ಕೊಪ್ಪಳ: ''ಪ್ರಜಾಸೇವಾ ಆಂದೋಲನ'' ಸಭೆಗಳಲ್ಲಿ ಸ್ವೀಕೃತವಾದ ಜನರ ಅಹವಾಲುಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಿ, ಇದರಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೋಬಳಿ ಮಟ್ಟದಲ್ಲಿ ಸಾರ್ವಜನಿಕರು ಸಲ್ಲಿಸಿದ ಪ್ರತಿಯೊಂದು ಅರ್ಜಿಯನ್ನೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ತ್ವರಿತವಾಗಿ ಪರಿಹರಿಸಬೇಕು. ತಾಂತ್ರಿಕ ಸಿಬ್ಬಂದಿ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವಾಗ ತಪ್ಪಾಗದಂತೆ ಜಾಗ್ರತೆ ವಹಿಸಬೇಕು. ಜನರಿಗೆ ಸ್ಪಷ್ಟ ಹಿಂಬರಹ ನೀಡಬೇಕೆಂದು ಸೂಚನೆ ನೀಡಿದರು.
ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಇತರ ಕಾಮಗಾರಿಗಳ ಬಗ್ಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ನೈಜ ಅವಶ್ಯಕತೆ ಹಾಗೂ ಅನುದಾನದ ಲಭ್ಯತೆಗೆ ಅನುಗುಣವಾಗಿ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಿ. ಇದಲ್ಲದೆ ಖಾಲಿ ಇರುವ ಮುಖ್ಯಶಿಕ್ಷಕರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಲೈನ್‌ಗಳ ಸಂಪರ್ಕ, ಕಂಬಗಳ ಸ್ಥಳಾಂತರ ಹಾಗೂ ವಿದ್ಯುತ್ ಕಡಿತದ ಕುರಿತು ಜೆಸ್ಕಾಂ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಆ್ಯಂಬುಲೆನ್ಸ್, ಚಾಲಕರ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಬಂದ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.