ವೈಜ್ಞಾನಿಕವಾಗಿ ಬರ ಸಮೀಕ್ಷೆ ಮಾಡಿ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಕೂಡಲೇ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ಮಾಡಿಸಬೇಕು. ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ, ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರವನ್ನು ಒತ್ತಾಯಿಸಬೇಕು. ಬೆಳೆಹಾನಿಯಾದಲ್ಲಿ ರೈತರಿಗೆ ಬೆಳೆ ವಿಮೆಯನ್ನು ತುರ್ತು ಪಾವತಿಸಬೇಕು. ಬರಪೀಡಿತ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶವನ್ನು ವೈಜ್ಞಾನಿಕವಾಗಿ ಮರುಸಮೀಕ್ಷೆ ಮಾಡಬೇಕು ಹಾಗೂ ಬೆಳೆಹಾನಿಯಾದ ರೈತರಿಗೆ ಕೂಡಲೇ ಬೆಳೆವಿಮೆ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಳೆಯನ್ನು ನಂಬಿಕೊಂಡಿದ್ದ ರೈತರು ಬೆಳೆಹಾನಿಯಿಂದ ತೀವ್ರ ಸಂಕಷ್ಟದಲ್ಲಿದ್ದು, ಕೃಷಿ ಚಟುವಟಿಕೆಗಳಿಗೆಂದು ಮಾಡಿಕೊಂಡಿದ್ದ ಸಾಲ ತೀರಿಸಲು ಪರದಾಡುವ ಸ್ಥಿತಿ ಎದುರಾಗಿದೆ. ಇದರಿಂದ ರೈತ ಕುಟುಂಬಗಳು ಯಾವುದೇ ಆದಾಯ ಮೂಲವಿಲ್ಲದೆ ಜೀವನ ನಿರ್ವಹಣೆಗೂ ತೀವ್ರ ತೊಂದರೆಯಾಗಿದೆ. ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಬರ ಪರಿಹಾರ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ರಾಜ್ಯದ ಬಿಜೆಪಿ ಸಂಸದರು ಸಹ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿಯ ತೀವ್ರತೆಯನ್ನು ಪರಿಣಾಮಕಾರಿಯಾಗಿ ತಿಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರೈತರ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಹ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕೂಡಲೇ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಸರಿಯಾದ ವೈಜ್ಞಾನಿಕ ಸಮೀಕ್ಷೆ ಮಾಡಿಸಬೇಕು. ಸರ್ವಪಕ್ಷಗಳ ನಿಯೋಗದೊಂದಿಗೆ ದೆಹಲಿಗೆ ತೆರಳಿ, ತುರ್ತು ಪರಿಸ್ಥಿತಿಗೆ ಸ್ಪಂದಿಸುವಂತೆ ಕೇಂದ್ರವನ್ನು ಒತ್ತಾಯಿಸಬೇಕು. ಬೆಳೆಹಾನಿಯಾದಲ್ಲಿ ರೈತರಿಗೆ ಬೆಳೆ ವಿಮೆಯನ್ನು ತುರ್ತು ಪಾವತಿಸಬೇಕು. ಬರಪೀಡಿತ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಜೆ.ವಿ. ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಪಕ್ಷದ ಮುಖಂಡರಾದ ರಾಜಣ್ಣ, ಪದ್ಮಾವತಿ ಆಚಾರ್, ಜಾನಕಿರಾಮ್, ಈಶ್ವರರೆಡ್ಡಿ, ಪ್ರಹ್ಲಾದ ರೆಡ್ಡಿ, ಚಿದಾನಂದ, ಅಮೀರ್, ಖಾದ್ರಿ, ನೂರ್ ಬಾಷಾ, ಹುಲಿಯಪ್ಪ, ವೆಂಕಟೇಶ್, ಮಹಮ್ಮದ್ ಆಜಿವಲಿ, ಕುಮಾರ್, ದೇವೇಂದ್ರ ಮತ್ತಿತರರು ಭಾಗವಹಿಸಿದ್ದರು.

Share this article