ಕನ್ನಡಪ್ರಭ ವಾರ್ತೆ ಶಿವಮೊಗ್ಗಕರ್ನಾಟಕ ಏಕೀಕರಣಗೊಂಡು 68 ವರ್ಷ ಕಳೆದರು ಇಂದಿಗೂ ಗಡಿನಾಡ ಕನ್ನಡಿಗರು ಅನೇಕ ಸವಾಲು ಎದುರಿಸುತ್ತಿರುವುದು ದುರಂತ ಎಂದು ಖ್ಯಾತ ಲೇಖಕ ಡಾ. ಕಲೀಂ ಉಲ್ಲಾ ಬೇಸರ ವ್ಯಕ್ತಪಡಿಸಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.ಅಂಜತಾ ಎಲ್ಲೋರಾದಲ್ಲಿರುವ ಎಲ್ಲೋರ ಇತಿಹಾಸದ ಫಲಕದಲ್ಲಿ ಕನ್ನಡ ಪದ ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಎಂಬ ಹೆಸರಿನ ಹಳ್ಳಿಯಿದೆ. ಇಂದಿಗೂ ಕರ್ನಾಟಕ ಹೊರತಾಗಿ ಗಡಿನಾಡಿನ ಇತರೇ ಪ್ರದೇಶಗಳಲ್ಲಿ ಸುಮಾರು ಮೂರು ಕೋಟಿ ಕನ್ನಡಿಗರಿದ್ದಾರೆ. ಕರ್ನಾಟಕಕ್ಕೆ ಸೇರಿಕೊಳ್ಳಲು ಅನೇಕ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳಿಂದ ಅನೇಕ ಶೋಷಣೆ ಎದುರಿಸುತ್ತಿದ್ದು, ಗಡಿನಾಡ ಕನ್ನಡಿಗರ ಸ್ಥಿತಿಗತಿ ಬದಲಾಗಬೇಕಿದೆ ಎಂದು ಆಶಿಸಿದರು.ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಂದೆಡೆ ಸೇರಿಸುವ ದೊಡ್ಡ ಹೋರಾಟವೇ ಏಕೀಕರಣ ಹೋರಾಟ. ಕರ್ನಾಟಕ ಶಬ್ದದ ಪರಿಕಲ್ಪನೆ ತಂದು ಕೊಟ್ಟವರು ಕುವೆಂಪು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅವರು ರಚಿಸಿದ್ದ ನಾಡಗೀತೆಯ ಮೊದಲ ಸಾಲುಗಳು ಕರ್ನಾಟಕದ ಏಕೀಕರಣದ ಅವಶ್ಯಕತೆ ಸಾರಿ ಹೇಳಿವೆ ಎಂದು ತಿಳಿಸಿದರು.ಕನ್ನಡಕ್ಕೆ ಕನ್ನಡೇತರರ ಕೊಡುಗೆ ಅಪಾರ. ಕನ್ನಡ ಬಹುಮುಖಿಯಾಗಿ ಬೆಳೆಯಲು ಎಲ್ಲಾ ಧರ್ಮದವರು, ಕನ್ನಡೇತರರು ಶ್ರಮಿಸಿದ್ದಾರೆ. ಮಾತೃಭಾಷೆ ಬೇರೆಯದೇ ಆದರೂ ಕನ್ನಡದಲ್ಲಿ ಮಹತ್ತರ ಕೊಡುಗೆ ನೀಡಿದ ಸಾಹಿತಿಗಳು, ಚಲನಚಿತ್ರ ನಟರು, ಗಾಯಕರು, ಹೋರಾಟಗರಾರು ಕನ್ನಡದ ಅಸ್ಮಿತೆಗಳಾಗಿ ನಮ್ಮ ಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಸಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಸ್.ಗಂಗಾಧರ ಮಾತನಾಡಿ, ವಿವಿಧ ಸಂಸ್ಕೃತಿ ಜನರನ್ನು ಒಂದೆಡೆ ಸೇರಿಸುವಲ್ಲಿ ಭಾಷೆ ಕೊಂಡಿಯಾಗಿದೆ. ಯುವ ಸಮೂಹ ಹೆಚ್ಚುಗಾರಿಕೆ ತೋರ್ಪಡಿಕೆ ಹಂಬಲದಲ್ಲಿ ಇತರೇ ಭಾಷೆ ಪ್ರಭಾವಕ್ಕೊಳಗಾಗುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಕನ್ನಡ ಕಲಿಕೆಯ ಅನಿವಾರ್ಯತೆ ಸೃಷ್ಟಿಸಬೇಕಿದೆ. ಕನ್ನಡಕ್ಕೆ ತನ್ನದೇ ಲಿಪಿ ಶ್ರೀಮಂತಿಕೆಯಿದ್ದು, ಬರೆದಂತೆ ಉಚ್ಚರಿಸಬಹುದಾದ ಅವಕಾಶವಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಿಸುವ ಪ್ರಸ್ತುತತೆಯಿದೆ. ನಮ್ಮ ಮಕ್ಕಳು ಆಡುವ ಮತ್ತು ಕಲಿಯುವ ಭಾಷೆಗಳ ನಡುವೆ ಗೊಂದಲವಿದೆ. ಯಾವ ಭಾಷೆಯಲ್ಲಿಯು ಪರಿಪಕ್ವವಾಗದೇ ಅತಂತ್ರರಾಗುತ್ತಿದ್ದಾರೆ. ಮಾತೃಭಾಷೆಯನ್ನು ಪರಿಪಕ್ವವಾಗಿ ಕಲಿಯದ ವ್ಯಕ್ತಿ ಎಂದಿಗೂ ಇತರ ಭಾಷೆ ಸಮರ್ಥವಾಗಿ ಕಲಿಯಲಾರ ಎಂದರು.ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ. ಕಾಂತರಾಜ್ ಸೇರಿ ಮತ್ತಿತರರು ಉಪಸ್ಥಿತರಿದ್ದರು.- - - -5ಎಸ್‌ಎಂಜಿಕೆಪಿ01:
ಶಿವಮೊಗ್ಗದಲ್ಲಿ ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರ ಮಂಗಳವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಉದ್ಘಾಟಿಸಿದರು.