ಯಲಬುರ್ಗಾ:
ನರೇಗಾದಡಿ ಕೆಲಸ ಮಾಡುವ ಕೂಲಿಕಾರರು ಸೆ. ೩೦ರೊಳಗಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ತಿಳಿಸಿದರು.ತಾಲೂಕು ಪಂಚಾಯಿತಿಯಲ್ಲಿ ಎನ್ಎಂಎಂಎಸ್ ಹಾಜರಾತಿಯ ಇ-ಕೆವೈಸಿ ಕುರಿತು ಗ್ರಾಪಂ ಸಿಬ್ಬಂದಿ, ತಾಂತ್ರಿಕ ಸಹಾಯಕರು, ಸಮುದಾಯ ತಾಂತ್ರಿಕ ಸಹಾಯಕರು ಹಾಗೂ ಕಾಯಕ ಮಿತ್ರರಿಗೆ ಶುಕ್ರವಾರ ಆಯೋಜಿಸಿದ್ದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇ-ಕೆವೈಸಿ ಮಾಡಿಸುವ ಕುರಿತು ಗ್ರಾಪಂ ಸಿಬ್ಬಂದಿ, ಟಿಎಇ, ಬಿಎಫ್‌ಟಿ, ಜಿಕೆಎಂ ಅವರಿಗೆ ತರಬೇತಿ ನೀಡಿ, ಸೆ. ೩೦ರೊಳಗಾಗಿ ಅಪ್ಡೇಟ್ ಮಾಡಬೇಕು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕೊಪ್ಪಳ, ತುಮಕೂರು, ಕೋಲಾರ, ಹಾಸನ ಹಾಗೂ ಹಾವೇರಿ ಜಿಲ್ಲೆಗಳನ್ನು ಆರ್‌ಡಿಪಿಆರ್ ಆಯುಕ್ತಾಲಯದಿಂದ ಆಯ್ಕೆ ಮಾಡಿಕೊಳ್ಳಲಾಗಿದ್ದು, ಸೆ. ೩೦ರೊಳಗಾಗಿ ಎನ್ಎಂಎಂಎಸ್ ಹಾಜರಾತಿಯ ಇ-ಕೆವೈಸಿ ಕಡ್ಡಾಯಗೊಳಿಸಿದೆ ಎಂದರು.ಪ್ರಸ್ತುತ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಪ್ರತಿಯೊಬ್ಬರ ತಲೆಯ ಎಣಿಕೆ ಮೂಲಕ ಎನ್ಎಂಎಂಎಸ್ ಹಾಜರಾತಿ ಸಂಖ್ಯೆ ಆನ್‌ಲೈನ್ ತೆಗೆದುಕೊಳ್ಳುತ್ತಿತ್ತು. ಅ. ೧ರಿಂದ ಮುಖ ಆಧಾರಿತ ಎನ್ಎಂಎಂಎಸ್‌ನಲ್ಲಿ ಹಾಜರಾತಿ ಸೆರೆಹಿಡಿಯುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇ-ಕೆವೈಸಿ ಹೊಂದಿರುವವರು ಅವರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ನಂಬರ್ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕೆಯಾದಲ್ಲಿ ಮಾತ್ರ ಅವರ ಎನ್ಎಂಎಂಎಸ್‌ನಲ್ಲಿ ಪರಿಗಣಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ಕೇವಲ ಸಮುದಾಯ ಕಾಮಗಾರಿ ಮಾತ್ರವಲ್ಲದೇ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶವಿದೆ. ಒಂದು ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ೧೦೦ ದಿನ ಕೆಲಸ ಕೊಡಲಾಗುತ್ತದೆ. ವೈಯಕ್ತಿಕ ಹಾಗೂ ಸಾಮೂದಾಯಿಕ ಕಾಮಗಾರಿಗಳಲ್ಲಿ ಕೂಲಿ ಕೆಲಸ ನೀಡುವ ಉದ್ದೇಶ ನೆರವೇರುತ್ತಿದೆ ಎಂದರು.ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಎನ್ಎಂಎಂಎಸ್ ಹಾಜರಾತಿಯ ಈ-ಕೆವೈಸಿ ಬಗ್ಗೆ ತರಬೇತಿ ನೀಡಿದರು.
ಈ ವೇಳೆ ತಾಲೂಕು ಎಂಐಎಸ್ ಸಂಯೋಜಕ ಬಸವರಾಜ ದೊಡ್ಮನಿ, ವಿಷಯ ನಿರ್ವಾಹಕ ಬಸವರಾಜ ಮಾಲಿಪಾಟೀಲ್, ಗ್ರಾಪಂ ತಾಂತ್ರಿಕ ಸಹಾಯಕರು, ಸಮುದಾಯ ತಾಂತ್ರಿಕ ಸಹಾಯಕರು, ಗ್ರಾಮ ಕಾಯಕ ಮಿತ್ರರು ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.