ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿ ಮನೆ- ಕಚೇರಿ ಮೇಲೆ ಲೋಕಾ ದಾಳಿ

KannadaprabhaNewsNetwork |  
Published : Dec 06, 2023, 01:15 AM IST
ಬಳ್ಳಾರಿಯ ನಾಗಲಚರವು ಪ್ರದೇಶದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ್ ಅವರ ಬಾಡಿಗೆ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು.  | Kannada Prabha

ಸಾರಾಂಶ

ಪರಿಶೀಲನೆ ವೇಳೆ ಚಂದ್ರಶೇಖರ್ ಅವರಿಗೆ ಸೇರಿದ 6 ನಿವೇಶನಗಳು, ₹1.47 ಲಕ್ಷ ನಗದು, 110 ಗ್ರಾಂ ಚಿನ್ನ, 330 ಗ್ರಾಂ ಬೆಳ್ಳಿ, ಒಂದು ಕಾರು ಇರುವುದು ಗೊತ್ತಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆಯ ಶ್ರೀರಾಮನಗರ ಹಾಗೂ ಕೊಪ್ಪಳದಲ್ಲಿ ಒಂದು ನಿವೇಶನ ಇರುವುದು ತಿಳಿದುಬಂದಿದೆ. ಇನ್ನು ಪರಿಶೀಲನೆ ಕಾರ್ಯ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಶಶಿಧರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ/ಹೊಸಪೇಟೆ

ಅಕ್ರಮ ಆಸ್ತಿ ಸಂಪಾದನೆ ಗುಮಾನಿ ಹಿನ್ನೆಲೆಯಲ್ಲಿ ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ್ (46) ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆಸ್ತಿ ವಿವರ ಕಲೆ ಹಾಕಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯವರಾದ ಚಂದ್ರಶೇಖರ ಅವರು ಹೊಸಪೇಟೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಬಳ್ಳಾರಿಯ ನಾಗಲಚರವು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಅಕ್ರಮ ಆಸ್ತಿ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಕಚೇರಿ, ಬಾಡಿಗೆ ಮನೆ ಹಾಗೂ ಹೊಸಪೇಟೆಯ ಸ್ವಂತ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿ, ಆಸ್ತಿ ಪರಿಶೀಲಿಸಿದರು.

ಲೋಕಾಯುಕ್ತದ ಬಳ್ಳಾರಿ ಎಸ್ಪಿ ಶಶಿಧರ್‌ ನೇತೃತ್ವದ ತಂಡ ಬೆಳ್ಳಂ ಬೆಳಗ್ಗೆ ಹೊಸಪೇಟೆಯಲ್ಲಿನ ಚಂದ್ರಶೇಖರ ಅವರ ಮನೆ ದಾಳಿ ನಡೆಸಿ ಶೋಧಿಸಿತು. ಮನೆ ಹೊರಗಿನ ಹೂಕುಂಡ, ಮನೆ ಎದುರು ನಿಲ್ಲಿಸಿದ್ದ ಕಾರು ಕೂಡ ಶೋಧ ನಡೆಸಿದರು. ಬಳಿಕ ಮತ್ತೊಂದು ತಂಡ ನಗರದಲ್ಲಿರುವ ಅವರ ಸಂಬಂಧಿಕರೊಬ್ಬರ ಮನೆಯ ಮೇಲೂ ದಾಳಿ ನಡೆಸಿ ಶೋಧ ನಡೆಸಿತು.ರಾಯಚೂರು ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ವರ, ಬಳ್ಳಾರಿ ಲೋಕಾಯುಕ್ತ ಸಿಪಿಐ ಮಹಮ್ಮದ್ ರಫೀಕ್, ಹೊಸಪೇಟೆ ಲೋಕಾಯುಕ್ತ ಸಿಪಿಐ ರಾಜೇಶ್ ಲಮಾಣಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಪರಿಶೀಲನೆ ನಡೆಸಿತು.

ಪರಿಶೀಲನೆ ವೇಳೆ ಚಂದ್ರಶೇಖರ್ ಅವರಿಗೆ ಸೇರಿದ 6 ನಿವೇಶನಗಳು, ₹1.47 ಲಕ್ಷ ನಗದು, 110 ಗ್ರಾಂ ಚಿನ್ನ, 330 ಗ್ರಾಂ ಬೆಳ್ಳಿ, ಒಂದು ಕಾರು ಇರುವುದು ಗೊತ್ತಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆಯ ಶ್ರೀರಾಮನಗರ ಹಾಗೂ ಕೊಪ್ಪಳದಲ್ಲಿ ಒಂದು ನಿವೇಶನ ಇರುವುದು ತಿಳಿದುಬಂದಿದೆ. ಇನ್ನು ಪರಿಶೀಲನೆ ಕಾರ್ಯ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಶಶಿಧರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಹಿರಿಯ ಭೂ ವಿಜ್ಞಾನಿಯಾಗಿದ್ದ ಚಂದ್ರಶೇಖರ್ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ. ಮರಳು ಗಣಿಗಾರಿಕೆಗೆ ಅನಧಿಕೃತವಾಗಿ ಪರವಾನಗಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ