ಗದಗ: ರಾಜ್ಯದಲ್ಲಿ ಈಗಾಗಲೇ 416 ಕೋವಿಡ್ ನೂತನ ತಳಿಯ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿ ಮಾಡಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು. ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮಾಡಿಕೊಳ್ಳಲಾದ ವ್ಯವಸ್ಥೆಯನ್ನು ಪರಿಶೀಲಿಸಿ ಆನಂತರ ಜಿಮ್ಸ್‌ನಲ್ಲಿ ಬುಧವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ನೀಡಿರುವ ಮಾರ್ಗಸೂಚಿಗಳು ಜಿಲ್ಲೆಯಲ್ಲಿ ಯಥಾವತ್ತಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸರಿಯಾಗಿ ಪಾಲನೆಯಾಗಬೇಕು. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದರು.ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 890 ಬೆಡ್‌ಗಳಿದ್ದು, 735 ಆಕ್ಸಿಜನ್ ಬೆಡ್‍ಗಳನ್ನು ಹೊಂದಿದೆ. ಈ ಪೈಕಿ 50 ಬೆಡ್‍ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ. ಜಿಮ್ಸ್ ಆವರಣದಲ್ಲಿ 20 ಹಾಗೂ 13 ಕೆಎಲ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯದ ಘಟಕ ಹೊಂದಿದ್ದು, 4 ಆಕ್ಸಿಜನ್ ಜನರೇಟರ್ ಪ್ಲಾಂಟ್ ಸಹ ಕಾರ್ಯಪ್ರವೃತ್ತವಾಗಿವೆ. ಈಗಾಗಲೇ ಆಕ್ಸಿಜನ್ ಪೂರೈಕೆ ಕುರಿತಂತೆ ಪ್ರಾಯೋಗಿಕ ಪರೀಕ್ಷೆ ಮಾಡಲಾಗಿದೆ. ಇರುವ ಆ್ಯಂಬುಲೆನ್ಸ್‌ಗಳೆಲ್ಲ ಸುಸ್ಥಿತಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ 4 ಚಾಲಕರ ಅಗತ್ಯವಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಅಗತ್ಯವಿರುವ ಔಷಧ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಕೋವಿಡ್ ಸೋಂಕಿತರ ಪರೀಕ್ಷೆ ನಿಯಮಿತವಾಗಿ ಜರುಗಿಸಬೇಕು. ಸೋಂಕಿತರ ಪ್ರಮಾಣ ಅಧಿಕವಾದಲ್ಲಿ ಜಿಲ್ಲಾಸ್ಪತ್ರೆಗೆ ಅಗತ್ಯದ ಭದ್ರತಾ ಸಿಬ್ಬಂದಿ ಸಹ ನೀಡಲು ಕ್ರಮ ವಹಿಸಲಾಗುವುದು. ಒಟ್ಟಾರೆ ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ಕಾರ್ಯಮಾಡಬೇಕು ಎಂದರು.
ಸಭೆಯಲ್ಲಿ ಎಸ್ಪಿ ಬಿ.ಎಸ್. ನೇಮಗೌಡ, ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ಡಾ. ಬಿ.ಸಿ. ಕರಿಗೌಡ್ರ, ಡಾ. ಸೋಮಶೇಖರ ಬಿಜ್ಜಳ, ಡಾ. ಪಲ್ಲೇದ, ಡಾ. ವೆಂಕಟೇಶ ರಾಠೋಡ, ಲೆಕ್ಕಾಧಿಕಾರಿ ಜೆ.ಸಿ. ಪ್ರಶಾಂತ ಹಾಗೂ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.