ತಿ ಮೂಲ ಉದ್ದೇಶಕ್ಕೆ ಬಳಕೆಯಾಗದೆ ಅತಿಕ್ರಮಣಕ್ಕೆ ಒಳಗಾಗಿದ್ದರೂ ಪುರಸಭೆ ತನ್ನ ಆಸ್ತಿ ರಕ್ಷಣೆಗೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದರು.

ಟಿ.ಬಿ.ಬಡಾವಣೆಯ ಆಸ್ತಿ ಸರ್ವೇ ಮಾಡಿಕೊಡುವಂತೆ ತಾಲೂಕು ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದರೂ ಸರ್ವೇ ಇಲಾಖೆ ಇದುವರೆಗೂ ಸರ್ವೇ ಕಾರ್ಯ ಮಾಡಿ ಪುರಸಭೆ ಆಸ್ತಿಯ ಹದ್ದುಬಸ್ತು ಮಾಡುತ್ತಿಲ್ಲ. ಪುರಸಭೆ ಆಡಳಿತಾಧಿಕಾರಿಗಳಾಗಿರುವ ಪಾಂಡವಪುರ ಉಪ ವಿಭಾಗಧಿಕಾರಿಗಳು ಸರ್ವೇ ಕಾರ್ಯ ಮಾಡಿಸಿ ಆಸ್ತಿ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡುವಂತೆ ಸದಸ್ಯರಾದ ಡಿ.ಪ್ರೇಂಕುಮಾರ್, ಯೋಗೇಶ್ ಮತ್ತು ಕಲ್ಪನಾ ಆಗ್ರಹಿಸಿದರು.

ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ಒಕ್ಕಲಿಗರ ಸಂಘಟನೆಗಳು, ಧರ್ಮಧಜ ಸ್ಥಾಪನೆಗೆ ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳು ಈಗಾಗಲೇ ಅರ್ಜಿ ಕೊಟ್ಟಿವೆ. ಸುಪ್ರಿಂಕೋರ್ಟ್ ನಿರ್ದೇಶನದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆಗೆ ಅವಕಾಶ ಇಲ್ಲ ಎಂದು ಆಡಳಿತಾಧಿಕಾರಿಗಳಾದ ಎಸಿ ನಂದೀಶ್ ಸ್ಪಷ್ಟಪಡಿಸಿದರು.

ಈ ವೇಳೆ ಸಭೆಗೆ ಆಗಮಿಸಿದ ಕೆಲವು ಪರಿಶಿಷ್ಟ ಜಾತಿ ಸಂಘಟನೆಗಳ ಮುಖಂಡರು ಪ್ರವಾಸಿ ಮಂದಿರ ವೃತ್ತಕ್ಕೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅವಕಾಶ ಮಾಡಿಕೊಡುವಂತೆ ಆಗ್ರಹಿಸಿದರು.

ಸದಸ್ಯರಲ್ಲದವರು ಸಭೆಗೆ ಆಗಮಿಸಿದ್ದರಿಂದ ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಅನಧಿಕೃತವಾಗಿ ಸಭೆಗೆ ಬಂದವರನ್ನು ಹೊರಕಳಿಸಿದ ಆನಂತರ ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಹೇಮಾವತಿ ಬಡಾವಣೆಯ ಉಳಿದ 582 ನಿವೇಶನಗಳ ಸಕ್ರಮಾತಿಗೆ ಕ್ರಮ ವಹಿಸುವಂತೆ ಸಭಾ ನಿರ್ಣಯ ಮಾಡಿ ಸರ್ಕಾರಕ್ಕೆ ಕಳುಹಿಸುವಂತೆ ಸದಸ್ಯರು ಸಭೆಯಲ್ಲಿ ಮನವಿ ಮಾಡಿದರು. ಪಟ್ಟಣ ವ್ಯಾಪ್ತಿಯ ವಿವಿದ ರಸ್ತೆಗಳ ಅಭಿವೃದ್ಧಿ, ನಗರೋತ್ಥಾನ ಯೋಜನೆಯ ಹಣ ಬಳಕೆ, ನಮ್ಮ ಕ್ಲಿನಿಕ್ ಆರಂಭಕ್ಕೆ ಸೂಕ್ತ ಜಾಗ ನಿಡುವುದು ಸೇರಿದಂತೆ ಒಟ್ಟು 51 ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಪುರಸಭೆಯ ಅಭಿವೃದ್ಧಿ ಕಾರ್ಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸದಸ್ಯರು ಒಗ್ಗೂಡಿ ಪಕ್ಷಾತೀತವಾಗಿ ಶಾಶ್ವತ ಕಾಮಗಾರಿಗಳ ಬಗ್ಗೆ ಯೋಜಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಧಿಕಾರಿಗಳು ಮತ್ತು ಸಿಬ್ಬಂದಿ ಪೂರ್ವ ಸಿದ್ಧತೆಯಿಲ್ಲದೆ ಸಭೆಗೆ ಬರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಹೇಮಾವತಿ ಬಡಾವಣೆಯ 582 ನಿವೇಶನಗಳ ಸಕ್ರಮಾತಿಯ ಬಗ್ಗೆ ಕ್ರಮ ವಹಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ರಾಜ್ಯ ಪೌರಡಳಿತ ಸಚಿವ ರಹೀಂಖಾನ್ ಅವರು ಸಕಾರಾತ್ಮಕವಾಗಿದ್ದಾರೆಂದರು.

ಸಭೆಯಲ್ಲಿ ಮುಖ್ಯಧಿಕಾರಿ ರಾಜು ವಠಾರ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೆಶ್, ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

Share this article