ಟಿಎಸ್‌ಎಸ್ ಸದಸ್ಯರಿಗೆ ತೊಂದರೆ ನೀಡದಿರಿ

KannadaprabhaNewsNetwork |  
Published : May 28, 2024, 01:12 AM IST
ಸಂಸ್ಥೆಯ ವ್ಯವಹಾರಕ್ಕೆ ಬರುವ ರೈತರಿಗೆ ಅಡ್ಡಿ ಆತಂಕ ಆಗದಂತೆ ನೋಡಿಕೊಳ್ಳುವಂತೆ ಟಿಎಸ್ ಎಸ್ ಆಡಳಿತಾಧಿಕಾರಿ ಎಂ. ಎಚ್. ನಾಯ್ಕ ಅವರಿಗೆ ಶಿರಸಿಯಲ್ಲಿ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಸಂಸ್ಥೆಯ ಆವರಣದಲ್ಲಿ ಯಾವುದೇ ಅಡ್ಡಿ, ಆತಂಕ ಇಲ್ಲದಂತಹ ವಾತಾವರಣ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.

ಶಿರಸಿ: ಅಡಕೆ ಬೆಳೆಗಾರರ ಪ್ರತಿಷ್ಠಿತ ಸಂಸ್ಥೆಯಾದ ಟಿಎಸ್‌ಎಸ್‌ಗೆ ಆಡಳಿತಾಧಿಕಾರಿ ನೇಮಕವಾದ ಹಿನ್ನೆಲೆ ಸೊಸೈಟಿಯು ಕೇಂದ್ರಬಿಂದುವಾಗಿದ್ದು, ದಿನದಿಂದ ದಿನಕ್ಕೆ ಹಲವು ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ಆಡಳಿತ ಮಂಡಳಿ ವಜಾಗೊಂಡಿರುವ ಕಾರಣ ಸಂಸ್ಥೆಯ ಆವರಣದಲ್ಲಿ ಧರಣಿ, ಪ್ರತಿಭಟನೆಗಳಿಗೆ ಕರೆ ನೀಡಲಾಗಿದೆ. ಸಂಸ್ಥೆಯಲ್ಲಿ ವ್ಯವಹರಿಸುವ ಸದಸ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕೆಲ ಸದಸ್ಯರು ಸೋಮವಾರ ಸಂಸ್ಥೆಯ ಆಡಳಿತಾಧಿಕಾರಿ ಎಂ.ಎಚ್. ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ಆಡಳಿತ ಮಂಡಳಿ ರದ್ದುಗೊಳಿಸಿದ ಬಳಿಕ ವಜಾಗೊಂಡ ನಿರ್ದೇಶಕರು ಸಂಸ್ಥೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸಂಸ್ಥೆಯ ಆವರಣದಲ್ಲಿ ಅಭದ್ರತೆ ಮೂಡಿದೆಯಲ್ಲದೇ ಸೌಹಾರ್ದಯುತ ವಾತಾವರಣ ಮಾಯವಾಗಿದೆ. ಸಂಸ್ಥೆಗೆ ಆಗಮಿಸಬೇಕಿದ್ದ ರೈತರು ಭಯದಿಂದಾಗಿ ತಮ್ಮ ಭೇಟಿಯನ್ನು ಮುಂದೂಡುತ್ತಿದ್ದಾರೆ. ಸದಸ್ಯರು ಮಾತ್ರವಲ್ಲದೇ ಸೂಪರ್ ಮಾರ್ಕೆಟ್‌ಗೆ ಬರುವ ಸಾವಿರಾರು ಗ್ರಾಹಕರೂ ಆತಂಕದಲ್ಲಿದ್ದಾರೆ. ಸಂಸ್ಥೆಯ ಆವರಣದಲ್ಲಿ ಯಾವುದೇ ಅಡ್ಡಿ, ಆತಂಕ ಇಲ್ಲದಂತಹ ವಾತಾವರಣ ಕಲ್ಪಿಸಬೇಕು ಎಂದರು.

ಸಂಸ್ಥೆಯ ಮಾಜಿ ನಿರ್ದೇಶಕ ಗಣಪತಿ ರಾಯ್ಸದ್ ಮಾತನಾಡಿ, ನೂರು ವರ್ಷ ಇತಿಹಾಸ ಹೊಂದಿರುವ ಟಿಎಸ್‌ಎಸ್ ಸಂಸ್ಥೆಯಲ್ಲಿ ಹಿಂದಿನ ಆಡಳಿತ ಮಂಡಳಿಯವರಾಗಿ ನಾವು ಕಡವೆ ಹೆಗಡೆಯವರು, ಶಾಂತಾರಾಮ ಹೆಗಡೆ ಅವರ ಆಶಯದಂತೆ ಕಾರ್ಯ ನಿರ್ವಹಿಸಿದ್ದೆವು. ಆದರೆ, ಚುನಾವಣೆ ಪ್ರಕ್ರಿಯೆ ಸರಿಯಾಗಿಲ್ಲ ಎಂದು ದೂರು ಸಲ್ಲಿಸಿದ್ದೆವು. ಟಿಎಸ್ಎಸ್‌ನ ಮಾಜಿ ವ್ಯವಸ್ಥಾಪಕರು, ಕೆಲ ಗಣ್ಯರ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಗೂ ಈ ದೂರಿಗೂ ಸಂಬಂಧ ಕಲ್ಪಿಸಬಾರದು. ಸಂಸ್ಥೆಯ ಈ ಎಲ್ಲ ಘಟನೆ ಹಿಂದೆ ರಾಜಕೀಯ ನಾಯಕರ ಕೈವಾಡ ಇದೆ ಎಂಬುದು ಸರಿಯಲ್ಲ ಎಂದರು.

ಪ್ರಮುಖರಾದ ಪ್ರವೀಣ ಗೌಡ ತೆಪ್ಪಾರ, ಭಾಸ್ಕರ ಹೆಗಡೆ, ಜ್ಯೋತಿ ಗೌಡ, ಕುಮಾರ ಜೋಶಿ ಸೋಂದಾ, ವಿನಾಯಕ ಭಟ್, ಎಸ್.ಕೆ. ಭಾಗ್ವತ್, ರತ್ನಾಕರ ಬಾಡಲಕೊಪ್ಪ, ಎಂ.ಜಿ. ಭಟ್ಟ ಬೆಳಖಂಡ ಮತ್ತಿತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ