- ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆ 1-10ನೇ ತರಗತಿ ಮಾನ್ಯತೆ ರದ್ದು: ಕೆ.ಟಿ.ನಿಂಗಪ್ಪ
- - -- ಪೀಠೋಪಕರಣ, ಮೈದಾನ, ಶೌಚಾಲಯ, ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ
- ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ಉತ್ತರಿಸಿದ ಶಾಲಾ ಆಡಳಿತ ಮಂಡಳಿ- ಪೋಷಕರು ಬೇರೆ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುವಂತೆ ಬಿಇಒ ಸಲಹೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಾವುದೇ ಮೂಲಸೌಕರ್ಯಗಳು ಇಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ ಉಲ್ಲಂಘಿಸಿರುವ ಕಾರಣ ಈ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಯಿಂದ 10ನೇ ತರಗತಿಗೆ ನೀಡಿದ್ದ ಮಾನ್ಯತೆ ಡಿಡಿಪಿಐ ಹಿಂಪಡೆದಿದ್ದಾರೆ. ಆದ್ದರಿಂದ ಪೋಷಕರು ಈ ಶಾಲೆಗೆ ಮಕ್ಕಳನ್ನು ದಾಖಲಿಸಬಾರದು ಎಂದು ಬಿಇಒ ನಿಂಗಪ್ಪ ಸೂಚಿಸಿದರು.ಈ ಕುರಿತು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸದರಿ ಶಾಲೆಯಲ್ಲಿ ಅಗ್ನಿಸುರಕ್ಷಾ, ಗ್ರಂಥಾಲಯ, ಶೌಚಾಲಯಗಳ ಕೊರತೆ ಇದೆ. ಪೀಠೋಪಕರಣಗಳೂ ಇಲ್ಲ. ಮಕ್ಕಳ ಸುರಕ್ಷತೆಗೆ ಗ್ರಿಲ್ಸ್ ಅಳವಡಿಸಿಲ್ಲ. ಆಟದ ಮೈದಾನ ಹಾಗೂ ಕಾಂಪೌಂಡ್ ಇನ್ನಿತರೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾದ ಈ ಸೌಲಭ್ಯಗಳನ್ನು ನಿರ್ಲಕ್ಷಿಸಿರುವ ಕಾರಣ ಈ ಶಾಲೆ ಮಾನ್ಯತೆ ಹಿಂಪಡೆಯಲಾಗಿದೆ ಎಂದರು.
ದುರ್ಗಿಗುಡಿ ಬಡಾವಣೆಯ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂಲ ಸೌಕರ್ಯಗಳು ಇಲ್ಲದಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿನ್ನೆಲೆ ಶಾಲೆಗೆ ಭೇಟಿ ನೀಡಿ, ನೈಜವರದಿ ನೀಡುವಂತೆಯೂ ಡಿಡಿಪಿಐ ಕಚೇರಿಯಿಂದ ಆದೇಶವಾಗಿತ್ತು. ಅದರನ್ವಯ ನಮ್ಮ ಕಚೇರಿಯಿಂದಲೂ ಪರಿಶೀಲಿಸಿ ಡಿಡಿಪಿಐ ಕಚೇರಿಗೆ ವರದಿ ನೀಡಿದ್ದೇವೆ. ಅಲ್ಲದೇ, ಶಾಲಾ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಅವರಿಂದ ಸಮಂಜಸ ಉತ್ತರ ಬಂದಿಲ್ಲ. ಆದಕಾರಣ ಶಾಲೆಗೆ ನೀಡಿದ್ದ ಮಾನ್ಯತೆ ಹಿಂಪಡೆಯಲಾಗಿದೆ ಎಂದು ವಿವರಿಸಿದರು.ವಿದ್ಯಾರ್ಥಿಗಳು ಹಾಗೂ ಪಾಲಕರ ಹಿತದೃಷ್ಟಿಯಿಂದ ನಾವು ಶಾಲೆ ಆರಂಭಕ್ಕೂ ಮೊದಲೇ ಪೋಷಕರಲ್ಲಿ ಮನವಿ ಮಾಡುತ್ತಿದ್ದೇವೆ. ಸದರಿ ಶಾಲೆಯಲ್ಲಿದ್ದ ಮಕ್ಕಳ ದಾಖಲೆಗಳನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಿರುತ್ತೇವೆ. ಅಲ್ಲಿ ತಮ್ಮ ಮಕ್ಕಳ ದಾಖಲೆಗಳನ್ನು ಪಡೆದು, ಬೇರೆ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಬಹುದು ಎಂದು ಸಲಹೆ ನೀಡಿದರು.
1ನೇ ತರಗತಿಯಿಂದ 10ನೇ ತರಗತಿವರೆಗೆ 259 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳ ದಾಖಲೆಗಳು ಬೇಕಾದರೆ ಸ್ಥಳಿಯ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತದೆ. ಅಲ್ಲಿಗೆ ಹೋಗಿ ನಿಮ್ಮ ಮಕ್ಕಳ ದಾಖಲೆ ಪಡೆಯಬಹುದು ಎಂದು ಬಿಇಒ ಕೆ.ಟಿ.ನಿಂಗಪ್ಪ ತಿಳಿಸಿದರು.- - -
-22ಎಚ್.ಎಲ್.ಐ3: ಕೆ.ಟಿ.ನಿಂಗಪ್ಪ, ಬಿಇಒ