ಶಿವಮೊಗ್ಗದ ಶರಾವತಿ ಯೋಜನೆ ವಿರೋಧಿಸಿ ಮಾರ್ಚ್ 19ಕ್ಕೆ ಧರಣಿ

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ಶರಾವತಿ ನದಿ ಕಣಿವೆಯಲ್ಲಿ ಆರಂಭವಾಗಿರುವ ಅಂತರ್ಗತ ಜನ ವಿದ್ಯುತ್ಯೋಜನೆ ಮತ್ತು ಶರಾವತಿ ನದಿ ತಿರುವು ಯೋಜನೆಗಳನ್ನು ವಿರೋಧಿಸಿ ಮಾ.19ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ (ಶಿವಮೊಗ್ಗ, ಉತ್ತರ ಕನ್ನಡ) ಮುಖ್ಯಸ್ಥ ಅಖಿಲೇಶ್ ಚಿಪ್ಳಿ ಹೇಳಿದರು.

ಅಂತರ್ಗತ ಜನ ವಿದ್ಯುತ್‌ ಯೋಜನೆಗೂ ಅಸಹನೆ । ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶರಾವತಿ ನದಿ ಕಣಿವೆಯಲ್ಲಿ ಆರಂಭವಾಗಿರುವ ಅಂತರ್ಗತ ಜನ ವಿದ್ಯುತ್ಯೋಜನೆ ಮತ್ತು ಶರಾವತಿ ನದಿ ತಿರುವು ಯೋಜನೆಗಳನ್ನು ವಿರೋಧಿಸಿ ಮಾ.19ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟದ (ಶಿವಮೊಗ್ಗ, ಉತ್ತರ ಕನ್ನಡ) ಮುಖ್ಯಸ್ಥ ಅಖಿಲೇಶ್ ಚಿಪ್ಳಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡಿನ ಪ್ರಮುಖ ನದಿಯಾದ ಶರಾವತಿ ನದಿ 132 ಕಿ.ಮೀ.ಮಾತ್ರ ಹರಿಯುತ್ತಿದ್ದು, ಇಷ್ಟು ನದಿಗೆ ಈಗಾಗಲೇ ಏಳೆಂಟು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಲಕ್ಷಾಂತರ ಎಕರೆ ಕಾಡು ಮುಳುಗಿದೆ. ಈಗ ಗಾಯದ ಮೇಳೆ ಬರೆ ಎಂಬಂತೆ ಮತ್ತೆರಡು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಎರಡು ಯೋಜನೆಗಳು ನೀತಿ, ನಿಯಮಕ್ಕೆ ವಿರುದ್ಧವಾಗಿವೆ. ಇರುವ ಕಾಯ್ದೆಗಳನ್ನು ಗಾಳಿಗೆ ತೂರಲಾಗಿದೆ. ಮಾನವ ವಿರೋಧಿಯಾಗಿವೆ. ಜನರ ಹಣ ದುರ್ಬಳಕೆಆಯಗುತ್ತಿದೆ. ಯಾವ ಪ್ರಯೋಜನವೂ ಇಲ್ಲ ಎಂದರು.

ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆಯನ್ನು 2017 ರಲ್ಲಿಯೇ ಆರಂಭಿಸಲಾಗಿದೆ. ಈ ಯೋಜನೆ ತಲಕಳಲೆ ಬಳಿ ನಿರ್ಮಾಣವಾಗುತ್ತಿದೆ. ಗೇರುಸೊಪ್ಪ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಗುರುತ್ವಾಕರ್ಷಣೆಗೆ ವಿರುದ್ಧವಾಗಿ 2500 ಮೆ.ವ್ಯಾ. ವಿದ್ಯುತ್ ಬಳಸಿಕೊಂಡು ತಲಕಳಲೆ ಅಣೆಕಟ್ಟೆಗೆ ಎತ್ತಿ ತಂದು 2000 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಮೂರ್ಖ ಯೋಜನೆ ಇದಾಗಿದೆ. ಇದರಿಂದ ಯಾವ ಉಪಯೋಗವೂ ಇಲ್ಲ. ವಿದ್ಯುತ್‌ನ ಪೀಕ್ ಲೋಡ್ ನಿರ್ವಹಿಸಲು ಇದನ್ನು ಬಳಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ, ಇದರ ವೆಚ್ಚ ನೋಡಿದರೆ 2017 ರಲ್ಲಿಯೇ 4 ಸಾವಿರ ಕೋಟಿ ರು. ಗಳಷ್ಟಾಗಿತ್ತು. ಈಗ ಇದು 40 ಸಾವಿರ ಕೋಟಿ ರೂ. ಮುಟ್ಟಬಹುದು ಇಷ್ಟೊಂದು ದೊಡ್ಡ ಯೋಜನೆಯಿಂದ ಮಲೆನಾಡ ಜನತೆಗೆ ಏನೂ ಪ್ರಯೋಜನವಿಲ್ಲ. ರಾಜಕಾರಣಿಗಳ ಜೇಬಿಗೆ ದುಡ್ಡು ತರುತ್ತದೆ ಅಷ್ಟೇ ಎಂದರು.

ಇನ್ನೊಂದು ಪ್ರಮುಖ ಯೋಜನೆ ಶರಾವತಿ ನದಿ ತಿರುವು. ಈ ನದಿ ತಿರುವಿನಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುವುದೇ ಆಗಿದೆ. ಆದರೆ, ಈಗಾಗಲೇ ಈ ಯೋಜನೆಯನ್ನು ನಾವು ವಿರೋಧಿಸುತ್ತಾ ಬಂದಿದ್ದೇವೆ. ಬೆಂಗಳೂರಿಗೆ ಕೊಡುವಷ್ಟು ನೀರು ಒದಗಿಸಲು ಹೇಗೆ ಸಾಧ್ಯ? ಲಿಂಗನಮಕ್ಕಿಯಲ್ಲೇ ನೀರು ಇರುವುದಿಲ್ಲ. ಈಗಾಗಲೇ ಈ ಯೋಜನೆಗೆ ಖಾಸಗಿ ಕಂಪನಿಯೊಂದಕ್ಕೆ ಸರ್ವೇ ಮಾಡಲು 73 ಲಕ್ಷ ರು. ನೀಡಲಾಗಿದೆ. ಈ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಮಲೆನಾಡ ಜನತೆ ಕಷ್ಟಪಡುತ್ತಿರುವಾಗ ಬೆಂಗಳೂರಿಗೆ ನೀಡುವುದು ಯಾವ ನೈಸರ್ಗಿಕ ನ್ಯಾಯ ಎಂದು ಪ್ರಶ್ನಿಸಿದರು.

ಒಕ್ಕೂಟದ ಶ್ರೀಪತಿ ಮಾತನಾಡಿ, ಈ ಎರಡೂ ಯೋಜನೆಗಳು ಬಹುದೊಡ್ಡ ಮೊತ್ತದ ಯೋಜನೆಗಳಾಗಿವೆ. ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಅವೈಜ್ಞಾನಿಕವಾಗಿ ಪರಿಸರ ನಾಶ ಮಾಡುವ ಯೋಜನೆಗಳಾಗಿವೆ. ಇದರ ವಿರುದ್ಧ ಮಾ.19 ರಂದು ಬೆಳಗ್ಗೆ 10.30ಕ್ಕೆ ಗೋಪಿವೃತ್ತದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಈ ಸಭೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷರೂ ಆಗಿರುವ ಮೂಲೆಗದ್ದೆ ಮಠದ ಚನ್ನಬಸವ ಮಹಾಸ್ವಾಮಿ, ಬಸವ ಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಒಕ್ಕೂಟದ ಕಾಂತೇಶ್ ಕದರಮಂಡಲಗಿ, ಸೀಮಾ, ಅಶೋಕ್ ಕುಮಾರ್, ಪ್ರಕಾಶ್, ನಾಗರಾಜ್, ಬಾಲಕೃಷ್ಣ, ನವ್ಯಶ್ರೀ ನಾಗೇಶ್ ಇದ್ದರು.

Share this article