ಕಾರವಾರ: ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸದೊಂದಿಗೆ ತಾವು ಭವಿಷ್ಯದ ಕುರಿತು ಕಂಡಿರುವ ಕನಸಿನ ಹಾದಿಯಲ್ಲಿ ನಡೆದು ಸಫಲತೆಯ ಗುರಿ ಮುಟ್ಟುವ ಸಾಧನೆಯನ್ನು ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.
ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಕಷ್ಟಪಟ್ಟು ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಪೋಷಕರ ಕನಸನ್ನು ನನಸಾಗಿಸುವುದು ಜತೆಗೆ ತಾವು ಏನಾಗಬೇಕು ಎಂದು ನಿರ್ಧರಿಸಿರುವ ಗುರಿಗೆ ಅಡ್ಡಲಾಗಿ ಬರುವ ಎಲ್ಲ ರೀತಿಯ ಸವಾಲುಗಳು ಮತ್ತು ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗುರಿ ಸಾಧನೆಯಲ್ಲಿ ಯಶಸ್ವಿಯಾಗಬೇಕು ಎಂದರು.
ವಿದ್ಯಾರ್ಥಿನಿಯರು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು, ಮೊಬೈಲ್, ಸೋಷಿಯಲ್ ಮೀಡಿಯಾಗಳನ್ನು ಬಳಸುವಾಗ ಎಚ್ಚರದಿಂದಿರಬೇಕು, ಸೋಷಿಯಲ್ ಮೀಡಿಯಾಗಳಲ್ಲಿ ಅಪರಿಚಿತರೊಂದಿಗೆ ಸ್ನೇಹ ಮಾಡಬೇಡಿ, ನಿಮ್ಮ ಗುರಿ ಸಾಧನೆ ಮಾಡುವವರೆಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳಬೇಡಿ ಎಂದು ಕಿವಿಮಾತು ಹೇಳಿದ ಅವರು, ಯಾವುದೇ ರೀತಿಯ ಅಪಾಯದ ಸಂದರ್ಭದಲ್ಲಿ ನೆರವು ಬೇಕಿದ್ದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಹಾಯವಾಣಿ 112 ಸಂಪರ್ಕಿಸಿ ಅಗತ್ಯ ನೆರವು ಪಡೆಯುವಂತೆ ಮತ್ತು ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆಯ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಖಿ, ಸಾಂತ್ವನ ಕೇಂದ್ರಗಳ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವಂತೆ ಹೇಳಿದರು.ಸಂವಾದದಲ್ಲಿ ಮಾತನಾಡಿದ ವಿದ್ಯಾರ್ಥಿನಿಯರ ಬಹುತೇಕ ಪ್ರಶ್ನೆಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಮತ್ತು ಇಲ್ಲಿಂದ ಮನೆಗೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲವೆನ್ನುವುದರ ಬಗ್ಗೆಯೂ ಆಗಿತ್ತು. ಈ ಕುರಿತಂತೆ ಇಂದೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದು ಪರಿಹಾರ ಕ್ರಮಗಳ ಬಗ್ಗೆ ತಿಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.