ಬೆಳೆ ಸಮೀಕ್ಷೆ ಸಮರ್ಪಕವಾಗಿ ಮಾಡಿ: ಡಾ. ಬಿ.ಪಿ. ಸತೀಶ

KannadaprabhaNewsNetwork | Published : Sep 11, 2024 1:05 AM

ಸಾರಾಂಶ

ಕಳೆದ ವರ್ಷ ಬೆಳೆ ಸರ್ವೆಯಲ್ಲಿ ಇಡೀ ಉತ್ತರ ಕನ್ನಡದಲ್ಲಿ ೧೨ ಸಾವಿರ ಎಕರೆ ಅಡಕೆ ಕ್ಷೇತ್ರ ಕಡಿಮೆ ಬಂದಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಎಕರೆಗೆ ಮರಗಳ ಸಂಖ್ಯೆ ಮೇಲೆ ಅಂದಾಜಿಗೆ ಸರ್ವೆ ಮಾಡಿದ್ದು, ಕೆಲವೆಡೆ ದಾಖಲೆ ಮಾಡದೇ ಇರುವುದು ಕಾರಣವಾಗಿದೆ. ಈ ಬಾರಿ ಕಳೆದ ಅವಧಿಯ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸಭೆಯಲ್ಲಿ ಸೂಚಿಸಲಾಯಿತು.

ಶಿರಸಿ: ಬೆಳೆ ಸಮೀಕ್ಷೆ ಸರಿಯಾಗಿ ಆಗದಿದ್ದರೆ ರೈತರಿಗೆ ಬೆಳೆಸಾಲ, ಬೆಳೆವಿಮೆ ಎರಡಕ್ಕೂ ಸಮಸ್ಯೆಯಾಗುತ್ತದೆ. ಆದ್ದರಿಂದ ಬೆಳೆ ಸರ್ವೆ ಸರಿಯಾಗಿ ಆಗಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಡಾ. ಬಿ.ಪಿ. ಸತೀಶ್ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ನಗರದ ತಾಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಳೆದ ವರ್ಷ ಬೆಳೆ ಸರ್ವೆಯಲ್ಲಿ ಇಡೀ ಉತ್ತರ ಕನ್ನಡದಲ್ಲಿ ೧೨ ಸಾವಿರ ಎಕರೆ ಅಡಕೆ ಕ್ಷೇತ್ರ ಕಡಿಮೆ ಬಂದಿದೆ. ತೋಟಗಾರಿಕಾ ಕ್ಷೇತ್ರದಲ್ಲಿ ಎಕರೆಗೆ ಮರಗಳ ಸಂಖ್ಯೆ ಮೇಲೆ ಅಂದಾಜಿಗೆ ಸರ್ವೆ ಮಾಡಿದ್ದು, ಕೆಲವೆಡೆ ದಾಖಲೆ ಮಾಡದೇ ಇರುವುದು ಕಾರಣವಾಗಿದೆ. ಈ ಬಾರಿ ಕಳೆದ ಅವಧಿಯ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ಟ ಮಾತನಾಡಿ, ಕಳೆದ ೧೫ ದಿನಗಳಿಂದ ಡೆಂಘೀ ಪ್ರಕರಣಗಳು ಶೂನ್ಯವಾಗಿದೆ. ಮಕ್ಕಳಿಗೆ ಲಸಿಕಾ ಕಾರ್ಯಕ್ರಮಗಳ ಸಾಧನೆ ಗಣನೀಯವಾಗಿದೆ. ಕುಷ್ಟರೋಗ ಪ್ರಕರಣಗಳು ಕಂಡುಬಂದಿಲ್ಲ. ಕ್ಷಯರೋಗ ನಿಯಂತ್ರಣದಲ್ಲಿ ಶೇ. ೩೬ರಷ್ಟು ಸಾಧನೆ ಮಾಡಿದ್ದೇವೆ. ಅಂಧತ್ವ ನಿವಾರಣೆಯಲ್ಲಿಯೂ ಸಾಧನೆ ಮಾಡಿದ್ದೇವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ೧೭ ಶಿಕ್ಷಕರು ಬೇರೆ ತಾಲೂಕಿಗೆ ವರ್ಗಾವಣೆ ಹೊಂದಿದ್ದಾರೆ. ೧೩ ಶಿಕ್ಷಕರು ನಮ್ಮ ತಾಲೂಕಿಗೆ ವರ್ಗಾವಣೆಯಾಗಿ ಬಂದಿದ್ದಾರೆ. ತಾಲೂಕಿನಲ್ಲಿ ೧೫೬ ಶಿಕ್ಷಕರ ಹುದ್ದೆ ಖಾಲಿಯಿದೆ. ಪ್ರಾಥಮಿಕ ಶಾಲೆಗೆ ೬೬ ಹಾಗೂ ಪ್ರೌಢಶಾಲೆಯಲ್ಲಿ ೧೩ ಅತಿಥಿ ಶಿಕ್ಷಕರು ಇದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿದ್ದಾರೆ. ಶಿಕ್ಷಕರ ಕೊರತೆಯಿಲ್ಲ ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೇಶವಮೂರ್ತಿ ಇಮ್ಮಡಿ ಮಾತನಾಡಿ, ಸೆ. ೧೫ ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಮಾನವನ ಸರಪಳಿ ನಿರ್ಮಿಸುವಂತೆ ಆದೇಶವಾಗಿದೆ. ಭೈರುಂಬೆ ಗ್ರಾಪಂನಿಂದ ಪ್ರಾರಂಭ ಮಾಡಲಾಗುತ್ತದೆ. ಜಾಥಾ ವಾಹನವನ್ನು ಸ್ವಾಗತ ಮಾಡಿ, ಬಿಡ್ಕಿಬೈಲ್ ನಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

೨೫ ಅರಣ್ಯ ಗಿಡ ನಾಟಿ ಮಾಡುವ ಗುರಿ ಹೊಂದಲಾಗಿದೆ. ನಗರದ ೫ ವಸತಿಗೃಹದಲ್ಲಿ ೩೭೫ ಮಂಜೂರಾತಿ ಸೀಟ್‌ಗಳಲ್ಲಿ ೬೦೦ ವಿದ್ಯಾರ್ಥಿಗಳಿದ್ದಾರೆ. ಬಾಲಕಿಯರ ವಸತಿಗೃಹದಲ್ಲಿ ೧೪೦ ವಿದ್ಯಾರ್ಥಿಗಳಿಗೆ ಕಾಟ್, ಬೆಡ್ ಕೊರತೆಯಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಮಾತನಾಡಿ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಯಲ್ಲಾಪುರ ಭೈರುಂಬೆಯಿಂದ ನಿಲೇಕಣಿಯವರೆಗೆ ೭ ಕಿಮೀ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ೧೦ ಗಂಟೆಗೆ ನಿಲೇಕಣಿ ಶಾಲೆಯಲ್ಲಿ ಅರಣ್ಯ ಗಿಡ ನಾಟಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಸಿಡಿಪಿಒ ವೀಣಾ ಸಿರ್ಸಿಕರ ಮಾತನಾಡಿ, ತಾಲೂಕಿನಲ್ಲಿ ೩೭೮ ಅಂಗನವಾಡಿ ಕಾರ್ಯನಿರ್ವಹಿಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿದೆ ಎಂದರು.ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ೫೦೭೮ ಹೆಕ್ಟೇರ್ ಕ್ಷೇತ್ರಕ್ಕೆ ಅಡಕೆ ಕೊಳೆರೋಗ ಬಾಧಿಸಿದೆ. ತೋಟಗಾರಿಕಾ ಇಲಾಖೆಯಲ್ಲಿ ಹನಿ ನೀರಾವರಿಗೆ ಶೇ. ೯೦ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದರು.ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೊಲೀಸ್, ಆಯುಷ್, ಉಪ ನೋಂದಣಾಧಿಕಾರಿ, ಪಶು ಸಂಗೋಪನೆ ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಇಲಾಖಾವಾರು ವರದಿಯನ್ನು ಮಂಡಿಸಿದರು.

Share this article