ಬೈರಗೊಂಡ್ಲು ಜಲಾಶಯವನ್ನು ಕೈ ಬಿಡಬೇಡಿ: ಸಂಸದ

KannadaprabhaNewsNetwork |  
Published : Nov 08, 2026, 01:15 AM IST
ಸಿಕೆಬಿ-4  ಬೆಂಗಳೂರಿನ ಕುಮಾರ ಕೃಪಾ ಸಭಾಂಗಣದಲ್ಲಿ ನಡೆದ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳೊಂದಿಗಿನ  ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು | Kannada Prabha

ಸಾರಾಂಶ

ಸರ್ಕಾರ ಹಳೆ ವಿನ್ಯಾಸದಂತೆಯೇ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬೈರಗೊಂಡ್ಲು ಜಲಾಶಯವನ್ನು ನಿರ್ಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದ್ದಾರೆ.

ಹೆಚ್ಚು ನೀರು ಸಂಗ್ರಹವಾಗಲು ದೊಡ್ಡ ಜಲಾಶಯ ನಿರ್ಮಿಸಿ । 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರಲಿ: ಡಾ.ಕೆ.ಸುಧಾಕರ್‌ ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯವನ್ನು ಹಿಂದಿನ ವಿನ್ಯಾಸದಂತೆಯೇ ನಿರ್ಮಿಸುವ ಬದಲು ಹೊಸ ಕಡೆ ನಿರ್ಮಿಸಿ ರೈತರನ್ನು ವಂಚಿಸಲಾಗುತ್ತಿದೆ. ಹಿಂದಿನ ವಿನ್ಯಾಸದಂತೆ ಜಲಾಶಯ ನಿರ್ಮಿಸಿದರೆ ಇಡೀ ವರ್ಷ ರೈತರಿಗೆ ನೀರು ನೀಡಬಹುದು. ಆದ್ದರಿಂದ ಸರ್ಕಾರ ಹಳೆ ವಿನ್ಯಾಸದಂತೆಯೇ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬೈರಗೊಂಡ್ಲು ಜಲಾಶಯವನ್ನು ನಿರ್ಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಆಗ್ರಹಿಸಿದ್ದಾರೆ. ಬೆಂಗಳೂರಿನ ಕುಮಾರ ಕೃಪಾ ಸಭಾಂಗಣದಲ್ಲಿ ಶನಿವಾರ ನಡೆದ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಭಾಗಕ್ಕೆ ಶೀಘ್ರವಾಗಿ ನೀರು ಹರಿಸುವ ಕುರಿತು ಕ್ರಮ ವಹಿಸಬೇಕಿದ್ದು, ಇದಕ್ಕಾಗಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕಿದೆ. ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಬಾಕಿ ಪಾವತಿಸಿ ಕಾಮಗಾರಿ ಸ್ಥಗಿತವಾಗದಂತೆ ಎಚ್ಚರ ವಹಿಸಬೇಕು.

ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೂಡ ಶೀಘ್ರವಾಗಿ ಮುಗಿಸಬೇಕು. ಈ ಭಾಗದ ಜನರು ಎತ್ತಿನಹೊಳೆ ನೀರಿಗಾಗಿ ಕಾಯುತ್ತಿದ್ದಾರೆ. ಈ ಬಾರಿ ಬರಗಾಲದಿಂದಾಗಿ ನೀರಿನ ಇನ್ನಷ್ಟು ಕೊರತೆ ಉಂಟಾಗಿರುವುದರಿಂದ ಈ ಶಾಶ್ವತ ನೀರಾವರಿ ಯೋಜನೆಯನ್ನು ಬೇಗ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಎತ್ತಿನಹೊಳೆ ಯೋಜನೆಯಲ್ಲಿನ ತೊಡಕುಗಳನ್ನು ಬದ್ಧತೆಯಿಂದ ನಿವಾರಣೆ ಮಾಡಿದ್ದರೆ, ಈಗಾಗಲೇ ಬಯಲುಸೀಮೆಗೆ ನೀರು ದೊರೆಯುತ್ತಿತ್ತು. ಬೈರಗೊಂಡ್ಲು ಜಲಾಶಯದಲ್ಲಿ 6 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೆ ಇದನ್ನು ಕೈ ಬಿಟ್ಟು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ 1.6, 1.8 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಮೂರು ಜಿಲ್ಲೆಗಳ ರೈತರಿಗೆ ಮೋಸವಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ. ಆದ್ದರಿಂದ ಶಾಶ್ವತವಾಗಿ ಇದಕ್ಕೆ ಪರಿಹಾರ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮೊದಲಿನಂತೆಯೇ ಬೈರಗೊಂಡ್ಲು ಜಲಾಶಯವನ್ನು ಅದೇ ಸ್ಥಳದಲ್ಲಿ ನಿರ್ಮಿಸಿ ಹೆಚ್ಚು ನೀರು ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.ಎತ್ತಿನಹೊಳೆ ಯೋಜನೆಯಲ್ಲಿ ನೀರು ಸಿಗುವುದರಲ್ಲಿ ನಮ್ಮ ಜಿಲ್ಲೆ ಕೊನೆಯ ಭಾಗದಲ್ಲಿದೆ. ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ, ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಇದು ಆರಂಭವಾಗಿತ್ತು. ಬಹಳ ಸುದೀರ್ಘ ಸಮಯವನ್ನು ಇದು ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಮುಂದಿನ ವರ್ಷವೇ ನೀರು ನೀಡಲಾಗುವುದು ಎಂದು ಹೇಳಿದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ನಡೆಸಬೇಕಿದೆ. ನಮ್ಮ ಭಾಗ ಮಳೆಯನ್ನೇ ನಂಬಿಕೊಂಡಿದ್ದು, ಸಂಸ್ಕರಿತ ನೀರನ್ನು ಬಳಸುವ ದುಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೂಲ ವಿನ್ಯಾಸವನ್ನು ಬದಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಜಲಾಶಯದಿಂದ ನೀರನ್ನು ಪಂಪ್‌ ಮಾಡಿ ಕಳುಹಿಸಬೇಕು. ಮಳೆ ಬರುವ ಸಮಯದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ ಇಡೀ ವರ್ಷ ನೀರು ನೀಡಬೇಕೆಂದರೆ ದೊಡ್ಡ ಜಲಾಶಯದ ಅಗತ್ಯವಿದೆ. ಅದಕ್ಕಾಗಿ ಬೈರಗೊಂಡ್ಲು ಜಲಾಶಯವನ್ನು ನಿರ್ಮಿಸಬೇಕಿತ್ತು. ಆದರೆ ಈ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಜಲಾಶಯದ ನಿರ್ಮಾಣವನ್ನು ಕೈ ಬಿಡಬಾರದು. ಕೇವಲ 1.6 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಿದರೆ ಮೂರು ಜಿಲ್ಲೆಗಳಿಗೆ ಅನ್ಯಾಯವಾಗುತ್ತದೆ. ಕನಿಷ್ಠ 5-6 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಿದರೆ ಮಾತ್ರ ರೈತರಿಗೆ ಇಡೀ ವರ್ಷ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಭೂ ಸ್ವಾಧೀನಾಧಿಕಾರಿಗಳ ಕೊರತೆ:

ಮೂರು ಜಿಲ್ಲೆಗಳಿಗೆ ಒಬ್ಬ ವಿಶೇಷ ಭೂ ಸ್ವಾಧೀನಾಧಿಕಾರಿಯನ್ನು ಸರ್ಕಾರ ನೇಮಿಸಿದೆ. ಹೀಗೆ ಮಾಡಿದರೆ ಅವರು ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸುವುದು ಕಷ್ಟವಾಗುತ್ತದೆ. ಇದರ ಬದಲು ಸಹಾಯಕ ಆಯುಕ್ತರಿಗೆ ಭೂ ಸ್ವಾಧೀನ ಮಾಡುವ ಅಧಿಕಾರವನ್ನು ನೀಡಬೇಕು. ಕೇವಲ ಭಾಷಣಗಳನ್ನು ಮಾಡುವುದರಿಂದ ಯೋಜನೆ ಪೂರ್ಣಗೊಳ್ಳುವುದಿಲ್ಲ ಹಾಗೂ ಕಾಮಗಾರಿ ಮುಗಿಯುವುದಿಲ್ಲ ಎಂದರು. ಎಲ್ಲರಿಗೂ ನೀರು ನೀಡಲು ಸಾಧ್ಯವೇ?:ಮಧುಗಿರಿ, ಕೊರಟಗೆರೆ, ತುಮಕೂರು, ಪಾವಗಡ, ಅರಸೀಕೆರೆ, ಕಡೂರು, ಬೇಲೂರು ಸೇರಿದಂತೆ ಹಲವಾರು ತಾಲೂಕುಗಳು ಮಾರ್ಗಮಧ್ಯೆ ಬರುತ್ತದೆ. ಕೊನೆಯಲ್ಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿಂತಾಮಣಿ, ಕೋಲಾರ ಬರುತ್ತದೆ. 24.1 ಟಿಎಂಸಿ ನೀರನ್ನು ಈ ಎಲ್ಲ ಭಾಗಗಳಿಗೆ ನೀಡಬೇಕಾಗುತ್ತದೆ. ಕಳೆದೆರಡು ವರ್ಷಗಳಲ್ಲಿ 7-8 ಟಿಎಂಸಿ ಮಳೆ ಸುರಿದಿದೆ. ಇಷ್ಟು ಕಡಿಮೆ ನೀರನ್ನು ನೀಡಲು ಹೊರಟರೆ ತುಮಕೂರಿಗೆ ಬರುವಾಗ ನೀರು ಖಾಲಿಯಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ ಈ ಬಗ್ಗೆ ವಿಚಾರ ಮಾಡಬೇಕಿದೆ. 8 ಟಿಎಂಸಿ ನೀರು ಮಳೆ ಬಂದಾಗ ಯಾವ ಪ್ರಮಾಣದಲ್ಲಿ ಯಾವ ಜಿಲ್ಲೆಗೆ ನೀರು ನೀಡಬೇಕು ಎಂದು ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮೇಂದ್ರ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಮುರಳಿ, ಚಿಕ್ಕಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶ್ವತ್ಥ ನಾರಾಯಣ್‌, ಮಾಜಿ ಶಾಸಕ ಎಂ.ರಾಜಣ್ಣ ಇದ್ದರು.

ಸಿಕೆಬಿ-4 ಬೆಂಗಳೂರಿನ ಕುಮಾರ ಕೃಪಾ ಸಭಾಂಗಣದಲ್ಲಿ ನಡೆದ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಮಾತನಾಡಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ