ಕರ್ನಾಟಕ ಪರ ನಿರ್ಣಯ ಅಂಗೀಕರಿಸದ ಪಾಲಿಕೆಗೆ ಅನುದಾನ ಕೊಡ್ಬೇಡಿ!

KannadaprabhaNewsNetwork |  
Published : Jul 15, 2026, 03:00 AM IST
ಬೆಳಗಾವಿ ಪಾಲಿಕೆಗೆ ವಿಶೇಷ ಅನುದಾನ ನೀಡದಂತೆ ಆಗ್ರಹಿಸಿ ಗಡಿನಾಡು ಕನ್ನಡ ಸೇನೆ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು | Kannada Prabha

ಸಾರಾಂಶ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಗೆ ಸರ್ಕಾರ ₹250 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಗಡಿನಾಡು ಕನ್ನಡ ಸೇನೆ ಮಂಗಳವಾರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಪಾಲಿಕೆಗೆ ಸರ್ಕಾರ ₹250 ಕೋಟಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಗಡಿನಾಡು ಕನ್ನಡ ಸೇನೆ ಮಂಗಳವಾರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿತು.

ನಗರದ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಸಂಘಟನೆಯ ಕಾರ್ಯಕರ್ತರು ಮೇಯರ್ ಹಾಗೂ ಉಪಮೇಯರ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಬಳಿಕ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಬಿರಾದಾರ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.ಗಡಿನಾಡು ಕನ್ನಡ ಸೇನೆ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಐತಿಹಾಸಿಕ ಹಾಗೂ ಕಾನೂನುಬದ್ಧ ಸತ್ಯವಾಗಿದೆ. ಗಡಿ ವಿವಾದದ ವಿಚಾರದಲ್ಲಿ ಮಹಾಜನ ಆಯೋಗದ ವರದಿಯೇ ಅಂತಿಮ ಎಂಬ ರಾಜ್ಯ ಸರ್ಕಾರದ ನಿಲುವಿಗೆ ಪಾಲಿಕೆಯೂ ಬದ್ಧವಾಗಿರಬೇಕು. ಆದರೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಗೊತ್ತುವಳಿ ಅಂಗೀಕರಿಸಲು ನಿರಂತರವಾಗಿ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.ನಗರಾಭಿವೃದ್ಧಿ, ಮೂಲಸೌಕರ್ಯ ಹಾಗೂ ಸೌಂದರ್ಯೀಕರಣಕ್ಕಾಗಿ ಸರ್ಕಾರದಿಂದ ₹250 ಕೋಟಿ ವಿಶೇಷ ಅನುದಾನ ಕೋರುವ ಮೊದಲು ಪಾಲಿಕೆಯ ಆಡಳಿತ ಕರ್ನಾಟಕದ ಪರ ತನ್ನ ಬದ್ಧತೆಯನ್ನು ಸ್ಪಷ್ಟಪಡಿಸಬೇಕು. ಮಹಾಜನ ವರದಿಯೇ ಅಂತಿಮ ಎಂಬ ಗೊತ್ತುವಳಿಯನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವವರೆಗೆ ಯಾವುದೇ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬಾರದು ಎಂದು ಅವರು ಆಗ್ರಹಿಸಿದರು.ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರನ್ನು ಕರೆದುಕೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನುದಾನ ಕೋರುವ ಸೌಜನ್ಯವನ್ನೂ ಮೇಯರ್ ಹಾಗೂ ಉಪಮೇಯರ್ ತೋರಿಲ್ಲ. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಮಹಾರಾಷ್ಟ್ರ ಸರ್ಕಾರದಿಂದಲೇ ಅನುದಾನ ಕೇಳಲಿ ಎಂದು ಅವರು ವ್ಯಂಗ್ಯವಾಡಿದರು.ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪ್ರಾದೇಶಿಕ ಆಯುಕ್ತರ ಮೂಲಕ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂತೋಷ ಮಾಸೇನಟ್ಟಿ, ಸಂತೋಷ ತಳ್ಳಿಮನಿ, ಎಸ್.ಎಸ್. ಮೂಕನವರ, ಮಂಜುನಾಥ ಶಾನುರ ಮುಚ್ಚಂಡಿ, ಜ್ಯೋತಿಕುಮಾರ ಹುಲೆನ್ನವರ, ರಾಹುಲ್ ಭೋಸ್ಲೆ, ಆನಂದ ಬಿಲಾವರ, ಶಿವಾಜಿ ಗುರವ, ಸಾಗರ ಪೂಜೇರಿ, ಅನು ಎಸ್.ಆರ್., ವಂದನಾ ಹೊರಕೇರಿ ಸೇರಿದಂತೆ ಗಡಿನಾಡು ಕನ್ನಡ ಸೇನೆಯ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ಏನಿದು ₹250 ಕೋಟಿ ಅನುದಾನ?:

ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೆಳಗಾವಿಗೆ ಭೇಟಿ ನೀಡಿದ ವೇಳೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿ, ರಸ್ತೆ, ಕುಡಿಯುವ ನೀರು, ಒಳಚರಂಡಿ ಹಾಗೂ ಸೌಂದರ್ಯೀಕರಣ ಕಾಮಗಾರಿಗಳಿಗಾಗಿ ₹250 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಇದೇ ಮನವಿಗೆ ಪ್ರತಿಕ್ರಿಯೆಯಾಗಿ ಗಡಿನಾಡು ಕನ್ನಡ ಸೇನೆ, ಗಡಿ ವಿಚಾರದಲ್ಲಿ ಪಾಲಿಕೆ ಮೊದಲು ಸ್ಪಷ್ಟ ನಿಲುವು ಪ್ರಕಟಿಸಬೇಕು. ನಂತರವೇ ವಿಶೇಷ ಅನುದಾನ ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನೆರವಿಗೆ ಬಾರದೇ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ: ನಿಖಿಲ್‌ ಕುಮಾರಸ್ವಾಮಿ
ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ