ಸುಂಟಿಕೊಪ್ಪ : ಜನರು ಕ್ಯಾನ್ಸರ್ ಎಂದರೆ ಭಯಪಡದೆ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ರೋಗ ಮುಕ್ತ ಹಾಗೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕೆಂದು ಡಾ. ಅನುಷಾ ಕರೆ ನೀಡಿದರು.ಅವರು ಕೊಡಗು ಮೆಡ್ ಸಿಟಿ (ಕೆಎಂಸಿ) ಆಸ್ಪತ್ರೆಯ ೨ನೇ ವಾರ್ಷಿಕೋತ್ಸವದ ಅಂಗವಾಗಿ, ನಮ್ಮ ಸುಂಟಿಕೊಪ್ಪ ಬಳಗ ಕೆಎಂಸಿ ಆಸ್ಪತ್ರೆ ಹಾಗೂ ಮೈಸೂರಿನ ಭಾರತ್ ಹಾಸ್ಪಿಟಲ್ ಅಂಡ್ ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿ ಜಂಟಿ ಆಶ್ರಯದಲ್ಲಿ ನಡೆದ "ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ "ದಲ್ಲಿ ಮಾತನಾಡಿದರು.
ಜೀವನಶೈಲಿ ಮತ್ತು ಆಹಾರ ಕ್ರಮ: ಹೊರಗಿನ ರಸ್ತೆಬದಿಯ ಆಹಾರಗಳು, ಕೆಮಿಕಲ್ ಹಾಗೂ ಬಣ್ಣ ಬೆರೆಸಿದ ಕೃತಕ ಆಹಾರಗಳು ಮತ್ತು ಕೂಲ್ ಡ್ರಿಂಕ್ಸ್ಗಳನ್ನು ಸೇವಿಸುವುದನ್ನು ತಡೆದು, ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರ, ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಪ್ರತಿದಿನ ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯ ಕಾಯ್ದುಕೊಳ್ಳಬಹುದು.
ಪ್ರಮುಖವಾಗಿ ಕಂಡು ಬರುವ ಲಕ್ಷಣಗಳು ದೀರ್ಘಕಾಲದ ಕೆಮ್ಮು ಅಥವಾ ಧ್ವನಿಯಲ್ಲಿ ಬದಲಾವಣೆ, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ದೇಹದಲ್ಲಿ ಗುಣವಾಗದ ಗಾಯಗಳು, ಸ್ತನ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು, ನುಂಗಲು ತೊಂದರೆ, ಅಜೀರ್ಣತೆ ಮತ್ತು ದೀರ್ಘಕಾಲದ ಆಯಾಸ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು.ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಹೆಚ್ಪಿವಿ ಲಸಿಕೆ ಲಭ್ಯವಿದ್ದು, ಮುನ್ನೆಚ್ಚರಿಕೆಯಾಗಿ ಲಸಿಕೆ ಪಡೆದುಕೊಳ್ಳಬಹುದು ಎಂದು ಡಾ. ಅನುಷಾ ಸಲಹೆ ನೀಡಿದರು.