ರಾಮನಗರ: ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಮಾನವನ ಕೂದಲಿನಿಂದ ಉಗುರಿನವರೆಗೂ ವ್ಯಾಪಿಸುತ್ತದೆ ಎಂದು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಕಿವಿಮಾತು ಹೇಳಿದರು.
ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಕ್ಯಾನ್ಸರ್, ವಯಸ್ಸಾದಂತೆ ಕಾಣುವುದು, ಹಲ್ಲು ಹಳದಿ ಬಣ್ಣಕ್ಕೆ ಬರುವುದು, ತುಟಿ ಕಪ್ಪಾಗುವುದು, ತಲೆಕೂದಲು ಬಿಳುಪಾಗುವುದು, ಲೈಂಗಿಕ ಶಕ್ತಿ ಕುಂಠಿತಗೊಳ್ಳುವುದು, ಬಂಜೆತನ, ಅಜೀರ್ಣ, ಆಯಾಸ, ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತದೆ ಎಂದರು.
ಮಾದಕ ವಸ್ತುಗಳ ಸೇವನೆಯಿಂದ ದೇಹದ ಎಲ್ಲಾ ಅಂಗಗಳಿಗೂ ಕ್ಯಾನ್ಸರ್ ತಗಲುವ ಸಾಧ್ಯತೆಗಳಿರುತ್ತದೆ. ಮೊದಲಿಗೆ ಮಾದಕ ವಸ್ತುಗಳ ಬಳಕೆ ಆರಂಭಗೊಂಡು ಕೊನೆಗೆ ಅದು ವ್ಯಸನದ ಹಂತಕ್ಕೆ ಹೋಗುತ್ತದೆ. ಆದ್ದರಿಂದ ಕುತೂಹಲಕ್ಕಾಗಲಿ, ಒತ್ತಾಯಕ್ಕಾಗಲಿ ಅಥವಾ ಮತ್ಯಾವುದೇ ಕಾರಣದಿಂದಲೂ ಮಾದಕ ವಸ್ತುಗಳು ಹಾಗೂ ಮದ್ಯ ಸೇವನೆಯಿಂದ ದೂರವಿದ್ದು ಯುವಜನರು ತಮ್ಮ ಬದುಕನ್ನು ಹಸನುಮಾಡಿಕೊಳ್ಳಬೇಕು ಎಂದರು.2019ರಲ್ಲಿ ದೇಶದ 186 ಜಿಲ್ಲೆಗಳಲ್ಲಿ ನಡೆದ ಸರ್ವೆ ವರದಿಯಂತೆ 2.9 ಕೋಟಿ ಆಲ್ಕೋಹಾಲ್ ಬಳಕೆದಾರರಿದ್ದರು, 25 ಲಕ್ಷ ಗಾಂಜಾ (ಕೆನಾಬಿಸ್), 28 ಲಕ್ಷ ಓಪಿರ್ಯಾಡ್ ಬಳಕೆದಾರರು ಹಾಗೂ 8.5 ಲಕ್ಷ ವಾಸನೆ ತೆಗೆದುಕೊಳ್ಳುವವರಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.28 ರಷ್ಟು ಮಂದಿ ತಂಬಾಕು ಸೇವಿಸುತ್ತಿದ್ದಾರೆ, ಆಸ್ಪತ್ರೆಯ ತುರ್ತು ವಿಭಾಗಕ್ಕೆ ಪ್ರತಿ 5 ಪ್ರಕರಣಗಳಲ್ಲಿ ಒಬ್ಬರು ನೇರವಾಗಿ ಮಾದಕ ವಸ್ತುಗಳ ವ್ಯಸನಿಗಳಾಗಿರುತ್ತಾರೆ ಎಂದರು.
ಇನ್ ಸ್ಟಾಗ್ರಾಂನಲ್ಲಿ ಭಾರತೀಯರು 380ರಿಂದ 400 ರೀಲ್ಸ್ ಗಳನ್ನು ವೀಕ್ಷಿಸುತ್ತಾರೆ. ಅಂದಾಜು 1ರಿಂದ 2 ಗಂಟೆ ಇದಕ್ಕೆ ವ್ಯಯ್ಯವಾಗುತ್ತಿದ್ದು, ಶೇ.65ರಷ್ಟು ಜನ ನಿದ್ರಾಹಿನತೆ, ಖಿನ್ನತೆಗೊಳಗಾಗುತ್ತಿದ್ದಾರೆ, ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ದೈಹಿಕ ಚಟುವಟಿಕೆಗಳಿಲ್ಲದೆ ಅನಾರೋಗ್ಯಕರ ಜೀವನ ಶೈಲಿಗೆ ತುತ್ತಾಗುತ್ತಿದ್ದಾರೆ ಎಂದರು.ರಾಮನಗರ ಜಿಲ್ಲಾ ಸೈಬರ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸರಸ್ವತಿ ಮಾತನಾಡಿ, ಇತ್ತೀಚಿಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಆಧಾರ್, ಪಾನ್, ಡಿಎಲ್ ಇತ್ಯಾದಿ ಭಾವಚಿತ್ರಗಳನ್ನು ರವಾನಿಸಿ ಇನ್ಸೂರೆನ್ಸ್ ಮಾಡಿಸುವಂತೆ ಅಥವಾ ಹಣ ಹೂಡಿಕೆ ಮಾಡುವಂತೆ ಸೈಬರ್ ವಂಚಕರು ಜನರನ್ನು ದಾರಿ ತಪ್ಪಿಸುತ್ತಾರೆ. ಉದ್ಯೋಗ, ಹಣ ದ್ವಿಗುಣ ಹೀಗೆ ವಿವಿಧ ರೀತಿಯ ಆಮೀಷವೊಡ್ಡುವ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಸೈಬರ್ ವಂಚಕರ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಬೆಂಗಳೂರು ವಿವಿ ರಾಮನಗರ ಸ್ನಾತಕೋತರ ಕೇಂದ್ರದ ನಿರ್ದೇಶಕ, ಪ್ರಾಧ್ಯಾಪಕ ಪ್ರೊ.ಬಿ.ಗಂಗಾಧರ್, ಇಂದಿನ ದಿನಮಾನಗಳಲ್ಲಿ ನೈತಿಕತೆ, ಪ್ರಾಮಾಣಿಕತೆ ಕಳೆದುಕೊಳ್ಳುವುದು ಒಂದು ವ್ಯಸನವಾಗಿದೆ. ಅದರ ಸಾಲಿಗೆ ಇದೀಗ ಮದ್ಯ ಮತ್ತು ಮೊಬೈಲ್ ಸೇರಿದೆ ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ , ಡಾ. ಪ್ರಸನ್ನಕುಮಾರ್ , ಉಪನ್ಯಾಸಕರಾದ ಎಂ.ಪಿ ಶ್ರೀರಂಗನಾಥ್, ಸ್ನಾತಕೋತ್ತರ ಕೇಂದ್ರದ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
17ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.