ವೈಜ್ಞಾನಿಕ ಚಿಂತನೆಗಳು ಪ್ರಕತಿಗೆ ಪೂರಕವಾಗಿ ಬೆಳೆಯುವ ಬದಲು ಮಾರಕವಾಗಿ ಬೆಳೆಯುತ್ತಿರುವ ಕಾರಣ ಪರಿಸರ ಮಾಲಿನ್ಯಕ್ಕೆ ನಾವುಗಳೆಲ್ಲರೂ ಕಾರಣರಾಗುತ್ತೇವೆ ಎಂದು ಪ್ರಾಂಶುಪಾಲರಾದ ಪ್ರೊ. ಗೀತಾ ಎ. ತಿಳಿಸಿದರು. ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವಂತಹ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಅನ್ಯಗ್ರಹಗಳ ಮೇಲೆ ಕಾಲಿಟ್ಟಿರುವ ಮನುಷ್ಯ ಭೂಮಿಯ ಮೇಲಿರುವ ನೀರು, ಗಾಳಿಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಆಗದೆ ವಿಫಲನಾಗಿದ್ದಾನೆ ಇದು ದುರಂತವೇ ಸರಿ. ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ವೈಜ್ಞಾನಿಕ ಚಿಂತನೆಗಳು ಪ್ರಕತಿಗೆ ಪೂರಕವಾಗಿ ಬೆಳೆಯುವ ಬದಲು ಮಾರಕವಾಗಿ ಬೆಳೆಯುತ್ತಿರುವ ಕಾರಣ ಪರಿಸರ ಮಾಲಿನ್ಯಕ್ಕೆ ನಾವುಗಳೆಲ್ಲರೂ ಕಾರಣರಾಗುತ್ತೇವೆ ಎಂದು ಪ್ರಾಂಶುಪಾಲರಾದ ಪ್ರೊ. ಗೀತಾ ಎ. ತಿಳಿಸಿದರು. ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ ಅರಸೀಕೆರೆ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಟ್ಟು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸನಾತನ ಸಂಸ್ಕೃತಿಯಲ್ಲಿ ಭೂಮಿಗೆ ಮಾತೆಯ ಮಹತ್ವ ಸ್ಥಾನವನ್ನು ನೀಡಲಾಗಿದೆ. ಪ್ರಕತಿಯಲ್ಲಿನ ಮರಗಿಡಗಳನ್ನು ಕಣ್ಣಿಗೆ ಕಾಣುವ ದೇವರೆಂದು ಪೂಜಿಸಿ, ಆರಾಧಿಸುವ ಮನೋಭಾವನೆ ಎಲ್ಲರಲ್ಲೂ ಬೆಳೆಸಲಾಗಿತ್ತು. ಆದ್ದರಿಂದ ಎಲ್ಲೆಡೆ ಮರಗಿಡಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗಿತ್ತು, ಆದರೆ ಇತ್ತೀಚಿನ ವೈಜ್ಞಾನಿಕ ಚಿಂತನೆ ಫಲವಾಗಿ ಮನುಷ್ಯ ತೀವ್ರ ಸ್ವಾರ್ಥಿಯಾಗಿ ಜೀವಸಂಕುಲದ ಉಸಿರಾಗಿರುವ ನೈಸರ್ಗಿಕ ಅರಣ್ಯ ಸಂಪತ್ತನ್ನು ಸಂಪೂರ್ಣ ನಾಶ ಮಾಡುತ್ತಿರುವ ಕಾರಣ ಪ್ರಕತಿಯಲ್ಲಿ ಅಸಮತೋಲನ ಉಂಟಾಗಿ ಕಾಲ, ಕಾಲಕ್ಕೆ ಮಳೆ, ಬೆಳೆಯಾಗದ ಕುಡಿಯುವ ಶುದ್ಧ ನೀರಿಗಾಗಿ ಪರಿಶುದ್ಧ ಗಾಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದರು. ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವಂತಹ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಅನ್ಯಗ್ರಹಗಳ ಮೇಲೆ ಕಾಲಿಟ್ಟಿರುವ ಮನುಷ್ಯ ಭೂಮಿಯ ಮೇಲಿರುವ ನೀರು, ಗಾಳಿಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಆಗದೆ ವಿಫಲನಾಗಿದ್ದಾನೆ ಇದು ದುರಂತವೇ ಸರಿ. ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಶೋಧಕರಾದ ಹನುಮಾ ನಾಯಕ್ ಹಿಂದೆ ಪ್ರತಿ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಮರ, ಗಿಡ, ಗೋಮಾಳ, ತೋಪುಗಳು ಕೆರೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಣೆ ಮಾಡುವುದು ಆ ಮೂಲಕ ಸಕಲ ಜೀವರಾಶಿಗಳ ಉಳಿವಿಗೆ ಪೋಷಣೆಗೆ ಪೂರಕವಾದ ವಾತಾವರಣ ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಅಂತಹ ಕೆರೆ ಕಟ್ಟೆ ತೋಪುಗಳನ್ನು ಸರ್ಕಾರಗಳು ಇಂದು ಕ್ರಮ ವಹಿಸಿ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ನಟರಾಜ್ ಕೆ. ಸಿ., ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯ ಯುವರಾಜ್, ಪರಿಸರವಾದಿ ಲಿಂಗರಾಜ್ ಎಲ್‌ಐಸಿ ಮಾತನಾಡಿದರು. ಸಮಾಜಸೇವಕ ಕುಮಾರಣ್ಣ ಪರಿಸರ ಗೀತೆಯನ್ನು ಹಾಡಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾದ ಡಾ. ರಾಜೇಶ್ ಖನ್ನಾ ಡಾ. ಹರೀಶ್ ಕುಮಾರ್ ರಾಘವೇಂದ್ರ ಭಜಂತ್ರಿ ಮೋಹನ್ ರಾಜ್ ಹಾಗೂ ಕೇಂದ್ರ ಸಾಹಿತ್ಯ ವೇದಿಕೆ ಅಧ್ಯಕ್ಷ ಮಂಜುನಾಥ್, ಸೈಪುಲ್ಲ ಹಳೆ ವಿದ್ಯಾರ್ಥಿಗಳ ಸಂಘದ ಉಪೇಂದ್ರ ಕಲಾವಿದರಾದ ಮಂಜುನಾಥ್ ಹರೀಶ್ ಕುಮಾರ್ ಎಲ್ ಸಂತೋಷ್, ಉಮಾಶಂಕರ ಸೇರಿದಂತೆ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅರಳಿ, ಹಿಪ್ಪೆ, ಬೆಟ್ಟದನೆಲ್ಲಿ, ನೇರಳೆ, ಹಲಸು ಮುಂತಾದ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.