ಕನ್ನಡಪ್ರಭ ವಾರ್ತೆ ಕೊಪ್ಪಳ
ಭಾರತದಲ್ಲಿ ಮಹಿಳಾ ಶಕ್ತಿಗಿದೆ ಮನ್ನಣೆ ಎಂದು ಉಪನ್ಯಾಸಕಿ ಡಾ.ವೀಣಾ ಹೇಳಿದರು. ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಿದ ಶಕ್ತಿ ಸಂಚಯ ಜಾಗೃತ ಮಹಿಳಾ ಸಮಾವೇಶವನ್ನೂದ್ದೇಶಿಸಿ ಮಾತನಾಡಿದ ಅವರು, ಪುರಾಣದಿಂದ ಹಿಡಿದು ಇಂದಿನವರೆಗೂ ಭಾರತದಲ್ಲಿ ಮಹಿಳೆಯರು ತಮ್ಮದೇ ಆದ ಸಾಧನೆ ಮಾಡುತ್ತಾ ಬಂದಿದ್ದಾರೆ. ಮನೆಯಲ್ಲೂ ಅವರು ಮಕ್ಕಳ ಸಂಸ್ಕಾರ ಮತ್ತು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊರಬೇಕಾಗಿದೆ. ಮಹಾಭಾರತ, ರಾಮಾಯಣದಲ್ಲಿ ಮಹಿಳೆಯರು ಸಾಧನೆ, ಸಮಾನತೆ ಮತ್ತು ಸಹಬಾಳ್ವೆಯಿಂದ ಬದುಕಿದ್ದಾರೆ. ಈಗಲೂ ಕೂಡಾ ಮಹಿಳೆ, ಮಕ್ಕಳು ಮತ್ತು ಕುಟುಂಬ ನಿರ್ವಹಣೆಯ ಜತೆಗೆ ಸಮಾಜಮುಖಿಯಾಗಿ ಹತ್ತಾರು ರೀತಿಯ ಕಾರ್ಯ ನಿರ್ವಹಿಸುತ್ತಾಳೆ. ಆದರೆ ಶೊಷಣೆಯಿಂದಾಗಿ ಕೆಲವೊಮ್ಮೆ ಮಹಿಳೆಯರು ಹೊರ ಪ್ರಪಂಚದಲ್ಲಿ ಗುರುತಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಜಗತ್ತಿನಲ್ಲಿ ಮಹಿಳೆಯರು ಅಗಾಧವಾದ ಸಾಧನೆ ಮಾಡುತ್ತಿದ್ದಾರೆ. ಹಿಂಜರಿಕೆಯಿಲ್ಲದೇ ಮಹಿಳೆಯರು ಮುನ್ನುಗ್ಗಿ ಕೆಲಸ ಮಾಡಬೇಕು. ಅದರಲ್ಲೂ ಭಾರತದ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಮನ್ನಣೆ ನೀಡಿ ಸಾಮಾಜಿಕ ಕಾರ್ಯದಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಾಧಕಿಯರು ನಮಗೆ ಪ್ರೇರಣೆಯಾಗಬೇಕು ಎಂದರು. ಶಿಕ್ಷಣ ಪ್ರೇಮಿ,ಶಾಲೆಗೆ ಭೂ ದಾನ ಮಾಡಿರುವ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಹುಚ್ಚಮ್ಮ ಕುಣಿಕೇರಿ ದೀಪ ಬೆಳವಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾವೇಶದ ಸ್ವಾಗತ ಸಮಿತಿ ಗೌರವ ಅಧ್ಯಕ್ಷೆ ಸರ್ವಮಂಗಳ ಗುರುನಗೌಡ ಪಾಟೀಲ್ ಮಾತನಾಡಿ, ಇತ್ತೀಚಿಗೆ ಮಹಿಳೆಯರಲ್ಲಿ ಸಂಕುಚಿತ ಭಾವನೆ ಹೆಚ್ಚುತ್ತಿದೆ. ಇದನ್ನು ಹೊಗಲಾಡಿಸಲು ಮತ್ತು ಭಾರತ ಸಂಸ್ಕೃತಿ, ಸನಾತನ ಧರ್ಮ ರಕ್ಷಣೆಯಲ್ಲಿ ಮಹಿಳೆಯರು ವಿಶೇಷ ಗಮನ ಹರಿಸಬೇಕೆಂಬ ಉದ್ದೇಶದಿಂದ ಸಂಘ ಪರಿವಾರದ ಸಂಘಟನೆಗಳ ಸಹಯೋಗದಲ್ಲಿ ದೇಶಾದ್ಯಂತ ಜಾಗೃತ ಮಹಿಳಾ ಸಮಾವೇಶ ನಡೆಸಲಾಗುತ್ತಿದೆ ಎಂದರು. ಸಾಮಾಜಿಕ ಕಾರ್ಯಕರ್ತೆ ಶೋಭಾ ಎಚ್.ಜಿ ಮಾತನಾಡಿ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ಸಾಮಾಜಿಕ, ರಾಜಕೀಯ ಸೇರಿದಂತೆ ಇನ್ನಿತ ಕ್ಷೇತ್ರದಲ್ಲೂ ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಆದರೆ ಮಹಿಳೆಯರಿಗೆ ಕುಟುಂಬ ನಿರ್ವಹಣೆ ಜವಾಬ್ದಾರಿ ಇದೆ. ಮಕ್ಕಳು ಮತ್ತು ಕುಟುಂಬ ನಿರ್ವಹಿಸುವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.ಮಕ್ಕಳಲ್ಲಿ ಭಾರತೀಯತೆ, ಸನಾತನ ಸಂಸ್ಕೃತಿ, ನೈತಿಕ ಮೌಲ್ಯದ ಜಾಗೃತಿ ಮೂಡಿಸಬೇಕು.ಕೇವಲ ನಮ್ಮ ಕುಟುಂಬದ ಜವಾಬ್ದಾರಿಗೆ ಸಿಮೀತವಾಗದೆ ರಾಷ್ಟ್ರ, ಸಮಾಜ ಸೇವೆಯ ಬಗ್ಗೆಯೂ ಜಾಗೃತಿ ಮೂಡಿಸಬೇಕು ಎಂದರು.ಸ್ವಾಗತಿ ಸಮಿತಿ ಕಾರ್ಯಾಧ್ಯಕ್ಷೆ ಲಲಿತಾ ಅಂದಣ್ಣ ಅಗಡಿ, ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಶೇಖರ ಸಿ.ವಿ, ಡಾ.ರಾಧಾ ಕುಲಕರ್ಣಿ, ಶಾಂತಾ ರಾಯ್ಕರ್, ನ್ಯಾಯವಾದಿ ಸಂಧ್ಯಾ ಮಾದಿನೂರು, ಶಕುಂತಲಾ ಮಾಲೀಪಾಟೀಲ್, ರತ್ನಕುಮಾರಿ, ಶಿಲ್ಪಾ ಪಾಟೀಲ್, ಮಹಾಲಕ್ಷ್ಮೀ ಪಾನಗಂಡಿ, ರೇಣುಕಾ ಹುರಳಿ, ಅರ್ಚನಾ ಅನಂತಮೂತಿ, ಸುಮತಿ ಭಂಡಾರಕರ್, ಗೀತಾ ಮುತ್ತಾಳ, ಸಂಗೀತಾ ಪಾಟೀಲ್, ಕವಿತಾ ಜೈನ್, ಜಿಲ್ಲಾ ಸಂಯೋಜಿಕ ಮಹಾಲಕ್ಷ್ಮೀ ಕಂದಾರಿ ಇತರರಿದ್ದರು.