ಶಿಶುನಾಳ ಶರೀಫರು ದಾರ್ಶನಿಕ ಸಂತ

KannadaprabhaNewsNetwork |  
Published : Jul 11, 2024, 01:40 AM IST
10ಡಿಡಬ್ಲೂಡಿ4ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಸಂತ ಶಿಶುನಾಳ ಶರೀಫರ ಜಯಂತಿ ನಿಮಿತ್ತ ಜಾನಪದ ಸಂಶೋಧನಾ ಕೇಂದ್ರ ಮಂಗಳವಾರ ಆಯೋಜಿಸಿದ್ದ ಸಮಾರಂಭ ಉದ್ಘಾಟನೆ.  | Kannada Prabha

ಸಾರಾಂಶ

ಕರಾವಳಿ ಭಾಗದಲ್ಲಿ ಶಿಕ್ಷಿತರು ಯಕ್ಷಗಾನ ಕಲಿಯಲು ಆಸಕ್ತಿ ತೋರಿದ್ದರಿಂದ ಯಕ್ಷಗಾನ ಅಮೋಘವಾಗಿ ಬೆಳೆಯಿತು. ಆದರೆ ಉತ್ತರ ಕರ್ನಾಟಕದಲ್ಲಿ ಸಿರಿವಂತ ಜಾನಪದ, ತತ್ವಪದ ಕಲೆ ಇದ್ದರೂ ಅದನ್ನು ಬೆಳೆಸಲು ನಮಗೆ ಸಾಧ್ಯವಾಗುತ್ತಿಲ್ಲ.

ಧಾರವಾಡ:

ತತ್ವಪದಗಳು ಅಪ್ರಸ್ತುತ ಎನಿಸಿದರೆ ಬಲ್ಲವರಿಂದ ಅರ್ಥ ಮಾಡಿಕೊಳ್ಳುವುದು ಸೂಕ್ತ ಎಂದು ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ. ನಾವಲಗಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಸಂತ ಶಿಶುನಾಳ ಶರೀಫರ ಜಯಂತಿ ನಿಮಿತ್ತ ಜಾನಪದ ಸಂಶೋಧನಾ ಕೇಂದ್ರ ಮಂಗಳವಾರ ಆಯೋಜಿಸಿದ್ದ “ತತ್ವಪದ ಪ್ರಸ್ತುತತೆ” ಕುರಿತು ಉಪನ್ಯಾಸ ನೀಡಿದರು. ಶರಣರು, ದಾರ್ಶನಿಕರು ಜೀವನದ ಸಂದೇಶ, ಮೌಲ್ಯ, ಸದ್ವಿಚಾರಗಳನ್ನು ಹಾಡಿನ ಮೂಲಕ ಹೇಳಿದ್ದು ಅವೇ ತತ್ವಪದಗಳಾಗಿ ಪ್ರಸಿದ್ಧಿ ಪಡೆದವು ಎಂದರು.ವೀರದೇವಮ್ಮ ಆದ್ಯ ತತ್ವಪದಕಾರ್ತಿ ಎಂದು ನಂಬಲಾಗಿದ್ದು ನಂತರ ಬಂದ ತತ್ವಪದಕಾರರು ಬಸವಣ್ಣ ಪ್ರತಿಪಾದಿಸಿದ ತತ್ವ ಸಿದ್ಧಾಂತ ಆಧರಿಸಿಯೇ ತತ್ವಪದ ರಚಿಸಿದರು. ಮುಸಲ್ಮಾನ ಹಾಗೂ ಹಿಂದೂಗಳ ಮಧ್ಯೆ ಕೊಂಡಿಯಂತಿದ್ದ ಸಂತ ಶಿಶುನಾಳ ಶರೀಫರು ಸಾವಿರಾರು ತತ್ವಪದ ರಚಿಸಿದ್ದಾರೆ. ಅವರನ್ನು ದಾರ್ಶನಿಕ ಸಂತ ಎಂದು ಕರೆಯಬಹುದಾಗಿದ್ದು ಅವರು ಮಾಡಿದ ಕಾರ್ಯ, ಅವರ ತತ್ವಪದಗಳ ಕುರಿತು ಇನ್ನಷ್ಟು ಸಂಶೋಧನೆ ನಡೆಯಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ಕೇಂದ್ರದ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ಕರಾವಳಿ ಭಾಗದಲ್ಲಿ ಶಿಕ್ಷಿತರು ಯಕ್ಷಗಾನ ಕಲಿಯಲು ಆಸಕ್ತಿ ತೋರಿದ್ದರಿಂದ ಯಕ್ಷಗಾನ ಅಮೋಘವಾಗಿ ಬೆಳೆಯಿತು. ಆದರೆ ಉತ್ತರ ಕರ್ನಾಟಕದಲ್ಲಿ ಸಿರಿವಂತ ಜಾನಪದ, ತತ್ವಪದ ಕಲೆ ಇದ್ದರೂ ಅದನ್ನು ಬೆಳೆಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಅವರು ಆರಂಭಿಸಿದ ಜಾನಪದ ಸಂಶೋಧನಾ ಕೇಂದ್ರ ಕಳೆದ 29 ವರ್ಷಗಳಿಂದ ಜಾನಪದ ಉಳಿಸಿ ಬೆಳೆಸುವ ದಿಶೆಯಲ್ಲಿ ಮಹತ್ಕಾರ್ಯ ಮಾಡುತ್ತಿದೆ. ಕೇಂದ್ರವು ಯುವಜನರನ್ನು ಜಾನಪದದತ್ತ ಸೆಳೆಯುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಾಲೆ ಕಾಲೇಜುಗಳಿಗೆ ಹೋಗಿ ಜಾನಪದವನ್ನು ತಲುಪಿಸಬೇಕು. ಮಕ್ಕಳಿಗಾಗಿ ವಿವಿಧ ಜಾನಪದ ಸ್ಪರ್ಧೆ ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ವೇದಿಕೆ ಮೇಲೆ ಜಾನಪದ ಸಂಶೋಧನಾ ಕೇಂದ್ರದ ಅಧ್ಯಕ್ಷೆ ವಿಶ್ವೇಶ್ವರ ಹಿರೇಮಠ, ಉಪಾಧ್ಯಕ್ಷರಾದ ಗುರು ಕಲ್ಮಠ ಹಾಗೂ ಕಾರ್ಯದರ್ಶಿ ನಾಗಭೂಷಣ ಹಿರೇಮಠ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ