ಕಿತ್ತೂರು ಬಂದ್‌ ಇಲ್ಲ, ಮನವಿಗಷ್ಟೇ ಹೋರಾಟ ಸೀಮಿತ

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚರಿಸುವ ನಿಟ್ಟಿನಲ್ಲಿ ಮೊದಲು ಕ್ಷೇತ್ರದ ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಸಲ್ಲಿಸುವ ತಿರ್ಮಾನ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಇಲ್ಲಿಯ ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಜೆಟ್‌ನಲ್ಲಿ ಅನುದಾನ ನೀಡದ ಕಾರಣಕ್ಕಾಗಿ ಮಾ.18 ರಂದು ಕರೆ ನೀಡಲಾಗಿದ್ದ ಕಿತ್ತೂರು ಪಟ್ಟಣ ಬಂದ್‌ ಕರೆ ಹಿಂಪಡೆಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚರಿಸುವ ನಿಟ್ಟಿನಲ್ಲಿ ಮೊದಲು ಕ್ಷೇತ್ರದ ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಸಲ್ಲಿಸುವ ತಿರ್ಮಾನ ಕೈಗೊಳ್ಳಲಾಗಿದೆ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾಭವನದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸಮ್ಮುಖದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಯಾವ ರಾಜಕೀಯ ಪಕ್ಷಕ್ಕೂ ನಾನು ಅಂಟಿಕೊಂಡಿಲ್ಲ ಹಾಗೂ ಪಕ್ಷಗಳ ವಿರುದ್ಧವೂ ಈ ಹೋರಾಟ ಹಮ್ಮಿಕೊಂಡಿಲ್ಲ. ರಾಣಿ ಚನ್ನಮ್ಮಾಜಿಗೆ ಆಗಿರುವ ಅನ್ಯಾಯದ ಕುರಿತು ಈಗ ಧ್ವನಿ ಎತ್ತಿದ್ದೇವೆ. ಈ ಧ್ವನಿಗೆ ಯಾವುದೇ ಪಕ್ಷ, ಜಾತಿ, ಭೇದಗಳಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ರಾಣಿ ಚನ್ನಮ್ಮಳ ಕಿತ್ತೂರು ಹಾಗೂ ಕೋಟೆಯೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನಿರ್ಲಕ್ಷ್ಯ ವಿರೋಧಿಸದಿದ್ದಲ್ಲಿ ಕಿತ್ತೂರು ಅಭಿವೃದ್ಧಿಯಿಂದ ವಂಚಿತವಾಗಿಯೇ ಉಳಿಯುತ್ತದೆ ಎಂದ ಅವರು, ಜನಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿರಲ್ಲಿ ಅಧಿಕಾರದಲ್ಲಿದ್ದರೂ ಸರಿ ಇಲ್ಲದಿದ್ದರೂ ಸರಿ ತಮ್ಮ ನಾಯಕರಿಗೆ ಕಿತ್ತೂರಿನ ಅಭಿವೃದ್ಧಿ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಣ್ತೆರೆಸಲು ಶಾಸಕ ಪಾಟೀಲರಿಗೆ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಸದರಿಗೆ ಮಾ.೧೮ ರಂದು ಸೋಮವಾರ ಪೇಟೆಯ ಚನ್ನಮ್ಮಾಜಿ ಪುತ್ಥಳಿಯಿಂದ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವೃತ್ತಕ್ಕೆ ತೆರಳಿ ಅಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮುಸ್ಲಿಮ ಧರ್ಮಗುರು ಹಜರತ್ ತನ್ವೀರಸಾಬ್, ಪಪಂ ಅಧ್ಯಕ್ಷ ಜೈ ಸಿದ್ದರಾಮ ಮರಿಹಾಳ, ಬಸವರಾಜ ಪರವಣ್ಣವರ, ಜಗದೀಶ ವಸ್ತ್ರ ಹಾಗೂ ಪಟ್ಟಣದ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಒಂದೇ ವೇದಿಕೆಯಲ್ಲಿ ಬಾಬಾಸಾಹೇಬ, ದೊಡ್ಡಗೌಡರ

ಕಲ್ಮಠದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಹಾಗೂ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಒಂದೇ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಈ ಸಭೆಯಲ್ಲಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರೆ, ಇತ್ತ ಸಂಸದರ ಸಹಾಯದಿಂದ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಭರವಸೆ ನೀಡಿದರು.

ಬೈಲಹೊಂಗಲ ಬಂದ್‌ ನಿಶ್ಚಿತ

ಬೈಲಹೊಂಗಲ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೇರಿದ್ದ ಪೂರ್ವಭಾವಿ ಸಭೆಯಲ್ಲಿ ಮಾ.18ರಂದು ಬೈಲಹೊಂಗಲ ಬಂದ್‌ ನಿಶ್ಚಿತವಾಗಿ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ಪಿಯುಸಿ ಪರಿಕ್ಷೆಗಳು ಇರುವುದರಿಂದ ಶಾಲಾ-ಕಾಲೇಜುಗಳು ಹಾಗೂ ಬಸ್ ಮತ್ತು ವಾಹನ ಸಂಚಾರ ಎಂದಿನಂತೆ ಇರುತ್ತದೆ. ಉಳಿದಂತೆ, ವ್ಯಾಪಾರ ವಹಿವಾಟು, ಬ್ಯಾಂಕ್, ಸೂಸೈಟಿ ಬೀದಿ ವ್ಯಾಪಾರಿಗಳು, ಸರ್ಕಾರಿ ಕಚೇರಿಗಳು ಬಂದ್‌ ಇರಲಿವೆ. ಬಂದ್‌ ಬೆಂಬಲಿಸಿ ವರ್ತಕರ ಸಂಘ, ಕಿರಾಣಿ ವ್ಯಾಪಾರಸ್ಥರು, ಹೋಟೆಲ‌, ರೆಸ್ಟೋರೆಂಟ್ ಮಾಲೀಕರ ಸಂಘ, ಹಾರ್ಡವೆರ್, ಬೇಕರಿ ವ್ಯಾಪಾರಗಾರರು, ಬಂಗಾರು ಬೆಳ್ಳಿ ವ್ಯಾಪರಸ್ಥರ ಸಂಘ ಕನ್ನಡಪರ ಹೊರಾಟಗಾರರು ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ಮಾಜಿ ಶಾಸಕ‌ ಡಾ.ವಿ.ಐ.ಪಾಟೀಲ, ಶಂಕರ್ ‌ಮಾಡಲಗಿ ಇತರರಿದ್ದರು.

Share this article