ಹೊಸಪೇಟೆ: ಪ್ರಗತಿ ಪರಿಶೀಲನಾ ಸಭೆಗೆ ವಿವಿಧ ಇಲಾಖೆಗಳ ಪ್ರಗತಿ ವರದಿಯಲ್ಲಿ ಅವೈಜ್ಞಾನಿಕವಾಗಿ ಅಂಕಿಅಂಶಗಳನ್ನು ನಮೂದಿಸಿ ನೆಪಮಾತ್ರಕ್ಕೆ ಸಲ್ಲಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಆಡಳಿತಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಹಮ್ಮಿಕೊಂಡಿದ್ದಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಎಲ್ಲ ಆಸ್ಪತ್ರೆಗಳು, ಅಂಗನವಾಡಿ, ಸರ್ಕಾರಿ ಶಾಲೆಗಳು, ವಸತಿ ಶಾಲೆ ಸೇರಿದಂತೆ ವಸತಿ ನಿಲಯಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿಗೆ ಶೌಚಾಲಯ ಸ್ವಚ್ಛತೆ, ಕಿಟಕಿ ಮತ್ತು ಗಾಜುಗಳ ದುರಸ್ತಿ, ಬಾಗಿಲುಗಳ ರಿಪೇರಿ, ದುಸ್ಥಿತಿಯ ಸಿಂಕ್‌ಗಳು, ಆಸನ ವ್ಯವಸ್ಥೆ, ಅಡುಗೆ ಮನೆಯಲ್ಲಿ ಅವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ, ಫ್ಯಾನ್‌ಗಳು ಹೀಗೆ ಅನುದಾನದ ಕೊರತೆ ನೆಪ ಹೇಳದೇ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಲ್ಲ ಅಗತ್ಯಗಳನ್ನು ಪೂರೈಸಿ ಮೂಲಭೂತ ಸೌಲಭ್ಯಗಳನ್ನು ನೀಡಲು ಕರ್ತವ್ಯನಿರತರಾಗಬೇಕು. ಮುಂದಿನ ಬಾರಿ ಖುದ್ದು ಎಲ್ಲ ಹಾಸ್ಟೆಲ್, ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವೆ. ಸ್ವಚ್ಛತೆ ಮತ್ತು ಶಿಸ್ತುಬದ್ಧತೆ ಇದನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು. ನಿರ್ಲಕ್ಷಿಸಿದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.ಅಂಗನವಾಡಿ ಕೇಂದ್ರಗಳಲ್ಲಿ 6 ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳಿಗೆ ಮನೆಗೆ ಅಹಾರ ಸಾಮಗ್ರಿಗಳನ್ನು ವಿತರಿಸುವ ಜೊತೆಗೆ ಮಕ್ಕಳ ಪೌಷ್ಟಿಕ ಬೆಳವಣಿಗೆಯನ್ನು ಗಮನಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಬರುವ 3 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ ಅಗತ್ಯ ಆಟಿಕೆ ಸಾಮಗ್ರಿಗಳನ್ನು ಒದಗಿಸುವ ಜತೆಗೆ ಕೇಂದ್ರದಲ್ಲಿ ಮಕ್ಕಳಿಗೆ ಹೊರಾಂಗಣದಲ್ಲಿ ಆಡಲು ಚಿಕ್ಕ ಮೈದಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಹೊಸಪೇಟೆ ವ್ಯಾಪ್ತಿಯಲ್ಲಿ ಕೆಎಂಆರ್‌ಸಿ ಅನುದಾನದಲ್ಲಿ ಚಿಕ್ಕ ಪ್ಲೇಗ್ರೌಂಡ್ ನಿರ್ಮಿಸಬಹುದು. ವಿವಿಧ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಸ್ಥಳೀಯ ಸಂಘ ಸಂಸ್ಥೆ ಸಹಕಾರದಲ್ಲಿ ನಿರ್ಮಿಸಲು ಮುಂದಾಗಬೇಕು. ಅಂಗನವಾಡಿಗಳಲ್ಲಿ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಮಾದರಿ ಬೌದ್ಧಿಕ ಶಿಕ್ಷಣ ನೀಡಬೇಕು. ಹಾಗಾದರೇ ಮುಂದೆ ಅವರು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಾರೆ ಇಲ್ಲವಾದರೇ ಬಡಪೋಷಕರು ಸಾಲ ಮಾಡಿಯಾದರೂ ಖಾಸಗಿ ನರ್ಸರಿಗಳಿಗೆ ಸೇರಿಸಲು ಆಸಕ್ತಿ ವಹಿಸುತ್ತಾರೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಳಜಿಗೆ ಅಂಗನವಾಡಿ ಮತ್ತು ಆರೋಗ್ಯ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ಪಂಚಗ್ಯಾರಂಟಿ ಯೋಜನೆಗಳ ಸ್ಥಿತಿಗತಿ ಹಾಗೂ ಕ್ರಮವಹಿಸಬೇಕಾದ ಅಗತ್ಯತೆಗಳನ್ನು ಬಗ್ಗೆ ಚರ್ಚಿಸಲಾಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳು ಮತ್ತು ಪ್ರಗತಿಯನ್ನು ಚರ್ಚಿಸಲಾಯಿತು. ಮುಂದಿನ ಸಭೆಯಲ್ಲಿ ಅಂಕಿಅಂಶಗಳ ವರದಿಗಿಂತ ನಿಮ್ಮ ಕೆಲಸದ ಪ್ರಗತಿಯನ್ನು ಅನಾವರಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಮ್ ಷಾ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾ ಅಧಿಕಾರಿ ಅನುಪಮ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮತ್ತಿತರರಿದ್ದರು.
ಸಭೆಯಲ್ಲಿ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಕೃಷಿ ಇಲಾಖೆ ಜಂಟಿನಿರ್ದೇಶಕ ಡಿ.ಟಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ.ಜಿ.ಚಿದಾನಂದಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ವೈ.ಕಾಳೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ರವಿಕುಮಾರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.