ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ಧರ್ಮದ ರಕ್ಷಣೆ ಮಾಡುತ್ತೇನೆ ಎನ್ನುವ ಸಂದರ್ಭದಲ್ಲಿ ನಾನು ಈ ದೇಶದಲ್ಲಿ, ರಾಜ್ಯದಲ್ಲಿ ಇದ್ದರೂ ನನಗೆ ಈ ಜಿಲ್ಲೆಗೆ ಹೋಗಲು ಪ್ರತಿಬಂಧಕ ಹಾಕುವುದನ್ನು ನೋಡಿದರೆ ನಾನು ಪಾಕಿಸ್ತಾನಕ್ಕೆ ಹೋಗಬೇಕೆಂದರೆ ಹೇಗೆ ವಿಸಾ ತೆಗೆದುಕೊಂಡು ಹೋಗಬೇಕೋ ಹಾಗೇ ಪ್ರತಿ ಜಿಲ್ಲೆಗೂ ವಿಸಾ ತೆಗೆದುಕೊಂಡು ಹೋಗಬೇಕೆ ಎಂದು ಕನ್ಹೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.ಪಟ್ಟಣದ ಬಸವ ಭವನದಲ್ಲಿ ಸಿದ್ದರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವದಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಪ್ರತಿವರ್ಷ ಕನ್ಹೇರಿ ಶ್ರೀಗಳು ಭಾಗವಹಿಸಿ ಸತ್ಸಂಗ ನಡೆಸುತ್ತಿದ್ದರು.ಆದರೆ, ನಿರ್ಬಂಧ ಹಿನ್ನಲೆಯಲ್ಲಿ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿಯ ಕನ್ಹೇರಿ ಶಾಖಾಮಠದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸತ್ಸಂಗದಲ್ಲಿ ಅವರು ಮಾತನಾಡಿದರು. ಬಸವೇಶ್ವರರ ಹೆಸರು ಹೇಳಿಕೊಂಡು ನಾವು ಬೆಳೆಯಬಾರದು. ಅವರು ಹೇಳಿದ ತತ್ವಗಳಂತೆ ಜೀವನ ಸಾಗಿಸಬೇಕಾದ ಅಗತ್ಯವಿದೆ ಎಂದರು.ಬಸವ ತತ್ವ ಜೀವನದಲ್ಲಿ ಸರಿಯಾಗಿ ಪಾಲಿಸುವಂತಾಗಬೇಕು. ಇದು ಬಸವಣ್ಣನವರ ಧರ್ಮವಲ್ಲ. ಕೈಯಲ್ಲಿ ಸಂವಿಧಾನ ಹಿಡಿದು ನಾವು ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದು ಕೇಳಿದಂತೆ ಆಗುತ್ತದೆ. ಬಸವೇಶ್ವರ ಜನಿಸಿದ ಸ್ಥಳದಲ್ಲಿ ಭವ್ಯವಾದ ನಮ್ಮ ಶ್ರೀಮಠವನ್ನು ನಿರ್ಮಾಣ ಮಾಡುವ ಮೂಲಕ ಮುಂಬರುವ ದಿನಗಳಲ್ಲಿ ಈ ಸ್ಥಳಕ್ಕೆ ನಿತ್ಯ 4-5 ಸಾವಿರ ಜನರು ಬರಬೇಕೆಂಬ ಕನಸು ಕಾಣುತ್ತಿದ್ದೇವೆ ಎಂದು ಹೇಳಿದರು.
ಬಸವಣ್ಣನವರ ಹೆಸರು ತೆಗೆದು ಹಿಂದು ಧರ್ಮದ ಮಾರಮ್ಮದೇವಿ, ಕಾಳಮ್ಮದೇವಿ, ಹನುಮಂತದೇವರ, ಗಣಪತಿ ದೇವರ ಕುರಿತು ನಿಂದನೆ ಮಾಡುತ್ತಾರೆ. ಅದೇ ಮುಸ್ಲಿಂ ಧರ್ಮದ ಕುರಿತು ಅಪಶಬ್ದ ಮಾತನಾಡಿ ನೋಡೋಣ. ನಮ್ಮಲ್ಲಿ ಯಾರೂ ಕೇಳುವವರು ಇಲ್ಲ. ಈ ರೀತಿ ಮಾಡಬೇಡಿ ಎಂದು ಕೇಳಿದರೆ ಅಭಿಯಾನ ಮಾಡಿದರು. ಅವರಿಗೆ ಇನ್ನಷ್ಟು ದೇವರು ಶಕ್ತಿ ಕೊಡುವಂತಾಗಲಿ. ರಾಜ್ಯದಲ್ಲಿ ಬಸವ ತತ್ವ ಕುರಿತು ನಾಟಕ ಮಾಡುವವರು ಇದ್ದಾರೆ ಎಂದು ದೂರಿದರು.ಬಸವಣ್ಣನವರು ಸಹಜ ಜೀವನ ಸಾಗಿಸಿದವರು. ರಾಜ್ಯದಲ್ಲಿ ಬಸವ ಭಕ್ತರು ಎಷ್ಟು ಚಂದ, ಶುದ್ಧವಾಗಿ ಇದ್ದಾರೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಬೈದವರನ್ನು ಬಂಧುಗಳೆಂಬೆ ಎಂದು ಶರಣೆ ಅಕ್ಕಮಹಾದೇವಿ ಹೇಳಿದಂತೆ ನಾವು ಸಹ ಭಗವಂತನ ಕೃಪೆ ಎಂದು ಭಾವಿಸಿದ್ದೇವೆ. ನಮ್ಮ ಗುರುಗಳಾದ ಸಿದ್ದರಾಮೇಶ್ವರ ಮಹಾರಾಜರ ಆರತಿ ನೆರವೇರಿದ ನಂತರ ಪ್ರಸಾದ ಆಗುತ್ತದೆ. ಇದಾದ ನಂತರ ಭಕ್ತರು ಮನವಿ ಕೊಡಲು ತೆರಳುತ್ತಾರೆ. ನಾನು ಮನವಿ ಕೊಡುವ ಗದ್ದಲದವನಲ್ಲ. ಆದರೆ, ಪ್ರತಿಬಂಧಕ ತೆರವಿಗೆ ಭಕ್ತರು ಮನವಿ ಕೊಡುತ್ತಾರೆ. ಬಸವನಬಾಗೇವಾಡಿ ಹಿರಿಯರ, ಭಕ್ತರ ಇಚ್ಛೆ. ನನಗೆ ಮನವಿ ಕೊಡುವ ರೂಢಿಯಿಲ್ಲ ಎಂದರು.
ಸತ್ಸಂಗದಲ್ಲಿ ಶಿರೋಳದ ಶಂಕರಾರೂಢ ಸ್ವಾಮಿಜಿ, ಜ್ಞಾನಯೋಗ್ರಾಶ್ರಮದ ಶ್ರದ್ಧಾನಂದ ಸ್ವಾಮಿಜಿ. ಆತ್ಮರಾಮಸ್ವಾಮೀಜಿ, ಯತೀಶ್ವರಾನಂದ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ, ಶಿವಶಂಕರ ಶಿವಾಚಾರ್ಯರು, ಶಿವದೇವ ಸ್ವಾಮೀಜಿ, ಮಾತೋಶ್ರೀ ಯೋಗಿಶ್ವರಿ ಮಾತಾಜಿ ಸೇರಿ ಮಹಾರಾಷ್ಟ್ರದ ಅಪಾರ ಭಕ್ತರು ಭಾಗವಹಿಸಿದ್ದರು.ಪ್ರತಿವರ್ಷ ಕನ್ಹೇರಿ ಮಠದ ಅದೃಶ್ಯಕಾಡಸಿದ್ದೇಶ್ವರ ಸ್ವಾಮೀಜಿ ಅವರು ಈ ಸತ್ಸಂಗದಲ್ಲಿ ಭಾಗವಹಿಸುತ್ತಿದ್ದರು. ಜಿಲ್ಲಾಧಿಕಾರಿಗಳು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಕ್ಕೆ ನಿಷೇಧ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶ್ರೀಗಳು ನೇರ ಪ್ರಸಾರದಲ್ಲಿ ಮಾತನಾಡಿದರು. ಭಕ್ತರು ಬೃಹತ್ ಎಲ್‌ಇಡಿ ಪರದೆ ಮೂಲಕ ಅವರ ಸಂದೇಶ ಆಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ದರಾಮೇಶ್ವರ ಮಹಾರಾಜ ಮಠ ಹಾಗೂ ಸುತ್ತಮುತ್ತಲಿನ ಆಯ್ದ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.